ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಫೈನಲ್‌ನಲ್ಲಿ ಅನರ್ಹಗೊಂಡಿರುವ ವಿನೇಶಾ ಫೋಗಟ್ ಅವರಿಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೂರ್ತಿದಾಯಕ ಸಂದೇಶ ಹಂಚಿಕೊಂಡಿದ್ದಾರೆ.
'ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅನರ್ಹಗೊಂಡಿರುವುದು ನಿಜಕ್ಕೂ ದುರದೃಷ್ಟಕರ. ವಿನೇಶಾ ಅವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ವಿನೇಶಾ ಅವರ ಸ್ಥೈರ್ಯ, ಪುಟಿದೇಳಬಲ್ಲ ಗುಣ ಹಾಗೂ ಅರ್ಪಣಾ ಮನೋಭಾವ ಸದಾ ದೇಶವನ್ನು ಪ್ರೇರೆಪಿಸುತ್ತದೆ' ಎಂದು ಹೇಳಿದ್ದಾರೆ.
'ನೆನಪಿಡಿ, ಈ ಒಂದು ಕ್ಷಣದಿಂದಾಗಿ ನೀವು ದೇಶಕ್ಕಾಗಿ ಮಾಡಿದ ಅಪಾರ ಸಾಧನೆ ಹಾಗೂ ಹೆಮ್ಮೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಧೈರ್ಯವಾಗಿರು ವಿನೇಶಾ, ನಿಮ್ಮ ಮೇಲೆ ಹಾಗೂ ನಿಮ್ಮ ಅದ್ಭುತ ಪಯಣದಲ್ಲಿ ನಮಗೆ ನಂಬಿಕೆಯಿದೆ. ನೀವು ಎಂದೆಂದಿಗೂ ದೇಶದ ಚಾಂಪಿಯನ್' ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ತೂಕ ಹೆಚ್ಚಿದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶಾ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ಪದಕ ನಷ್ಟವಾಗಿದೆ.
ಈ ಮೊದಲು ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶಾ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.