ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್‌–ಅಶ್ವಿನಿ ಜಯಭೇರಿ

ಶ್ರೀಕಾಂತ್‌ಗೆ ವೀರೋಚಿತ ಸೋಲು
Published : 27 ಅಕ್ಟೋಬರ್ 2021, 12:55 IST
ಫಾಲೋ ಮಾಡಿ
Comments

ಪ್ಯಾರಿಸ್‌: ಭಾರತದ ಕಿದಂಬಿ ಶ್ರೀಕಾಂತ್‌ ವೀರೋಚಿತ ಹೋರಾಟ ತೋರಿದರು. ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕದ ಆಟಗಾರ, ಜಪಾನ್ ಕೆಂಟೊ ಮೊಮೊಟಾ ಎದುರು ಎಡವಿದರೂ ಅವರ ಛಲದ ಆಟ ಮನಗೆದ್ದಿತು.

ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಎರಡನೇ ಸುತ್ತಿಗೆ ಮುನ್ನಡೆಯಿತು. ಭಾರತದ ಜೋಡಿಯು ಕೇವಲ 37 ನಿಮಿಷಗಳ ಹಣಾಹಣಿಯಲ್ಲಿ 21-19, 21-15ರಿಂದ ಡೆನ್ಮಾರ್ಕ್‌ನ ಮಥಿಯಾಸ್‌ ಥಿರಿ ಮತ್ತು ಮೈ ಸುರ್ರೊ ಎದುರು ಜಯಭೇರಿ ಮೊಳಗಿಸಿತು.

ಅಶ್ವಿನಿ–ಸಾತ್ವಿಕ್‌ ಅವರಿಗೆ ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಪ್ರವೀಣ್ ಜೋರ್ಡಾನ್‌ ಮತ್ತು ಮೆಲಾಟಿ ದೀವಾ ಒಕ್ತಾವಿಯಂಟಿ ಸವಾಲು ಎದುರಾಗುವ ಸಾಧ್ಯತೆಯಿದೆ.

ರಿಯೊ ಒಲಿಂಪಿಕ್ ಕ್ವಾರ್ಟರ್‌ಫೈನಲಿಸ್ಟ್‌ ಶ್ರೀಕಾಂತ್‌ ಅವರು ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ 18-21 22-20 21-19ರಂದ ಮೊಮೊಟಾ ಅವರಿಗೆ ಮಣಿದರು. ಡೆನ್ಮಾರ್ಕ್‌ ಓಪನ್‌ನಲ್ಲೂ ಶ್ರೀಕಾಂತ್‌ ಅವರು ಜಪಾನ್ ಆಟಗಾರನಿಗೆ ಸೋತಿದ್ದರು. ಆದರೆ ಅವರು ಇಲ್ಲಿ ತೋರಿದ ಸಾಮರ್ಥ್ಯ ಗಮಸೆಳೆಯಿತು.

ಮೊದಲ ಗೇಮ್‌ನಲ್ಲಿ 4–0ಯಿಂದ ಮುನ್ನಡೆ ಗಳಿಸಿದ ಶ್ರೀಕಾಂತ್ ಭರ್ಜರಿ ಆರಂಭ ಮಾಡಿದರು. ಆದರೆ ಜಪಾನ್ ಆಟಗಾರ ಸ್ಕೋರ್ ಸಮಬಲಗೊಳಿಸಿದರು. ತಿರುಗೇಟು ನೀಡಿದ ಶ್ರೀಕಾಂತ್ 8–5ಕ್ಕೆ ಮುನ್ನಡೆದರು. ಆದರೆ ವಿರಾಮದ ಹೊತ್ತಿಗೆ ಮೊಮೊಟಾ 11–10ರಿಂದ ಮುಂದಿದ್ದರು. ಬಳಿಕ ಒಂದು ಹಂತದಲ್ಲಿ ಗೇಮ್‌ 18–18ರಿಂದ ಸಮಬಲಕ್ಕೆ ಬಂದಿತ್ತು. ಆದರೆ ಮೊಮೊಟಾ ತಮ್ಮ ಅನುಭವವನ್ನು ಸಾಣೆ ಹಿಡಿದರು; ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ ಮತ್ತಷ್ಟೂ ಜಿದ್ದಾಜಿದ್ದಿಯಿಂದ ಕೂಡಿತ್ತು. ಒಂದು ಬಾರಿ ಶ್ರೀಕಾಂತ್, ಮತ್ತೊಂದು ಬಾರಿ ಮೊಮೊಟಾ ಅವರಿಗೆ ಮುನ್ನಡೆ ಸಿಗುತ್ತಿತ್ತು. ವಿರಾಮದ ಸಂದರ್ಭದಲ್ಲಿ 11–9ರಿಂದ ಜಪಾನ್ ಆಟಗಾರ ಮುಂದೆ ಸಾಗಿದ್ದರು. ಆದರೆ ಬಳಿಕ ನಾಲ್ಕು ನೇರ ಪಾಯಿಂಟ್ಸ್‌ಗಳ ಬಲದಿಂದ ಪುಟಿದೆದ್ದ ಶ್ರೀಕಾಂತ್, ಗೇಮ್ ವಶಪಡಿಸಿಕೊಂಡರು. ಮೂರನೇ ಗೇಮ್‌ನ ವಿರಾಮದ ವೇಳೆಗೂ ಮೊಮೊಟಾ 11–10ರಿಂದ ಮೇಲುಗೈ ಸಾಧಿಸಿದ್ದರು. ಹೋರಾಟ ತೋರಿದ ಶ್ರೀಕಾಂತ್‌ ಗೇಮ್‌ಅನ್ನು ಒಂದು ಹಂತದಲ್ಲಿ 19–17ಕ್ಕೆ ತೆಗೆದುಕೊಂಡು ಹೋದರು. ಆದರೆ ಕೊನೆಯಲ್ಲಿ ಹಲವು ಲೋಪಗಳು ಅವರಿಗೆ ಮುಳುವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT