ಪ್ಯಾರಿಸ್: ಇಲ್ಲಿ ಜುಲೈ 26ರಂದು ಆರಂಭ ಗೊಂಡ 33ನೇ ಒಲಿಂಪಿಕ್ ಕ್ರೀಡಾ ಕೂಟಕ್ಕೆ ಭಾನುವಾರ ತೆರೆ ಬೀಳಲಿದೆ.
ಸಮಾರೋಪ ಸಮಾರಂಭವು ಮಧ್ಯರಾತ್ರಿ 12.30ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗಿ ಸೋಮವಾರ ನಸುಕಿನ ಜಾವ 3ರವರೆಗೆ ನಡೆಯುವ ಸಾಧ್ಯತೆ ಇದೆ. ಆದರೆ, ಕಾರ್ಯಕ್ರಮದ ಬಗ್ಗೆ ಆಯೋಜನಾ ಸಮಿತಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಸ್ಟೇಟ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟ ಟಾಮ್ ಕ್ರೂಸ್, ರ‍್ಯಾಪರ್ ಸ್ನೂಪ್ ಡಾಗ್, ಗಾಯಕಿ ಬಿಲ್ಲಿ ಎಲಿಶ್ ಮತ್ತು ರ‍್ಯಾಪರ್ ದಿ ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್ ಕಾಣಿಸಿಕೊಳ್ಳಲಿದ್ದಾರೆ ಎಂದು ಇಎಸ್‌ಪಿಎನ್ ವೆಬ್‌ಸೈಟ್ ಪ್ರಕಟಿಸಿದೆ.
ಸಮಾರೋಪ ಸಮಾರಂಭವು ಸಾಂಪ್ರದಾಯಿಕವಾಗಿ ಧ್ವಜಗಳ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ರಾಷ್ಟ್ರದ ಕ್ರೀಡಾಪಟುಗಳು ತಮ್ಮ ದೇಶದ ಧ್ವಜದೊಂದಿಗೆ ಭಾಗವಹಿಸುತ್ತಾರೆ. ಒಲಿಂಪಿಕ್ಸ್ ಪ್ರಾರಂಭವಾದಾಗಿನಿಂದ ಗ್ರೀಕ್ ಧ್ವಜಕ್ಕೆ ಮೆರವಣಿಗೆಯಲ್ಲಿ ಮೊದಲ ಸ್ಥಾನವಿದೆ.
ಕೂಟದ ಪ್ರಸ್ತುತ ಆತಿಥೇಯ ನಗರದ ಮೇಯರ್ ಒಲಿಂಪಿಕ್ ಧ್ವಜ ವನ್ನು ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸುತ್ತಾರೆ. ನಂತರ ಅವರು ಅದನ್ನು ಮುಂದಿನ ಒಲಿಂಪಿಕ್ಸ್‌ನ ಆತಿಥೇಯ ನಗರದ ಮೇಯರ್‌ಗೆ ಪ್ರಸ್ತುತಪಡಿಸುತ್ತಾರೆ. ಸಮಾರಂಭದಲ್ಲಿ ಅಧಿಕೃತ ಒಲಿಂಪಿಕ್ ಧ್ವಜವನ್ನು ಸ್ವೀಕರಿಸುವ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಖ್ಯಾತಿ ಲಾಸ್ ಏಂಜಲೀಸ್‌ನ ಮೇಯರ್ ಬಾಸ್ ಅವರದ್ದಾಗಲಿದೆ. ನಂತರ ಒಲಿಂಪಿಕ್ ಜ್ಯೋತಿ ನಂದಿಸುವ ಮೂಲಕ ಒಲಿಂಪಿಕ್ಸ್ ಮುಕ್ತಾಯಗೊಳಿಸಲಾಗುತ್ತದೆ.