ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನನಗರಿಯಲ್ಲಿ ಗರಿಗೆದರಿದ ಟೆನ್ ಕೆ ಸಡಗರ

ನೂತನ ದಾಖಲೆಗಳ ಮೇಲೆ ಕಣ್ಣಿಟ್ಟ ಖ್ಯಾತನಾಮ ಅಥ್ಲೀಟ್‌ಗಳು
Published 19 ಮೇ 2023, 19:31 IST
Last Updated 19 ಮೇ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ ನಡೆಯಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವಿಶ್ವ ಟೆನ್‌ ಕೆ ಓಟದಲ್ಲಿ ಮಿಂಚಲು ಸಿದ್ಧವಾಗಿರುವ ದೇಶ, ವಿದೇಶಗಳ ಅಥ್ಲೀಟ್‌ಗಳು ಉದ್ಯಾನನಗರಿಗೆ ಬಂದಿಳಿದಿದ್ದಾರೆ.

ದೀರ್ಘ ಅಂತರದ ಓಟದ ಸ್ಪರ್ಧೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಕಿನ್ಯಾ, ಇಥಿಯೊಪಿಯಾ ಹಾಗೂ ಉಗಾಂಡದ ಓಟಗಾರರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಹೋದ ವರ್ಷದ ಓಟದಲ್ಲಿ ಚಾಂಪಿಯನ್ ಆಗಿದ್ದ ಕಿನ್ಯಾದ ನಿಕೋಲಸ್ ಕಿಪ್ಕೊರಿರ್ ಕಿಮೆಲಿ, ಸೆಬಾಸ್ಟಿಯನ್ ಸಾವೆ ಮತ್ತು ಉಗಾಂಡದ ಸ್ಟೀಫನ್ ಕಿಸಾ ಪುರುಷರ ವಿಭಾಗದಲ್ಲಿ ಪೈಪೋಟಿಗೆ ಸಿದ್ಧರಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಜೆಸಿಕಾ ಚೆಲಂಗಾಟ್, ವಿಕೊಟಿ ಚೆಪಾಂಗೆನೊ ಮತ್ತು ಇಥಿಯೊಪಿಯಾದ ಸೆಹಾಯಾ ಗೆಮೆಚು ಪ್ರಮುಖರಾಗಿದ್ದಾರೆ.

ಹೋದ ತಿಂಗಳು ಜರ್ಮನಿಯಲ್ಲಿ ನಡೆದಿದ್ದ ಟೆನ್ ಕೆ ಓಟದಲ್ಲಿ ವೇಗದ ಓಟಗಾರ ಗೌರವಕ್ಕೆ ಪಾತ್ರರಾಗಿದ್ದ ಸೆಬಾಸ್ಟಿಯನ್ ಸಾವ್ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ. ಜರ್ಮನಿಯಲ್ಲಿ ಅವರು 26ನಿಮಿಷ, 49 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಅದೇ ರೇಸ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದ ಕೀನ್ಯಾದ ನಿಕೋಲಸ್ ಕಿಮೆಲಿ ಅವರು ಸೆಬಾಸ್ಟಿಯನ್‌ಗೆ ಪೈಪೋಟಿಯೊಡ್ಡಲು ಸಿದ್ಧರಾಗಿದ್ದಾರೆ. ಹೋದ ವರ್ಷ ಬೆಂಗಳೂರಿನಲ್ಲಿ ಕಿಮೆಲಿ ಅವರು 27 ನಿಮಿಷ, 38 ಸೆಕೆಂಡುಗಳಲ್ಲಿ ಗುರಿ ಸಾಧಿಸಿ ಮೊದಲಿಗರಾಗಿದ್ದರು.

’ನಾನು ಸರ್ವಸನ್ನದ್ಧನಾಗಿರುವೆ.  ಭಾನುವಾರ ನನ್ನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮುಟ್ಟಲು ಪ್ರಯತ್ನಿಸುತ್ತೇನೆ. ಆದ್ದರಿಂದ ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ. ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದೇನೆ. ಬೆಂಗಳೂರಿನ ಉಷ್ಣಾಂಶದಿಂದ ಹೆಚ್ಚು ತೊಂದರೆಯಾಗುವುದಿಲ್ಲ‘ ಎಂದು ಸೆಬಾಸ್ಟಿಯನ್ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಕಿಮೆಲಿ  ‘ಬೆಂಗಳೂರಿಗೆ ಮರಳಿರುವುದು ಸಂತಸ ತಂದಿದೆ. ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಈ ಬಾರಿಯ ರೇಸ್ ತುಂಬಾ ಸ್ಪರ್ಧಾತ್ಮಕವಾಗಿರುವ ನಿರೀಕ್ಷೆಯಿದೆ‘ ಎಂದರು. 

ಉಗಾಂಡದ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್ ಸ್ಟಿಫನ್, ’ಭಾರತದಲ್ಲಿ ಸ್ಪರ್ಧಿಸುವುದು ನನಗೆ ತುಂಬ ಸಂತಸ. ಇಲ್ಲಿಯ ಹವಾಮಾನವೂ ಉತ್ತಮವಾಗಿರುತ್ತದೆ‘ ಎಂದರು.

ಈ ಬಾರಿ ಮಹಿಳೆಯರ ವಿಭಾಗದಲ್ಲಿಯೂ ನಿಕಟ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.

ಟೋಕಿಯೊ ಮ್ಯಾರಥಾನ್‌ನಲ್ಲಿ ರನ್ನರ್ ಅಪ್ ಆಗಿರುವ ಇಥಿಯೊಪಿಯಾದ ಸೆಹಾಯಾ ಗೆಮೆಚು ಪ‍್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

‘ಮ್ಯಾರಥಾನ್‌ನಿಂದ 10ಕೆ ಓಟಕ್ಕೆ ಬಂದ ಮೇಲೆ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಟೆನ್‌ ಕೆ ಓಟದಲ್ಲಿ ವೇಗವನ್ನು ವೃದ್ಧಿಸಿಕೊಳ್ಳಲು ವಿಶೇಷ ಪ್ರಯತ್ನ ಮಾಡಿದ್ದೆ. ಅದರಲ್ಲಿ ಯಶಸ್ವಿಯಾಗುತ್ತೇನೆ‘ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT