ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Games | ಈಜು: ಮುಂದುವರಿದ ಪದಕ ಬೇಟೆ

Published 1 ನವೆಂಬರ್ 2023, 15:41 IST
Last Updated 1 ನವೆಂಬರ್ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಈಜುಪಟುಗಳು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿದ್ದಾರೆ. ಪುರುಷರ ಮತ್ತು ಮಹಿಳೆಯರ 4X200 ಮೀ. ಫ್ರೀಸ್ಟೈಲ್ ರಿಲೇ ತಂಡಗಳು ಬುಧವಾರ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡವು.

ಅನೀಶ್‌ ಎಸ್‌.ಗೌಡ, ಶಿವಾಂಕ್‌ ವಿಶ್ವನಾಥ್‌, ಶಾನ್‌ ಗಂಗೂಲಿ ಮತ್ತು ಶ್ರೀಹರಿ ನಟರಾಜ್‌ ಅವರನ್ನೊಳಗೊಂಡ ಪುರುಷರ ತಂಡ 7 ನಿ. 37.47 ಸೆ.ಗಳಲ್ಲಿ ಗುರಿ ತಲುಪಿತು. ದೆಹಲಿ ಮತ್ತು ಸರ್ವಿಸಸ್‌ ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು.

ಮಹಿಳೆಯರ ವಿಭಾಗದಲ್ಲಿ ಹಷಿಕಾ ರಾಮಚಂದ್ರ, ಶ್ರೀಚಾರಣಿ ತುಮು, ಶಿರಿನ್‌ ಮತ್ತು ಧೀನಿಧಿ ದೇಸಿಂಗು ಅವರಿದ್ದ ತಂಡ 8 ನಿ. 49.74 ಸೆ.ಗಳೊಂದಿಗೆ ಕೂಟ ದಾಖಲೆ ಸ್ಥಾಪಿಸಿ ಚಿನ್ನ ಗೆದ್ದಿತು.

ಹಷಿಕಾ, ಲಿನೇಶಾಗೆ ಬೆಳ್ಳಿ

ಮಹಿಳೆಯರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಹಷಿಕಾ ರಾಮಚಂದ್ರ (2 ನಿ. 22.20 ಸೆ.) ಬೆಳ್ಳಿ ತಂದುಕೊಟ್ಟರು. ಈ ವಿಭಾಗದ ಚಿನ್ನ ಅಸ್ಸಾಂನ ಆಶಾ ಚೌಧರಿ (2 ನಿ. 19.29 ಸೆ.) ಪಾಲಾಯಿತು.

ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಲಿನೇಶಾ (34.11 ಸೆ.) ಎರಡನೇ ಸ್ಥಾನ ಪಡೆದರು. ಚಿನ್ನ ಗೆದ್ದ ಪಂಜಾಬ್‌ನ ಚಾಹತ್‌ ಅರೋರಾಗೆ (34.09 ಸೆ.) ಅವರು ಪ್ರಬಲ ಪೈಪೋಟಿ ಒಡ್ಡಿದರು.

ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ವಿದಿತ್‌ ಎಸ್‌.ಶಂಕರ್‌ (29.07 ಸೆ.) ಕಂಚು ಜಯಿಸಿದರು.

ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕೇರಳದ ಸಜನ್‌ ಪ್ರಕಾಶ್ (1 ನಿ. 59.38 ಸೆ.) ಕೂಟ ದಾಖಲೆ ಸ್ಥಾಪಿಸಿದರು.

ನಾಲ್ಕನೇ ದಿನದ ಸ್ಪರ್ಧೆಗಳ ಅಂತ್ಯಕ್ಕೆ ಕರ್ನಾಟಕ ತಂಡ 20 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ರಾಜ್ಯದ ಸ್ಪರ್ಧಿಗಳು 10 ಚಿನ್ನ ಹಾಗೂ ತಲಾ ಐದು ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ. 9 ಪದಕಗಳನ್ನು ಗೆದ್ದಿರುವ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ಫುಟ್‌ಬಾಲ್‌ ತಂಡಕ್ಕೆ ಗೆಲುವು

ರಾಷ್ಟ್ರೀಯ ಕ್ರೀಡಾಕೂಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡ 1–0 ಗೋಲಿನಿಂದ ಗೋವಾ ತಂಡವನ್ನು ಮಣಿಸಿತು. ಆರ್‌.ವಿಶಾಲ್‌ ಅವರು (35ನೇ ನಿ.) ಗೆಲುವಿನ ಗೋಲು ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT