ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಪದಕವಿಜೇತ ರವಿ ದಹಿಯಾಗೆ ಏಷ್ಯನ್ ಗೇಮ್ಸ್ ದ್ವಾರ ಬಂದ್!

ಒಲಿಂಪಿಕ್ ಪದಕವಿಜೇತ ಕುಸ್ತಿಪಟುವಿಗೆ ಆಘಾತ ನೀಡಿದ ತೋಡ್ಕರ್
Published 23 ಜುಲೈ 2023, 19:30 IST
Last Updated 23 ಜುಲೈ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಉದಯೋನ್ಮುಖ ಕುಸ್ತಿಪಟು ಅತೀಶ್ ತೋಡ್ಕರ್ ಅವರು ಭಾನುವಾರ ನಡೆದ ಟ್ರಯಲ್ಸ್‌ನಲ್ಲಿ ಒಲಿಂಪಿಕ್ ಪದಕ ವಿಜೇತ ರವಿ ದಹಿಯಾ ಅವರನ್ನು ಸೋಲಿಸಿದರು.

ಇದರಿಂದಾಗಿ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ರವಿ ಕಳೆದುಕೊಂಡರು. ಪುರುಷರ 57 ಕೆ.ಜಿ ವಿಭಾಗದಿಂದ ಅಮನ್ ಸೆಹ್ರಾವತ್ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿದರು.

ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟ್ರಯಲ್ಸ್‌ನಲ್ಲಿ ಮಹಾರಾಷ್ಟ್ರದ ತೋಡ್ಕರ್ ಚುರುಕಿನ ಪಟ್ಟುಗಳನ್ನು ಹಾಕಿ ರವಿ ದಹಿಯಾಗೆ ಆಘಾತ ನೀಡಿದರು.   ತೋಡ್ಕರ್  20–8ರ ಅಂತರ ಮತ್ತು ವಿನ್‌ ಬೈ ಫಾಲ್‌ನಿಂದ ರವಿಯನ್ನು ಸೋಲಿಸಿದರು. ಬೌಟ್‌ ವೀಕ್ಷಿಸಲು ಸೇರಿದ್ದ ಕುಸ್ತಿಪ್ರೇಮಿಗಳು, ವೈಲ್ವಾನರು ಮತ್ತು ತರಬೇತುದಾರರು ತೋಡ್ಕರ್ ವೇಗದ ಆಟಕ್ಕೆ ಅಚ್ಚರಿಗೊಂಡರು.

ಬೌಟ್‌ನ ಎರಡನೇ ಅವಧಿಯಲ್ಲಿ ದಹಿಯಾ 6–4ರ ಅಲ್ಪ ಮುನ್ನಡೆ ಗಳಿಸಿದ್ದರು. ಆದರೆ ಇದರ ನಂತರ ತೋಡ್ಕರ್ ಪಾರಮ್ಯ ಮೆರೆದರು. ಸತತ ಎರಡು ಬಾರಿ ರವಿ ದಹಿಯಾ ಅವರನ್ನು ಮಣಿಸಿದ ನಾಲ್ಕು ಅಂಕಗಳನ್ನು ಗಳಿಸಿದರು. ನಂತರವೂ ತಮ್ಮ ಪಟ್ಟುಗಳನ್ನು ಸಡಿಲಿಸಲಿಲ್ಲ.

‘ರವಿ ಫೆಬ್ರುವರಿಯಲ್ಲಿ ಬಲಗಾಲಿನ ಮಂಡಿಗಾಯದಿಂದ ಬಳಲಿದ್ದರು. ಅಸ್ಥಿಮಜ್ಜೆಯ ಗಾಯವೂ ಆಗಿತ್ತು. ಇದರಿಂದಾಗಿ ಬಹುಕಾಲ ತಾಲೀಮು ಮಾಡಿರಲಿಲ್ಲ. ಕಳೆದ 10 ದಿನಗಳಿಂದ ಅಭ್ಯಾಸ ನಡೆಸಿದ್ದಾರೆ. ಆದ್ದರಿಂದ ಇಲ್ಲಿ ಸಂಪೂರ್ಣ ಸಾಮರ್ಥ್ಯ ತೋರಲು ಸಾಧ್ಯವಾಗಿಲ್ಲ‘ ಎಂದು ದಹಿಯಾ ಆರೈಕೆಯ ಉಸ್ತುವಾರಿ ವಹಿಸಿರುವ ಡಾ. ಮುನೇಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT