ಹಾಂಗ್‌ಝೌ: ಭಾರತದ ಜ್ಯೋತಿ ಸುರೇಖಾ ಹಾಗೂ ಓಜಸ್ ದೇವತಾಳೆ ಅವರು ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಬುಧವಾರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಈ ಜೋಡಿ, ದಕ್ಷಿಣ ಕೊರಿಯಾ ಸೊ ಚಾಯಿವೊನ್ ಮತ್ತು ಜೂ ಜಾಯಿಹೂನ್ ಎದುರು ವಿರುದ್ಧ 159–158 ಅಂತರದಲ್ಲಿ ಗೆಲುವು ಸಾಧಿಸಿತು.
ಉಭಯ ತಂಡಗಳು ಮೊದಲ ಮೂರು ಸುತ್ತುಗಳಲ್ಲಿ ಕ್ರಮವಾಗಿ 40–39, 40–40 ಮತ್ತು 39–40 ಪಾಯಿಂಟ್ ಗಳಿಸಿದವು. ಹೀಗಾಗಿ ಮೂರನೇ ಸುತ್ತಿನ ಅಂತ್ಯಕ್ಕೆ ಸಮಬಲದ (119–119) ಪೈಪೋಟಿ ನಡೆಸಿದವು. ಅಂತಿಮ ಸುತ್ತಿನಲ್ಲಿ ಭಾರತ 40 ಪಾಯಿಂಟ್ ಗಳಿಸಿದರೆ, ಕೊರಿಯಾ 39 ಪಾಯಿಂಟ್ ಕೆಲಹಾಕಿತು. ಹೀಗಾಗಿ ಭಾರತ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತು.
ಇದು ಜ್ಯೋತಿ ಹಾಗೂ ಓಜಸ್ ಏಷ್ಯನ್ ಗೇಮ್ಸ್‌ನಲ್ಲಿ ಗಳಿಸಿದ ಮೊದಲ ಚಿನ್ನದ ಪದಕವಾಗಿದೆ. ಈ ಇಬ್ಬರು ವೈಯಕ್ತಿಕ ವಿಭಾಗಗಳಲ್ಲಿಯೂ ಫೈನಲ್ ಪ್ರವೇಶಿಸಿದ್ದಾರೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಇದು ಭಾರತದಲ್ಲಿ ಭಾರತ ಗೆದ್ದ 16ನೇ ಚಿನ್ನದ ಪದಕ ಇದಾಗಿದೆ. ಇದರೊಂದಿಗೆ ಭಾರತ 25 ಬೆಳ್ಳಿ ಹಾಗೂ 29 ಕಂಚಿನ ಪದಕಗಳನ್ನೂ ಜಯಿಸಿದೆ. ಹೀಗಾಗಿ ಈ ಬಾರಿ ಗೆದ್ದ ಒಟ್ಟಾರೆ ಪದಕಗಳ ಸಂಖ್ಯೆಯನ್ನು 71ಕ್ಕೆ ಹೆಚ್ಚಿಸಿಕೊಂಡಿದೆ. 2018ರಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಕೂಟದಲ್ಲಿ 70 ಪದಕ ಗಳಿಸಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.