ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಮಾಸ್ಟರ್ಸ್‌ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಸೇನ್ ಮೇಲೆ ನಿರೀಕ್ಷೆ

Published 13 ನವೆಂಬರ್ 2023, 16:21 IST
Last Updated 13 ನವೆಂಬರ್ 2023, 16:21 IST
ಅಕ್ಷರ ಗಾತ್ರ

ಕುಮಾಮೊಟೊ, ಜಪಾನ್: ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯಸೇನ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಜಪಾನ್‌ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಬಳಿಕ ಬೆನ್ನುನೋವಿಗಾಗಿ ವಿಶ್ರಾಂತಿ ಪಡೆದಿದ್ದ 31 ವರ್ಷದ ಪ್ರಣಯ್‌, ಕಳೆದ ತಿಂಗಳು ನಡೆದ ಡೆನ್ಮಾರ್ಕ್ಸ್‌ ಓಪನ್‌ ಮತ್ತು ಫ್ರೆಂಚ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು.

‘ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಈಗಾಗಲೇ ತರಬೇತಿಯನ್ನು ಆರಂಭಿಸಿದ್ದೇನೆ. ಆಟಗಾರರಾಗಿ ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ’ ಎಂದು ಪ್ರಣಯ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಣಯ್ ಅವರು ಇಲ್ಲಿ ಮೊದಲ ಎರಡು ಸುತ್ತುಗಳಲ್ಲಿ ಎದುರಾಳಿಗಳನ್ನು ಸೋಲಿಸಿದರೆ, ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ಎರಡನೇ ಶ್ರೇಯಾಂಕದ ಇಂಡೊನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಅವರ ಸವಾಲು ಎದುರಾಗುವ ಸಾಧ್ಯತೆ ಇದೆ.

ಮುಂದಿನ ವರ್ಷದ ಒಲಿಂಪಿಕ್ ಅರ್ಹತಾ ಅವಧಿಯು 2023 ಮೇ 1ರಿಂದ 2024ರ ಏಪ್ರಿಲ್ 28ರವರೆಗೆ ಚಾಲ್ತಿಯಲ್ಲಿರುವ ಕಾರಣ, ಈ ಟೂರ್ನಿಯಲ್ಲಿ ಆಟಗಾರರಿಗೆ ತಮ್ಮ ರ‍್ಯಾಂಕಿಂಗ್‌ ಉತ್ತಮಪಡಿಸಲು ಅವಕಾಶವಿದೆ. ವಿಶ್ವ ರ‍್ಯಾಂಕಿಂಗ್‌ನ ಟಾಪ್‌ 16 ಆಟಗಾರರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಪ್ರಸ್ತುತ 8ನೇ ರ‍್ಯಾಂಕ್ ಹೊಂದಿರುವ ಪ್ರಣಯ್‌ ಸುರಕ್ಷಿತ ಸ್ಥಾನದಲ್ಲಿದ್ದರೆ, ಸೇನ್‌ ಮತ್ತು ಶ್ರೀಕಾಂತ್‌ ಕ್ರಮವಾಗಿ 17 ಮತ್ತು 23ನೇ ಕ್ರಮಾಂಕದಲ್ಲಿದ್ದಾರೆ.

ಲಕ್ಷ್ಯ ಸೇನ್‌ ಅವರು ಜುಲೈನಲ್ಲಿ ಕೆನಡಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಬಳಿಕ ಲಯವನ್ನು ಕಳೆದುಕೊಂಡಿದ್ದು, ಈ ಟೂರ್ನಿಯಲ್ಲಿ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಅವರು ಕಳೆದ‌ ನಾಲ್ಕೂ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇಲ್ಲಿ ಅವರು ಮೂರನೇ ಶ್ರೇಯಾಂಕದ ಆಟಗಾರ ಕೊಡೈ ನರೋಕಾ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಮತ್ತು ಪ್ರಿಯಾಂಶು ರಾಜಾವತ್‌ ಅವರೂ ಉತ್ತಮ ಪ್ರದರ್ಶನ ವಿಶ್ವಾಸದಲ್ಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ಟ್ ವಿರುದ್ಧ ಸೆಣಸಾಡುವರು. ಎಂಟನೇ ಕ್ರಮಾಂಕದ ಸಿಂಧು ಅವರು ಎದುರಾಳಿ ಆಟಗಾರ್ತಿ ವಿರುದ್ಧ 6–1ರ ಗೆಲುವಿನ ದಾಖಲೆ ಹೊಂದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಭಾರತದ ಜೋಡಿ ಸಾತ್ವಿಕ್‌ರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಎಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ಅಭಿಯಾನ ಆರಂಭಿಸುವರು.

ಪಿ.ವಿ. ಸಿಂಧು
ಪಿ.ವಿ. ಸಿಂಧು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT