ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಜಾವೆಲಿನ್ ಥ್ರೋ: ಮೊದಲ ಎಸೆತದಲ್ಲೇ ಫೈನಲ್‌ಗೆ ನೀರಜ್ ಲಗ್ಗೆ

ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮಿಂಚಿದ ಹಾಲಿ ಚಾಂಪಿಯನ್‌ ಚೋಪ್ರಾ l ಫಿಟ್‌ನೆಸ್ ಕುರಿತ ಊಹಾಪೋಹಗಳಿಗೆ ತೆರೆ
ಸಿಡ್ನಿ ಕಿರಣ್
Published : 6 ಆಗಸ್ಟ್ 2024, 23:32 IST
Last Updated : 6 ಆಗಸ್ಟ್ 2024, 23:32 IST
ಫಾಲೋ ಮಾಡಿ
Comments

ಪ್ಯಾರಿಸ್: ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಬಗ್ಗೆ ಇದ್ದ ಊಹಾಪೋಹಗಳಿಗೆ  ತೆರೆ ಎಳೆದರು. ಒಲಿಂಪಿಕ್ ಕೂಟದ ಪುರುಷರ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು. 

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಈ ವರ್ಷವೂ ಚಾಂಪಿಯನ್‌ ಪಟ್ಟಕ್ಕೆ ನೆಚ್ಚಿನ ಅಥ್ಲೀಟ್ ಆಗಿದ್ದಾರೆ. ಮಂಗಳವಾರ ನಡೆದ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ 89.34 ಮೀಟರ್ಸ್ ದೂರ ಥ್ರೋ ಮಾಡಿ ಫೈನಲ್‌ಗೆ ಲಗ್ಗೆ ಇಟ್ಟರು.

ಹೋದ ವರ್ಷ ವಿಶ್ವ ಅಥ್ಲೆಟಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರು ಈಚೆಗೆ ತೊಡೆಯ ಸ್ನಾಯುವಿನ ನೋವಿನಿಂದ ಬಳಲಿದ್ದರು. ಅದರಿಂದಾಗಿ ಅವರು ಪ್ಯಾರಿಸ್‌ನಲ್ಲಿ ಭಾಗವಹಿಸುವ ಕುರಿತ ಚರ್ಚೆಗಳು ನಡೆದಿದ್ದವು. ಇದೀಗ ಚೋಪ್ರಾ ತಾವು ಈ ಬಾರಿಯೂ ಚಿನ್ನದ ಪದಕಕ್ಕೆ ಕೊರಳೊಡ್ಡುವ ಇರಾದೆಯನ್ನು ತೋರಿಸಿದರು. ಸ್ಟೇಡ್ ಡಿ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ತಮ್ಮ ಮೊದಲ ಎಸೆತದಲ್ಲಿಯೇ 89.34 ಮೀಟರ್ಸ್‌ ಸಾಧನೆ ಮಾಡಿದರು.  ಈ ಎಸೆತದ ನಂತರ ತಮ್ಮ  ತೋಳಗಲಿಸಿ ಎರಡೂ ಕೈಗಳನ್ನು ಎತ್ತಿ ಸಂಭ್ರಮಿಸಿದರು. ತಮ್ಮ ಗುರಿಸಾಧನೆ ಅಯಿತು ಎಂಬ ಸಂತಸ ಅವರ ಮುಖದಲ್ಲಿತ್ತು. 

ಇದು ಅವರ ಕ್ರೀಡಾಜೀವನದ ವೈಯಕ್ತಿಕ ಎರಡನೇ ಶ್ರೇಷ್ಠ ಥ್ರೋ ಆಗಿದೆ. 2022ರ ಜೂನ್‌ನಲ್ಲಿ ಅವರು 89.94 ಮೀ ದೂರ ಥ್ರೋ ಮಾಡಿದ್ದರು. 

ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಅವರು ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೇಕಬ್ ವಾಡ್ಲೆಚ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಅವರ ಪೈಪೋಟಿಯನ್ನು ಎದುರಿಸಲಿದ್ದಾರೆ. 

‘ಇದು ಅರ್ಹತಾ ಸುತ್ತು ಮಾತ್ರ. ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಇದು ಉತ್ತಮ ಹಾದಿಯಾಗಿದೆ. ಅಂದುಕೊಂಡ ಗುರಿಯನ್ನು ಸಾಧಿಸಿದ್ದಕ್ಕೆ ಸಂತಸವಾಗಿದೆ. ಮುಂದಿನ ಗುರಿ  ಚಿನ್ನದ ಪದಕವನ್ನು ಉಳಿಸಿಕೊಳ್ಳುವುದು. ಅರ್ಹತಾ ಸುತ್ತಿನಲ್ಲಿರುವ ಮನಸ್ಥಿತಿಗೂ ಮತ್ತು ಫೈನಲ್‌ಗೂ ವ್ಯತ್ಯಾಸವಿರುತ್ತದೆ. ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು ಉತ್ತಮ ಸಾಧನೆ. ಆದರೆ ಫೈನಲ್‌ನಲ್ಲಿ ಉತ್ತಮವಾದ ಸಾಧನೆ ಮಾಡುವುದು ಮುಖ್ಯವಾಗುತ್ತದೆ. ನಾನು ಫೈನಲ್ ಮೇಲೆ ಪೂರ್ಣವಾಗಿ ಚಿತ್ತ ನೆಟ್ಟಿರುವೆ’ ಎಂದು ಚೋಪ್ರಾ ಹೇಳಿದರು. 

ತಮ್ಮ ಗಾಯದ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಮಸ್ಯೆಗಳು ಇದ್ದವು. ಆದರೆ ಇಲ್ಲಿಗೆ ಬರುವ ಬಹಳ ಸಮಯದ ಮುನ್ನವೇ ಎಲ್ಲವನ್ನೂ ಪರಿಹರಿಸಿಕೊಳ್ಳಲಾಗಿದೆ. ಈಗ ಏನಿದ್ದರೂ ಫೈನಲ್ ಮೇಲೆ ನನ್ನ ಚಿತ್ತ’ ಎಂದರು. 

ನೀರಜ್ ಅವರು ಹೆಚ್ಚು ಬೆವರು ಹರಿಸದೇ ಫೈನಲ್ ತಲುಪಿ ನಿರಾಳರಾದರು. 

ಆದರೆ ಇದೇ ಅರ್ಹತಾ ಸುತ್ತಿನಲ್ಲಿದ್ದ  ಭಾರತದ ಇನ್ನೊಬ್ಬ ಸ್ಪರ್ಧಿ ಕಿಶೋರ್‌ ಕುಮಾರ್ ಜೇನಾ ತಮ್ಮ ಸಾಮರ್ಥ್ಯಕ್ಕೆ ತಕ್ಕ ಥ್ರೋ ಮಾಡುವಲ್ಲಿ ಸಫಲರಾಗಲಿಲ್ಲ. 80.73 ಮೀ ದೂರ ಥ್ರೋ ಮಾಡಿದ ಅವರು 18ನೇ ಸ್ಥಾನ ಪಡೆದರು. 

ಪಟ್ಟಿ 1 ಫೈನಲ್ ಪ್ರವೇಶಿಸಿದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT