ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್: ಈಗಲೇ ಫೇವರಿಟ್‌ ಎನ್ನಲಾರೆ– ಕೋಚ್ ಬಿ.ಸಿ ರಮೇಶ್

Published 13 ಜನವರಿ 2024, 20:47 IST
Last Updated 13 ಜನವರಿ 2024, 20:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಅರ್ಧದಷ್ಟು ಪಂದ್ಯಗಳು ಶುಕ್ರವಾರ ಮುಕ್ತಾಯಗೊಂಡಿವೆ. ಕಳೆದ ಬಾರಿ ಎರಡನೇ ಸ್ಥಾನ ಗಳಿಸಿದ್ದ ಪುಣೇರಿ ಪಲ್ಟನ್ ತಂಡ ಸೀಸನ್‌ 10ರಲ್ಲಿ ಅಮೋಘ ಪ್ರದರ್ಶನ ನೀಡಿದೆ. ಆಡಿದ 11 ಪಂದ್ಯಗಳಲ್ಲಿ ಹತ್ತನ್ನು ಗೆದ್ದು ಪುಣೆಯ ತಂಡ ಮೊದಲ ಬಾರಿ ಚಾಂಪಿಯನ್ ಆಗುವ ನಿಟ್ಟಿನಲ್ಲಿ ದಾಪುಗಾಲನ್ನು ಇಟ್ಟಿದೆ.

ತಂಡದಲ್ಲಿ ಹೊಂದಾಣಿಕೆ, ಆಟಗಾರರ ಆಲ್‌ರೌಂಡ್‌ ಪ್ರದರ್ಶನ, ರೈಡಿಂಗ್, ಟ್ಯಾಕ್ಲಿಂಗ್‌ನಲ್ಲಿ ಸಮರ್ಥ ಆಟಗಾರರು ಇರುವುದರಿಂದ ಈ ತಂಡ ಹೆಚ್ಚಿನ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದೆ. ಲೀಗ್‌ನಲ್ಲೇ ಹೆಚ್ಚು ಟ್ಯಾಕ್ಲಿಂಗ್‌ ಪಾಯಿಂಟ್ಸ್‌, ಹೆಚ್ಚು ಆಲೌಟ್‌ ಪಾಯಿಂಟ್ಸ್‌ ಗಳಿಸಿರುವುದು ಪುಣೇರಿ ತಂಡದ ಹೆಗ್ಗಳಿಕೆ.

‘ನಿಜ, ಇದುವರೆಗಿನ ನಮ್ಮ ತಂಡದ ಪ್ರದರ್ಶನ ಚೆನ್ನಾಗಿದೆ. ಆದರೆ ಈಗಲೇ ನಾವು ಫೇವರಿಟ್‌ ಎನ್ನುವುದಿಲ್ಲ. ಆಡಲು ಇನ್ನೂ 11 ಪಂದ್ಯಗಳಿವೆ. ಮುಂದಿನ 7–8 ಪಂದ್ಯಗಳು ಮಹತ್ವದ್ದು’ ಎನ್ನುತ್ತಾರೆ ತಂಡದ ಕೋಚ್‌, ಕನ್ನಡಿಗ ಬಿ.ಸಿ.ರಮೇಶ್. ಜೈಪುರದಿಂದ ‘ಪ್ರಜಾವಾಣಿ’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಅವರು ತಂಡದ ಇದುವರೆಗಿನ ಪಯಣದ ಮಾಹಿತಿ ನೀಡಿದರು.

