ಪ್ಯಾರಿಸ್: ಭಾರತದ ವಿನೇಶ್ ಫೋಗಟ್ ಅವರು ತಮ್ಮನ್ನು ಒಲಿಂಪಿಕ್ ಕೂಟದ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಕ್ರೀಡಾ ನ್ಯಾಯ ಮಂಡಳಿಯ (ಸಿಎಎಸ್) ಹಂಗಾಮಿ ವಿಭಾಗದಲ್ಲಿ ವಿಚಾರಣೆ ನಡೆಸಿತು.
ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಅವರಿಗೆ ನಿಗದಿಗಿಂತ 100 ಗ್ರಾಂ ಹೆಚ್ಚು ತೂಕವಿದ್ದಾರೆ ಎಂಬ ಕಾರಣಕ್ಕೆ ಫೈನಲ್ ಬೌಟ್‌ನಿಂದ ಅನರ್ಹಗೊಳಿಸಲಾಗಿತ್ತು. ಈ ಕ್ರಮದ ವಿರುದ್ಧ ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾದ ಕ್ರೀಡಾ ನ್ಯಾಯ ಮಂಡಳಿಯ ತಾತ್ಕಾಲಿಕ ವಿಭಾಗಕ್ಕೆ (ಅಡ್ ಹಾಕ್) ಮೇಲ್ಮನವಿ ಸಲ್ಲಿಸಿದ್ದರು.
‘ವಿನೇಶ್ ಸಲ್ಲಿಸಿದ ಅರ್ಜಿಯ ವಿಚಾರಣೆಯು ಈಗಾಗಲೇ ಮುಕ್ತಾಯವಾಗಿದ್ದು, ಭಾರತ ಒಲಿಂಪಿಕ್ ಸಂಸ್ಥೆಯು ಸಕಾರಾತ್ಮಕ ತೀರ್ಪಿನ ಭರವಸೆಯಲ್ಲಿದೆ’ ಎಂದು ಐಒಎ ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ ನಡೆದಿದ್ದ ಆರಂಭದ ಮೂರು ಸುತ್ತಿನ ಪಂದ್ಯಗಳಲ್ಲಿ ನಿಗದಿತ ತೂಕದ ಮಿತಿಯಲ್ಲಿದ್ದ ಕಾರಣ ತನಗೆ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ವಿನೇಶ್ ಕೋರಿದ್ದರು.