ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಸೌರಭ್‌–ಮನುಗೆ ಚಿನ್ನ

ರವಿ–ಅಂಜುಮ್‌ಗೆ ನಿರಾಸೆ
Last Updated 27 ಫೆಬ್ರುವರಿ 2019, 15:34 IST
ಅಕ್ಷರ ಗಾತ್ರ

ನವದೆಹಲಿ: ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೌರಭ್‌ ಚೌಧರಿ ಮತ್ತು ಮನು ಭಾಕರ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಜೋಡಿಯಿಂದ ಈ ಸಾಧನೆ ಮೂಡಿಬಂದಿದೆ.

ಡಾ.ಕರ್ಣಿ ಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ ಸೌರಭ್‌ ಮತ್ತು ಮನು ಒಟ್ಟು 483.5 ಸ್ಕೋರ್‌ ಕಲೆಹಾಕಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಒಲಿದ ಮೂರನೇ ಚಿನ್ನದ ಪದಕ ಇದಾಗಿದೆ.ಆತಿಥೇಯ ತಂಡ ಪದಕ ಪಟ್ಟಿಯಲ್ಲಿ ಹಂಗರಿ ಜೊತೆ ಜಂಟಿ ಅಗ್ರಸ್ಥಾನಕ್ಕೇರಿದೆ.

ಅರ್ಹತಾ ಹಂತದಲ್ಲಿ ನಿಖರ ಗುರಿ ಹಿಡಿದು ವಿಶ್ವ ದಾಖಲೆ ಸರಿಗಟ್ಟಿದ್ದ ಮನು ಮತ್ತು ಸೌರಭ್‌, ಫೈನಲ್‌ನಲ್ಲೂ ಪ್ರಾಬಲ್ಯ ಮೆರೆದರು.

ಮೊದಲ ಹಂತದ ಮೂರು ಅವಕಾಶಗಳು ಮುಗಿದಾಗ ದಕ್ಷಿಣ ಕೊರಿಯಾದ ಕಿಮ್‌ ಮಿಂಜುಗ್‌ ಮತ್ತು ಪಾರ್ಕ್‌ ಡಯೆಹುನ್‌ ಅವರು ಅಗ್ರಸ್ಥಾನದಲ್ಲಿದ್ದರು. ಇವರು 302.3 ಸ್ಕೋರ್‌ ಕಲೆಹಾಕಿದ್ದರು. 301.5 ಸ್ಕೋರ್‌ ಗಳಿಸಿದ್ದ ಭಾರತದ ಜೋಡಿ ಎರಡನೇ ಸ್ಥಾನದಲ್ಲಿತ್ತು.

ಎರಡನೇ ಹಂತದ ‍ಪೈಪೋಟಿಯಲ್ಲಿ ಸೌರಭ್‌ ಮತ್ತು ಮನು ಮೋಡಿ ಮಾಡಿದರು. ನಾಲ್ಕು ಅವಕಾಶಗಳಲ್ಲಿ ಕ್ರಮವಾಗಿ 40.4, 41.6, 40.5 ಮತ್ತು 59.4 ಸ್ಕೋರ್‌ ಕಲೆಹಾಕಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ದಕ್ಷಿಣ ಕೊರಿಯಾದ ಕಿಮ್‌ ಮತ್ತು ಪಾರ್ಕ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಈ ಜೋಡಿ 418.8 ಸ್ಕೋರ್‌ ಗಳಿಸಲಷ್ಟೇ ಶಕ್ತವಾಯಿತು. ಈ ವಿಭಾಗದ ಬೆಳ್ಳಿಯ ಪದಕ ಚೀನಾದ ಜಿಯಾಂಗ್ ರ‍್ಯಾನ್‌ಕ್ಸಿನ್‌ ಮತ್ತು ಜಾಂಗ್‌ ಬೊವೆನ್‌ ಅವರ ಪಾಲಾಯಿತು.

ಜಿಯಾಂಗ್‌ ಮತ್ತು ಜಾಂಗ್‌ 477.7 ಸ್ಕೋರ್‌ ಸಂಗ್ರಹಿಸಿದರು.

ಇದೇ ವಿಭಾಗದಲ್ಲಿ ಕಣದಲ್ಲಿದ್ದ ಹೀನಾ ಸಿಧು ಮತ್ತು ಅಭಿಷೇಕ್‌ ವರ್ಮಾ, ಅರ್ಹತಾ ಹಂತದಲ್ಲೇ ಹೊರಬಿದ್ದರು.

16 ವರ್ಷ ವಯಸ್ಸಿನ ಸೌರಭ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಮೀರತ್‌ನ ಚಿಗುರು ಮೀಸೆಯ ಯುವಕ, ಭಾನುವಾರ ನಡೆದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದರು. ಜೊತೆಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಗಳಿಸಿದ್ದರು.

ರವಿ–ಅಂಜುಮ್‌ಗೆ ನಿರಾಸೆ: 10 ಮೀಟರ್ಸ್‌ ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ರವಿಕುಮಾರ್‌ ಮತ್ತು ಅಂಜುಮ್‌ ಮೌಡ್ಗಿಲ್‌ ಅವರು ಏಳನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

ಅಪೂರ್ವಿ ಚಾಂಡೇಲ ಮತ್ತು ದೀಪಕ್‌ ಕುಮಾರ್‌ ಅವರು 25ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT