ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ಪುರುಷರ ತಂಡ ವಿಭಾಗದಲ್ಲಿ (Men's TT Team Event) ಸೋಲು ಅನುಭವಿಸಿರುವ ಭಾರತ ನಿರ್ಗಮಿಸಿದೆ.
ಇಂದು ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 0-3ರ ಅಂತರದಲ್ಲಿ ಸೋಲು ಕಂಡಿತು.
ಇದರೊಂದಿಗೆ ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಅವರನ್ನೊಳಗೊಂಡ ತಂಡವು ನಿರಾಸೆ ಅನುಭವಿಸಿದೆ.
ಮೊದಲು ನಡೆದ ಡಬಲ್ಸ್ ಪಂದ್ಯದಲ್ಲಿ ಹರ್ಮೀತ್ ದೇಸಾಯಿ ಹಾಗೂ ಮಾನವ್ ಠಕ್ಕರ್ ಜೋಡಿ, ಮಾ ಲಾಂಗ್ ಹಾಗೂ ಚೂಕಿನ್ ವಾಂಗ್ ಜೋಡಿ ವಿರುದ್ಧ 2-11, 3-11, 7-11ರ ಅಂತರದಲ್ಲಿ ಸೋಲು ಅನುಭವಿಸಿತು.
ಬಳಿಕ ನಡೆದ ಸಿಂಗಲ್ಸ್‌ನಲ್ಲಿ ಶರತ್ ಕಮಲ್ ಅವರು ಫ್ಯಾನ್ ಝೆಂಡಾಂಗ್ ವಿರುದ್ಧ ಮೊದಲ ಸೆಟ್ 11-9ರ ಅಂತರದಲ್ಲಿ ಗೆದ್ದರೂ ಬಳಿಕದ ಮೂರು ಗೇಮ್‌ಗಳಲ್ಲಿ 11-7, 11-7, 11-5ರ ಅಂತರದಲ್ಲಿ ಹಿನ್ನಡೆ ಅನುಭವಿಸಿ ಸೋಲನುಭವಿಸಿದರು.
ನಂತರ ನಡೆದ ಎರಡನೇ ಸಿಂಗಲ್ಸ್‌ನಲ್ಲಿ 24 ವರ್ಷದ ಮಾನವ್ ಅವರು ಚೂಕಿನ್ ವಿರುದ್ಧ 9-11, 6-11, 9-11ರ ಅಂತರದಲ್ಲಿ ಮಣಿದರು.
ಸೋಮವಾರ ಮಹಿಳೆಯರ ತಂಡ ವಿಭಾಗದಲ್ಲಿ ತನಗಿಂತಲೂ ಮೇಲಿನ ಕ್ರಮಾಂಕದ ರುಮೇನಿಯಾ ವಿರುದ್ಧ ರೋಚಕ ಹಣಾಹಣಿಯನ್ನು 3-2ರಿಂದ ಗೆದ್ದಿದ್ದ ಭಾರತ ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು. ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಹಾಗೂ ಅರ್ಚನಾ ಕಾಮತ್ ಭಾರತ ತಂಡದಲ್ಲಿದ್ದಾರೆ.