ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಭಾರತದ ಮೂರನೇ ಆಟಗಾರ್ತಿ
Published 2 ಡಿಸೆಂಬರ್ 2023, 14:19 IST
Last Updated 2 ಡಿಸೆಂಬರ್ 2023, 14:19 IST
ಅಕ್ಷರ ಗಾತ್ರ

ಚೆನ್ನೈ: ಚೆಸ್‌ ತಾರೆ ಆರ್‌.ವೈಶಾಲಿ ‘ಗ್ರ್ಯಾಂಡ್‌ಮಾಸ್ಟರ್‌’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ ಎನಿಸಿದರು. ಅವರ ಖ್ಯಾತ ತಮ್ಮ ಪ್ರಜ್ಞಾನಂದ ಈ ಮೊದಲೇ ಈ ಪಟ್ಟ ಪಡೆದಿದ್ದು, ಗ್ರ್ಯಾಂಡ್‌ಮಾಸ್ಟರ್‌ ಆದ ವಿಶ್ವದ ಮೊದಲ ಸೋದರ–ಸೋದರಿ ಜೋಡಿ ಎನಿಸಿದರು.

ಸ್ಪೇನ್‌ನಲ್ಲಿ ನಡೆಯುತ್ತಿರುವ ಎಲ್‌ ಲೊಬ್ರೆಗಟ್‌ ಟೂರ್ನಿಯಲ್ಲಿ ಶುಕ್ರವಾರ ಅವರು 2500 ರೇಟಿಂಗ್ ದಾಟಿದರು. ಇದಕ್ಕೆ ಬೇಕಾದ ಮೂರು ಜಿಎಂ ನಾರ್ಮ್‌ಗಳನ್ನು ಈ ಮೊದಲೇ ಅವರು ಪಡೆದಿದ್ದರು. ವೈಶಾಲಿ ಭಾರತದ 84ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. 

ಕೊನೇರು ಹಂಪಿ ಮತ್ತು ದ್ರೊಣವಲ್ಲಿ ಹಾರಿಕಾ ಅವರು ಈ ಹಿಂದೆಯೇ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದಿದ್ದಾರೆ.

ಚೆನ್ನೈನ 22 ವರ್ಷದ ಆಟಗಾರ್ತಿ ಎಲ್‌ ಲೊಬ್ರೆಗಟ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಟರ್ಕಿಯ ಟೇಮರ್ ತಾರಿಕ್ ಸೆಲ್ಬೆಸ್‌ ಅವರನ್ನು ಸೋಲಿಸಿದರು. ಅಕ್ಟೋಬರ್‌ನಲ್ಲಿ ನಡೆದ ಕತಾರ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ವೈಶಾಲಿ ಮೂರನೇ ಜಿಎಂ ನಾರ್ಮ್ ಪಡೆದಿದ್ದರು. ‘ಪ್ರಗ್ಗು’ 2018ರಲ್ಲಿ 12ನೇ ವಯಸ್ಸಿನಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಟೈಟಲ್ ಪಡೆದಿದ್ದರು.

ಇಬ್ಬರೂ (ಪ್ರಜ್ಞಾನಂದ ಮತ್ತು ವೈಶಾಲಿ) ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಆಟಗಾರನನ್ನು ಆಯ್ಕೆ ಮಾಡಲು ಇರುವ ಕ್ಯಾಂಡಿಡೇಟ್ಸ್‌ ಟೂರ್ನಿಗಳಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ. ಪುರುಷರ ಮತ್ತು ಮಹಿಳೆಯರ ಕ್ಯಾಂಡಿಡೇಟ್ಸ್ ಟೂರ್ನಿ ಏಪ್ರಿಲ್‌ನಲ್ಲಿ ಟೊರಾಂಟೊದಲ್ಲಿ ನಡೆಯಲಿದೆ.

ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಅವರು ವೈಶಾಲಿ ಅವರನ್ನು ಅಭಿನಂದಿಸಿದ್ದು ‘ಎಕ್ಸ್‌’ನಲ್ಲಿ ಸಂದೇಶ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT