ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕ್ಸಿಂಗ್‌: ಫೈನಲ್‌ಗೆ ನಿಖತ್‌, ಅಮಿತ್

Published 10 ಫೆಬ್ರುವರಿ 2024, 16:31 IST
Last Updated 10 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಸೋಫಿಯಾ (ಬಲ್ಗೇರಿಯಾ),: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್ ಮತ್ತು ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಅಮಿತ್ ಪಂಘಲ್ ಅವರು ಉತ್ತಮ ಪ್ರದರ್ಶನ ಮುಂದುವರಿಸಿ 75ನೇ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಫೈನಲ್‌ಗೆ ದಾಪುಗಾಲಿಟ್ಟರು. ಶನಿವಾರ ಭಾರತದ ಒಟ್ಟು ಆರು ಮಂದಿ ವಿವಿಧ ತೂಕ ವಿಭಾಗಗಳಲ್ಲಿ ಫೈನಲ್‌ಗೇರಿದ್ದಾರೆ.

50 ಕೆ.ಜಿ. ವಿಭಾಗದಲ್ಲಿ ನಿಖತ್ ಝರೀನ್ ಸೆಮಿಫೈನಲ್‌ನಲ್ಲಿ ಸ್ಥಳೀಯ ಸ್ಪರ್ಧಿ ಝ್ಲಾಟಿಸ್ಲಾವಾ ಚುಕನೋವಾ ಎದುರು ಎಚ್ಚರಿಕೆಯಿಂದ ಸೆಣಸಾಟ ಆರಂಭಿಸಿದರು. ಆದರೆ ಯಾವ ಸುತ್ತಿನಲ್ಲೂ ಹಿಡಿತ ಬಿಟ್ಟುಕೊಡದೇ ಅಂತಿಮವಾಗಿ 5–0ಯಿಂದ ಜಯಗಳಿಸಿದರು. ಭಾನುವಾರ ನಡೆಯುವ ಸ್ವರ್ಣ ಪದಕದ ಸೆಣಸಾಟದಲ್ಲಿ ಭಾರತದ ಬಾಕ್ಸರ್‌, ಉಜ್ಬೇಕಿಸ್ತಾನದ ಸಬಿನಾ ಬೊಬುಕುಲೊವಾ ಅವರನ್ನು ಎದುರಿಸಲಿದ್ದಾರೆ.

ಅಮಿತ್ ಪಂಘಲ್ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಟರ್ಕಿಯ ಗುಮುಸ್ ಸಮೆತ್ ಅವರನ್ನು 5–0 ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿದರು. ಅವರ ಫೈನಲ್ ಎದುರಾಳಿ ಕಜಕಸ್ತಾನದ ಸನ್ಜೊರ್ ತಷ್ಕೆನ್‌ಬೆ. ಕಜಕ್ ಸ್ಪರ್ಧಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.

ಅರುಂಧತಿ ಚೌಧರಿ ಅವರು ಮಹಿಳೆಯರ 66 ಕೆ.ಜಿ. ಸ್ಪರ್ಧೆಯಲ್ಲಿ ಸ್ಲೊವಾಕಿಯಾದ ಜೆಸಿಕಾ ಟಿಬೆಲೋವಾ ಅವರ ಮೇಲೆ 5–0 ಗೆಲುವು ಸಾಧಿಸಿದರು. ಅವರು ಫೈನಲ್‌ನಲ್ಲಿ ಹಾಲಿ ವಿಶ್ವ ಮತ್ತು ಏಷ್ಯನ್ ಚಾಂಪಿಯನ್ ಯಾಂಗ್ ಲಿಯು (ಚೀನಾ) ಎದುರು ಭಾನುವಾರ ಸೆಣಸಲಿದ್ದಾರೆ.

ಬರುನ್ ಸಿಂಗ್ ಶಾಗೊಲ್‌ಸೆಮ್ (ಪುರುಷರ 48 ಕೆ.ಜಿ ವಿಭಾಗ) ಭಾರತದ ಪಾರಮ್ಯ ಮುಂದುವರಿಸಿ ಅಲ್ಜೀರಿಯಾದ ಖೆನೌಸಿ ಕಮೆಲ್ ಅವರನ್ನು 5–0 ಒಮ್ಮತದ ತೀರ್ಪಿನಲ್ಲಿ ಮಣಿಸಿದರು.

ಸಚಿನ್ ಅವರು 57 ಕೆ.ಜಿ ವಿಭಾಗದಲ್ಲಿ ಅವರು ಉಕ್ರೇನ್‌ನ ಅಬ್ದುರೈಮೋವ್ ಐದರ್ ಅವರ ಎದುರು 4–1 ರಿಂದ ಜಯಗಳಿಸಿದರು. ಫೈನಲ್‌ನಲ್ಲಿ ಅವರು ಉಜ್ಬೇಕಿಸ್ತಾನದ ಶಾಖ್ಜೋದ್ ಮುಝಾಫರೊವ್ ಎದುರು ಸೆಣಸಾಡಲಿದ್ದಾರೆ. ರಜತ್‌ ಅವರಿಗೆ 67 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಜಾರ್ಜಿಯಾದ ಗುರುಲಿ ಲಾಶಾ ಅವರಿಂದ ವಾಕ್‌ಓವರ್‌ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT