ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದ ಜತೆ ಮಹಿಳಾ ಕೋಚ್‌ ಕಡ್ಡಾಯ: ಸಾಯ್‌ ಸೂಚನೆ

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸಾಯ್‌ ಸೂಚನೆ
Last Updated 15 ಜೂನ್ 2022, 12:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧ ಭಾಗಗಳಿಗೆ ಅಥವಾ ವಿದೇಶ ಪ್ರವಾಸಕ್ಕೆ ತೆರಳುವ ಕ್ರೀಡಾ ತಂಡದಲ್ಲಿ ಮಹಿಳಾ ಸ್ಪರ್ಧಿಗಳಿದ್ದರೆ, ಆ ತಂಡದ ಜತೆ ಮಹಿಳಾ ಕೋಚ್‌ವೊಬ್ಬರು ಕಡ್ಡಾಯವಾಗಿ ಇರಬೇಕು ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸೂಚಿಸಿದೆ.

ಮಹಿಳಾ ಸೈಕ್ಲಿಸ್ಟ್‌ ಮತ್ತು ಸೇಲಿಂಗ್‌ ಸ್ಪರ್ಧಿಯೊಬ್ಬರು ತಮ್ಮ ಕೋಚ್‌ಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಬೆನ್ನಲ್ಲೇ, ಸಾಯ್‌ ಈ ತೀರ್ಮಾನ ತೆಗೆದುಕೊಂಡಿದೆ.

ಸಾಯ್ ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ಅವರು 15ಕ್ಕೂ ಅಧಿಕ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಅಧಿಕಾರಿಗಳ ಜತೆ ಈ ಸಂಬಂಧ ಸೋಮವಾರ ಸಭೆ ನಡೆಸಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತಂಡವನ್ನು ಕಳುಹಿಸುವಾಗ ಹೊಸ ನಿಯಮ ಪಾಲಿಸಬೇಕು ಎಂಬ ಸೂಚನೆ ನೀಡಿದ್ದಾರೆ.

’ದೇಶ ಮತ್ತು ವಿದೇಶ ಪ್ರವಾಸಕ್ಕೆ ತೆರಳುವ ತಂಡದಲ್ಲಿ ಮಹಿಳಾ ಸ್ಪರ್ಧಿಗಳಿದ್ದರೆ, ಮಹಿಳಾ ಕೋಚ್‌ ಕೂಡಾ ಕಡ್ಡಾಯವಾಗಿ ತೆರಳಬೇಕು‘ ಎಂದು ಸಾಯ್‌ ಹೊರಡಿಸಿದ ಪ್ರಕಟಣೆ ತಿಳಿಸಿದೆ.

ದೇಶ ಅಥವಾ ವಿದೇಶಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ಪುರುಷ ಮತ್ತು ಮಹಿಳಾ ’ಮೇಲ್ವಿಚಾರಣೆ ಅಧಿಕಾರಿ‘ಯನ್ನು ನೇಮಕ ಮಾಡಬೇಕು ಎಂದೂ ಹೇಳಿದೆ.

’ತರಬೇತಿ ಅವಧಿಯಲ್ಲಿ ಕ್ರೀಡಾಪಟುಗಳು ಮತ್ತು ಇತರ ಸಿಬ್ಬಂದಿ ಜತೆ ನಿರಂತರ ಸಂಪರ್ಕದಲ್ಲಿರುವುದು ಆ ಅಧಿಕಾರಿಯ ಕೆಲಸವಾಗಿರುತ್ತದೆ. ಸಾಯ್‌ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ, ಅದನ್ನು ತಕ್ಷಣದಲ್ಲೇ ಸಂಬಂಧಪಟ್ಟ ಕ್ರೀಡಾ ಫೆಡರೇಷನ್‌ನ ಅಧಿಕಾರಿಯ ಗಮನಕ್ಕೆ ತರಬೇಕು‘ ಎಂದಿದೆ.

ಸ್ಲೊವೇನಿಯ ಪ್ರವಾಸದ ವೇಳೆ ರಾಷ್ಟ್ರೀಯ ಸೈಕ್ಲಿಂಗ್‌ ಕೋಚ್ ಆರ್‌.ಕೆ.ಶರ್ಮ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸೈಕ್ಲಿಸ್ಟ್‌ವೊಬ್ಬರು ಇತ್ತೀಚೆಗೆ ಆರೋಪಿಸಿದ್ದರು. ಆ ಬಳಿಕ ಅವರ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಿಸಿದ್ದರು. ಶರ್ಮ ಜತೆಗಿನ ಒಪ್ಪಂದನ್ನು ಸಾಯ್‌ ರದ್ದುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT