ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್: ಹೈಜಂಪರ್‌ ಶರದ್ ಕುಮಾರ್ ಸಾಧನೆಗೆ ಕಣ್ಣೀರಾದ ಉಕ್ರೇನ್ ಕೋಚ್

Published 4 ಸೆಪ್ಟೆಂಬರ್ 2024, 13:56 IST
Last Updated 4 ಸೆಪ್ಟೆಂಬರ್ 2024, 13:56 IST
ಅಕ್ಷರ ಗಾತ್ರ

ಪ್ಯಾರಿಸ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಷ್ಯನನ್ನು ನೋಡದ ತರಬೇತುದಾರ, ಪ್ಯಾರಾಲಿಂಪಿಕ್ಸ್‌ನಲ್ಲಿನ ಸಾಧನೆ ಕಂಡು ಭಾವುಕರಾಗಿದ್ದಾರೆ. 

ಎತ್ತರ ಜಿಗಿತದಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ಶರದ್ ಕುಮಾರ್ ಅವರ ತರಬೇತುದಾರ ಉಕ್ರೇನ್‌ನ ನಿಕಿತಿನ್‌ ಯವ್ಹೆನ್‌ ಅವರು ಕಳೆದ ಎರಡು ವರ್ಷಗಳಿಂದ ದೇಶ ಬಿಡದ ಪರಿಸ್ಥಿತಿಯಲ್ಲಿದ್ದಾರೆ. ಆದರೆ 32 ವರ್ಷದ ಕುಮಾರ್ ಅವರು ಟಿ63 ವಿಭಾಗದಲ್ಲಿ 1.88 ಮೀಟರ್ ಎತ್ತರ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ ಎಂದು ತಿಳಿದ ನಂತರ ಗುರುವಿನ ಸಂತಸಕ್ಕೆ ಪಾರವೇ ಇರಲಿಲ್ಲ. 

ಇದೇ ಸ್ಪರ್ಧೆಯಲ್ಲಿ ಅಮೆರಿಕದ ಫ್ರೀಚ್ ಎಝ್ರಾ ಅವರು 1.94 ಮೀಟರ್ ಎತ್ತರ ಜಿಗಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮರಿಯಪ್ಪನ್ ತಂಗವೇಲು 1.85 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಪಡೆದರು. ಕುಮಾರ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಟಿ63 ವಿಭಾಗದಲ್ಲಿ ಆಥ್ಲೀಟ್‌ ಒಬ್ಬರು ಮಂಡಿ ಅಥವಾ ಕಾಲಿನ ಸಮಸ್ಯೆ ಎದುರಿಸುತ್ತಿರುವವರು ಒಂದೇ ಪ್ರಯತ್ನದಲ್ಲಿ ಮಾಡುವ ಸಾಧನೆಯಾಗಿದೆ.

ಯವ್ಹೆನ್‌ ಅವರು ಉಕ್ರೇನ್‌ ಖಾರ್ಕೀವ್ ನಿವಾಸಿ. 2017ರಿಂದಲೂ ಶರದ್ ಕುಮಾರ್್ ಅವರು ಇವರ ಬಳಿಯೇ ತರಬೇತಿ ಪಡೆಯುತ್ತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ 2021ರವರೆಗೂ ಶರದ್ ಅವರಿಗೆ ಫಿಲಿಪಿನ್ಸ್‌ನಲ್ಲಿ ಯವ್ಹೆನ್ ತರಬೇತಿ ನೀಡಿದ್ದರು.

‘ಕಳೆದ ರಾತ್ರಿ ನಾನು ತರಬೇತುದಾರ ಯವ್ಹೆನ್‌ ಅವರೊಂದಿಗೆ ಮಾತನಾಡಿದೆ. ನಂತರ ಅವರೊಂದು ಆಡಿಯೊ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ಅವರು ಧ್ವನ ಗದ್ಗಿತವಾಗಿತ್ತು. ಯುದ್ಧ ನನ್ನ ಆಟದ ಮೇಲೂ ಪರಿಣಾಮ ಬೀರಿದೆ. 2022ರ ಫೆಬ್ರುವರಿಯಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭಗೊಂಡ ನಂತರ ನಮ್ಮಿಬ್ಬರ ಭೇಟಿ ಸಾಧ್ಯವಾಗಿಲ್ಲ. ಈ ನಡುವೆ ಅವರೊಂದಿಗೆ ನಿತ್ಯವೂ ಆನ್‌ಲೈನ್ ಮೂಲಕ ಸಂವಾದ ನಡೆಸಿ ಮಾರ್ಗದರ್ಶನ ಪಡೆಯುತ್ತಿದ್ದೆ’ ಎಂದು ಶರದ್ ಹೇಳಿದ್ದಾರೆ.

'ಯವ್ಹೆನ್ ಮನೆಯಲ್ಲಿ ಯಾರೂ ಇಲ್ಲ. ಅವರ ಮಕ್ಕಳು ಯುದ್ಧ ಭೂಮಿಯಲ್ಲಿದ್ದಾರೆ. ಅವರು ನಿಜಕ್ಕೂ ಸಂಕಷ್ಟದಲ್ಲಿದ್ದಾರೆ. ಆದರೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಪದಕ ಗೆಲ್ಲುವಂತೆ ಮಾಡಿತು’ ಎಂದಿದ್ದಾರೆ.

ಯವ್ಹೆನ್ ಅವರು ಈ ಮೊದಲು ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿದ್ದರು. ಇವರು ಬಿಹಾರ ಮೂಲದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು ಶರದ ಕುಮಾರ್ ಅವರಿಗೆ ಮಾರ್ಗದರ್ಶನ ಮಾಡಿದ್ದರು. ಶರದ್ ಅವರು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳ ವಿಷಯ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT