ಶಾತೋಹು: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಏರ್‌ಪಿಸ್ತೂಲ್ ಎಸ್‌ಎಚ್1 10 ಮೀಟರ್ ವಿಭಾಗದಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ ಶನಿವಾರ ಕಂಚಿನ ಪದಕ ಜಯಿಸಿದ್ದಾರೆ. ಆ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ನಾಲ್ಕು ಪದಕಗಳು ಲಭಿಸಿವೆ.
ಅಂತಿಮ ಸುತ್ತಿನ ಆಯ್ಕೆಗೆ ನಡೆದ ಪಂದ್ಯದಲ್ಲಿ ರುಬಿನಾ ಅವರು 8 ಜನರಲ್ಲಿ ಏಳನೆಯವರಾಗಿದ್ದರು. ವಿಶ್ವ ದಾಖಲೆ ಹೊಂದಿರುವವರನ್ನೂ ಒಳಗೊಂಡು ಜಗತ್ತಿನ ಸರ್ವಶ್ರೇಷ್ಠ ಶೂಟರ್‌ಗಳೊಂದಿಗೆ ನಿಕಟ ಪೈಪೋಟಿ ನೀಡಿದ 25 ವರ್ಷದ ರುಬಿನಾ, 211.1 ಅಂಕಗಳನ್ನು ಗಳಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಇರಾನ್‌ನ ಜವನ್‌ಮರ್ಡಿ ಸರೆ ಅವರು ಸತತ ಮೂರನೇ ಒಲಿಂಪಿಕ್ಸ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಅವರು 236.8 ಅಂಕಗಳನ್ನು ಗಳಿಸಿದರು. ವಿಶ್ವ ದಾಖಲೆ ಹೊಂದಿರುವ ಟರ್ಕಿಯ ಓಝಾನ್ ಆಯ್ಸೆಲ್ ಅವರು 231.1 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮಧ್ಯಪ್ರದೇಶದ ಜಬಲ್‌ಪುರದ ರುಬಿನಾ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಮೊದಲ ಪಿಸ್ತೂಲ್ ಶೂಟರ್ ಎಂದೆನಿಸಿಕೊಂಡಿದ್ದಾರೆ. ಕಂಚಿನ ಪದಕ ಜಯಿಸುವ ಮೂಲಕ ಭಾರತಕ್ಕೆ ಶೂಟಿಂಗ್‌ನಲ್ಲಿ ನಾಲ್ಕು ಹಾಗೂ ಒಟ್ಟಾರೆ ಐದು ಪದಕಗಳು ಲಭಿಸಿದಂತಾಗಿದೆ.
ಪ್ಯಾರಿಸ್‌ಗೆ ತೆರಳಲು ಭಾರತ ತಂಡ ಅಣಿಯಾದ ಕೆಲವೇ ದಿನಗಳ ಮೊದಲು ವೈಲ್ಡ್ ಕಾರ್ಡ್ ಮೂಲಕ ರುಬಿನಾ ತಂಡದಲ್ಲಿ ಸ್ಥಾನ ಗಳಿಸಿದರು.