‘ನಾಯಕ ಅ‌ಸ್ಲಂ ಇನಾಮದಾರ್, ಮೋಹಿತ್‌ ಗೋಯತ್, ಪಂಕಜ್ ಮೋಹಿತೆ ಸೇರಿದಂತೆ ತಂಡದಲ್ಲಿ ಆರು ಪರಿಣತ ರೈಡರ್‌ಗಳಿದ್ದಾರೆ. ರಕ್ಷಣೆ (ಕಾರ್ನರ್‌ ಮತ್ತು ಕವರ್‌) ಆಟಗಾರರು  ಚೆನ್ನಾಗಿದ್ದು, ರೈಡಿಂಗ್‌ನಲ್ಲೂ ಪಾಯಿಂಟ್ಸ್‌ ಗಳಿಸುತ್ತಿದ್ದಾರೆ. ರೈಡರ್‌ಗಳು ಟ್ಯಾಕ್ಲಿಂಗ್ ನಿಭಾಯಿಸುತ್ತಾರೆ. ಮೊಹಮ್ಮದ್‌ರೇಝಾ ಶಾಡ್ಲುಯಿ ಚಿಯಾನೆ ಅವರು ಪ್ರಮುಖ ರಕ್ಷಣೆ ಆಟಗಾರ. ಆದರೆ ರೈಡಿಂಗ್ ಅವಕಾಶ ಸಿಕ್ಕಾಗ ಅದನ್ನು ಸಮರ್ಥವಾಗಿ ಬಳಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಅವರ ಈ ಸಾಮರ್ಥ್ಯ ಗಮನಿಸಿದ್ದೆ’ ಎಂದರು. ಯುವ ಆಟಗಾರ ಮೋಹಿತ್ ಆಲ್‌ರೌಂಡರ್‌ ಆಗಿ ರೂಪುಗೊಳ್ಳುತ್ತಿದ್ದಾರೆ. ಆ್ಯಂಕಲ್‌ ಹೋಲ್ಡ್‌ ಕೌಶಲದ ಜೊತೆಗೆ ‘ಚೇಸಿಂಗ್’ ಪರಿಣತಿಯನ್ನೂ ತೋರಿಸಿದ್ದಾರೆ.

ಪಿಕೆಎಲ್‌ ಬಿಡ್‌ನಲ್ಲಿ ಇರಾನ್‌ನ ಮೊಹಮ್ಮದ್‌ರೇಝಾ ಅವರು ₹2.35 ಕೋಟಿ ಮೊತ್ತಕ್ಕೆ ಪುಣೇರಿ ಪಾಲಾಗಿದ್ದರು. ವಿದೇಶಿ ಆಟಗಾರನೊಬ್ಬ ಗಳಿಸಿದ ದಾಖಲೆ ಮೊತ್ತ ಇದು. ಈ ಋತುವಿನಲ್ಲಿ ಟ್ಯಾಕ್ಲಿಂಗ್ ವಿಭಾಗದಲ್ಲಿ ಅವರೇ 43 ಪಾಯಿಂಟ್‌ಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಇದೇ ತಂಡದ ಗೌರವ್ ಖತ್ರಿ ಅವರು 37 ಪಾಯಿಂಟ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

‘ಲೀಗ್‌ಗೆ ಮೊದಲು ಒಂದು ತಿಂಗಳ ಶಿಬಿರ ನಡೆಸಿದ್ದೆವು. ಪಂದ್ಯದಲ್ಲಿ ಎದುರಾಗಬಹುದಾದ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಅಭ್ಯಾಸ ಮಾಡುತ್ತಿದ್ದೆವು. ವಾರಕ್ಕೆ ಎರಡು ದಿನ ಪಂದ್ಯಗಳನ್ನು ನಡೆಸಿದ್ದೆವು. ಹುಡುಗರು ಗಮನವಿಟ್ಟು ಆಡಲು ಶುರು ಮಾಡಿದರು’ ಎಂದು ರಮೇಶ್ ವಿವರಿಸಿದರು.

ಅಂತರರಾಷ್ಟ್ರೀಯ ಆಟಗಾರ ರಮೇಶ್ ಪ್ರಕಾರ ಲೀಗ್‌ನಲ್ಲಿ ಪ್ರಬಲ ಸವಾಲು ನೀಡಬಲ್ಲ ಇನ್ನೊಂದು ತಂಡ ವೆಂದರೆ, ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್‌. ಸದ್ಯ ಈ ತಂಡ ಲೀಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

ಏಳನೇ ಋತುವಿನಲ್ಲಿ (2019) ಬೆಂಗಾಲ್‌ ವಾರಿಯರ್ಸ್‌ ರಮೇಶ್ ತರಬೇತಿಯಡಿ ಚಾಂಪಿಯನ್ ಆಗಿತ್ತು. ಅದಕ್ಕೆ ಹಿಂದಿನ ವರ್ಷ, ಬೆಂಗಳೂರು ತಂಡ ಪಿಕೆಎಲ್‌ ಗೆದ್ದ ಸಂದರ್ಭದಲ್ಲಿ ಸಹಾಯಕ ಕೋಚ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT