ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು 'ಅವನಿ'

ಮನೀಷ್‌ ನರ್ವಾಲ್‌ಗೆ ಬೆಳ್ಳಿ ಬೆಡಗು, ಮೋನಾ, ಪ್ರೀತಿಗೆ ಕಂಚು
Published : 30 ಆಗಸ್ಟ್ 2024, 16:18 IST
Last Updated : 30 ಆಗಸ್ಟ್ 2024, 16:18 IST
ಫಾಲೋ ಮಾಡಿ
Comments

ಶತೋಹು: ನಿಖರ ಗುರಿಯಿಟ್ಟ ಅವನಿ ಲೇಖರ ಸತತ ಎರಡನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದರು. 

ಶುಕ್ರವಾರ ನಡೆದ ಮಹಿಳೆಯರ 10 ಮೀ ಏರ್‌ ರೈಫಲ್ (ಎಸ್‌ಎಚ್‌ 1) ಶೂಟಿಂಗ್ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕ ಗೆದ್ದರು. ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಶೂಟರ್ ಮೋನಾ ಅಗರವಾಲ್ ಅವರು ಕಂಚಿನ ಪದಕ ಗೆದ್ದರು. 

ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಅವನಿ ಸ್ವರ್ಣ ಸಾಧನೆ ಮಾಡಿದ್ದರು. 22 ವರ್ಷದ ಅವನಿ ಅವರು 249.7 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದರು.  ಇದರೊಂದಿಗೆ ಅವರು ಜಪಾನ್‌ನಲ್ಲಿ (249.6) ಮಾಡಿದ್ದ ದಾಖಲೆಯನ್ನು ಮೀರಿ ನಿಂತರು. 

37 ವರ್ಷದ ಮೋನಾ ಅವರು 228.7 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಮೋನಾ ಅವರು  ಶೂಟಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಶಾಟ್‌ ಪಟ್, ಪವರ್‌ಲಿಫ್ಟಿಂಗ್ ಮತ್ತು ವ್ಹೀಲ್‌ಚೇರ್ ವಾಲಿಬಾಲ್‌ನಲ್ಲಿ ಆಡಿದವರು. 

ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತದ ಇಬ್ಬರು ಶೂಟರ್‌ಗಳು ಒಂದೇ ಕೂಟದಲ್ಲಿ ಪದಕ ಜಯಿಸಿದ ಸಾಧನೆ ಮಾಡಿದರು. 

ಫೈನಲ್‌ನಲ್ಲಿ ಎಂಟು ಸ್ಪರ್ಧಿಗಳು ಇದ್ದರು. 

ಅವನಿ ಕಠಿಣ ಹಾದಿ

ಜೈಪುರದ ಅವನಿ ಅವರಿಗೆ ಈ ಬಾರಿಯ ಪ್ಯಾರಾಲಿಂಪಿಕ್ಸ್‌ ಸ್ಪರ್ಧೆಯ ಹಾದಿ ಸುಗಮವಾಗಿರಲಿಲ್ಲ. ಅನಾರೋಗ್ಯದಿಂದ ಬಳಲಿದ್ದರು. ಪಿತ್ತಕೋಶದ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅದರಿಂದಾಗಿ ಒಂದೂವರೆ ತಿಂಗಳು ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ತೆರಳಬೇಕಾಯಿತು.  ಇದರಿಂದಾಗಿ ಅವರ ದೇಹತೂಕದಲ್ಲಿ ತುಸು ಇಳಿಕೆಯೂ ಆಗಿತ್ತು. ಆದರೆ ಎಲ್ಲ ಸಮಸ್ಯೆಗಳ ನಡುವೆಯೂ ಅವರು ದೆಹಲಿಯ ಕರ್ಣಿ ಸಿಂಗ್ ರೇಂಜ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು. ದೈಹಿಕ ಹಾಗೂ ಮಾನಸಿಕವಾಗಿ ತಾವು ಫಿಟ್ ಆಗಿರುವುದಾಗಿ ಈಗ ಚಿನ್ನ ಗೆದ್ದು ಸಾಬೀತುಮಾಡಿದರು. 

ಅವರು ರಾಜಸ್ಥಾನ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಸಹಾಯಕ ಸಂರಕ್ಷಣಾಧಿಕಾರಿಯಾಗಿದ್ದಾರೆ. 

‘ದೇಶಕ್ಕಾಗಿ ಪದಕ ಜಯಿಸಿರುವುದು ಅಪಾರ ಸಂತಸ ತಂದಿದೆ. ನನ್ನ ತಂಡಕ್ಕೆ ಆಭಾರಿಯಾಗಿರುವೆ. ನನ್ನ ಕೋಚ್‌ಗಳು ಮತ್ತು ಪಾಲಕರು ನೀಡಿದ ಬೆಂಬಲಕ್ಕೆ ಚಿರಋಣಿಯಾದ್ದೇನೆ. ತರಬೇತಿಯ ಸಂದರ್ಭವು ಅತ್ಯಂತ ಸಕಾರಾತ್ಮಕವಾಗಿತ್ತು’ ಎಂದು ಅವನಿ ಹೇಳಿದ್ದಾರೆ. 

‘ಈ ಬಾರಿ ನನ್ನ ಮೇಲೆ ಅಪಾರ ನಿರೀಕ್ಷೆ ಇತ್ತು. ಆ ನಿರೀಕ್ಷೆಗಳೇ ನನಗೆ ಪ್ರೇರಣೆಯಾದವು. ತಾಂತ್ರಿಕ ಕೌಶಲಗಳಲ್ಲಿಯೂ ನಾನು ಬಹಳಷ್ಟು ಸುಧಾರಣೆ ಮಾಡಿಕೊಂಡಿದ್ದೇನೆ’ ಎಂದರು. 

ಪ್ರೀತಿ ಪಾಲ್ 
ಪ್ರೀತಿ ಪಾಲ್ 
ಮನೀಷ್ ನರ್ವಾಲ್ 
ಮನೀಷ್ ನರ್ವಾಲ್ 

ಎಸ್‌ಎಚ್‌ 1 ವಿಭಾಗ

ಪ್ಯಾರಾ ಕ್ರೀಡೆಯಲ್ಲಿ ಎಸ್‌ಎಚ್‌ 1 ವಿಭಾಗವೆಂದರೆ ಕಾಲು ಭುಜ ಮತ್ತು ದೇಹದ ಕೆಳಭಾಗವು ಊನವಾಗಿದ್ದವರು ಸ್ಪರ್ಧಿಸುತ್ತಾರೆ.  ಅವನಿ ಲೇಖರ್ ಅವರು 11 ವರ್ಷ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ  ನಡುವಿನ ಕೆಳಭಾಗದಲ್ಲಿ ಸ್ವಾಧೀನ ಕಳೆದುಕೊಂಡಿದ್ದರು. ಕಂಚು ಗೆದ್ದ ಮೋನಾ ಅಗರವಾಲ್ ಅವರು ಪೊಲಿಯೋ ಸಮಸ್ಯೆಯಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ. 

ಮನೀಷ್ ನರ್ವಾಲ್‌ಗೆ ಬೆಳ್ಳಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮನೀಷ್ ನರ್ವಾಲ್ ಅವರು ಈ ಬಾರಿ ಬೆಳ್ಳಿ ಪದಕ ಗೆದ್ದರು. ಪುರುಷರ 10 ಮೀ ಏರ್ ಪಿಸ್ತೂಲ್ (ಎಸ್‌.ಎಚ್‌ 1) ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದರು. 22 ವರ್ಷದ ಮನೀಷ್ ಅವರು ಒಂದು ಹಂತದಲ್ಲಿ ಚಿನ್ನದ ಪದಕ ಜಯಿಸುವ ಭರವಸೆ ಮೂಡಿಸಿದ್ದರು.  ಮನೀಷ್ ಅವರು 234.9 ಅಂಕಗಳನ್ನು ಗಳಿಸಿದರು. ಅವರನ್ನು ಹಿಂದಿಕ್ಕಿದ ದಕ್ಷಿಣ ಕೊರಿಯಾದ 37 ವರ್ಷದ ಜಿಯಾಂಗ್ಡು ಜೋ ಅವರು 237.4 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು.  ಚೀನಾದ ಚಾವೋ ಯಾಂಗ್ ಅವರು (214.3) ಅವರು ಕಂಚು ಗಳಿಸಿದರು.  ಕ್ರೀಡಾ ಹಿನ್ನೆಲೆ ಇರುವ ಕುಟುಂಬದಲ್ಲಿ ಜನಿಸಿದ್ದವರು ಮನೀಷ್. ಅವರು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ಗೌರವ ಗಳಿಸಿದ್ದಾರೆ.  ಇಲ್ಲಿ ಅವರು ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದರು.  ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನೀಷ್ 50 ಮೀ ಪಿಸ್ತೂಲ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಆದರೆ ಅಲ್ಲಿ 10 ಮೀ ವಿಭಾಗದಲ್ಲಿ ಪದಕ ಜಯಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಅದು ಸಾಧ್ಯವಾಗಿದೆ’ ಎಂದು ಮನೀಷ್ ಅವರ ತಂದೆ ದಿಲ್‌ಭಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ದಿಲ್‌ಭಾಗ್ ಅವರು ರಾಜ್ಯಮಟ್ಟದ ಫ್ರೀಸ್ಟೈಲ್ ಕುಸ್ತಿಪಟುವಾಗಿದ್ದರು. ಅವರ ಒಡೆತನದ ಯಂತ್ರ ಉತ್ಪಾದನೆ ಘಟಕವಿದೆ.  2016ರಲ್ಲಿ ಮನೀಷ್ ಶೂಟಿಂಗ್ ಆರಂಭಿಸಿದ್ದರು. ಕೆಲ ವರ್ಷಗಳ ನಂತರ ಕಿರಿಯ ಮಗ ಶಿವಾ ಕೂಡ ಶೂಟಿಂಗ್ ಕ್ರೀಡೆಯಲ್ಲಿ ತರಬೇತಿ ಪಡೆಯಲಾರಂಭಿಸಿದರು.  ‘ಮನೀಷ್ ಅವರ ಬಲಗೈ ಊನವಾಗಿದೆ. ಆದರೂ  ಅವರು ಕ್ರೀಡಾಪಟುವಾಗಬೇಕೆಂಬ ಆಸೆ ನನ್ನದಾಗಿತ್ತು. ಮನೀಷ್‌ಗೆ ಫುಟ್‌ಬಾಲ್ ಬಹಳ ಇಷ್ಟದ ಕ್ರೀಡೆಯಾಗಿತ್ತು. ಆದರೆ  ಅಂಗವೈಕಲ್ಯದಿಂದಾಗಿ ಅವರಿಗೆ ಫುಟ್‌ಬಾಲ್ ಸೂಕ್ತವಾಗುತ್ತಿರಲಿಲ್ಲವೆಂದು  ಶೂಟಿಂಗ್ ಆಯ್ಕೆ ಮಾಡಿಕೊಂಡರು’ ಎಂದು ದಿಲ್‌ಭಾಗ್ ಹೇಳಿದರು.

ಪ್ರೀತಿ ಪಾಲ್ ಕಂಚು–ಮಿಂಚು

ಪ್ಯಾರಿಸ್ (ಪಿಟಿಐ): ಭಾರತದ ಪ್ರೀತಿ ಪಾಲ್ ಅವರು ಪ್ಯಾರಾಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ವಿಭಾಗದಲ್ಲಿ ಮೊದಲ ಕಂಚಿನ ಪದಕ ಜಯಿಸಿದರು.  ಅವರು ಮಹಿಳೆಯರ 100 ಮೀಟರ್ಸ್ ಓಟ (ಟಿ35) ವಿಭಾಗದಲ್ಲಿ 14.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 3ನೇ ಸ್ಥಾನ ಪಡೆದರು.  1984ರಿಂದ ಇಲ್ಲಿಯವರೆಗೆ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಫೀಲ್ಡ್‌ ಸ್ಪರ್ಧೆಗಳಲ್ಲಿ ಪದಕಗಳು ಒಲಿದಿವೆ. ಆದರೆ ಟ್ರ್ಯಾಕ್‌ನಲ್ಲಿ ಇದೇ ಮೊದಲ ಬಾರಿ ಸಾಧನೆ ಒಲಿದು ಬಂದಿತು. ಉತ್ತರಪ್ರದೇಶದ ಮುಜಾಫರ್‌ನಗರದ ರೈತ ಕುಟುಂಬದ ಪ್ರೀತಿ ಈ ಸಾಧನೆ ಮಾಡಿದರು.  ಹೋದ ಮೇ ತಿಂಗಳಿನಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಕಂಚು ಗೆದ್ದು ಪ್ಯಾರಾಲಿಂಪಿಕ್ಸ್‌ಗೆ ಪ್ರೀತಿ ಅರ್ಹತೆ ಗಳಿಸಿದ್ದರು.  ಈ ವಿಭಾಗದಲ್ಲಿ ಚೀನಾ ಝೋಹು ಶಿಯಾ (13.58ಸೆ) ಮತ್ತು ಗಾವೊ ಕಿಂಕಿಯನ್ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿದರು. ಇವರಿಬ್ಬರೂ ಹೋದ ಬಾರಿ ಟೋಕಿಯೊದಲ್ಲಿಯೂ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದರು.  ಪ್ರೀತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದಾರೆ.   ‘ಇದು ನನ್ನ ಕ್ರೀಡಾ ಜೀವನದ ಚೊಚ್ಚಲ ಪ್ಯಾರಾಲಿಂಪಿಕ್ಸ್. ಆದರೂ ಪದಕ ಗೆದ್ದಿದ್ದು ಅಪಾರ ಅನಂದವಾಗಿದೆ. ಟ್ರ್ಯಾಕ್ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ಜಯಿಸಿಕೊಟ್ಟಿರುವುದು ಹೆಮ್ಮೆಯ ವಿಷಯ’ ಎಂದು ಪ್ರೀತಿ ಹೇಳಿದರು.  ಪ್ರೀತಿ ಅವರು 200 ಮೀಟರ್ಸ್ ಓಟದ (ಟಿ 35) ವಿಭಾಗದಲ್ಲಿಯೂ ಭಾಗವಹಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT