ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್ | ಸುಹಾಸ್‌, ಪ್ರಮೋದ್‌, ಕೃಷ್ಣಗೆ ಚಿನ್ನದ ಪದಕ

Published 25 ಫೆಬ್ರುವರಿ 2024, 16:11 IST
Last Updated 25 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಪಟ್ಟಾಯ (ಥ್ಲಾಯೆಂಡ್‌): ಭಾರತದ ಸುಹಾಸ್ ಯತಿರಾಜ್‌, ಪ್ರಮೋದ್ ಭಗತ್ ಮತ್ತು ಕೃಷ್ಣ ನಾಗರ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನ ವಿವಿಧ ವಿಭಾಗಗಳಲ್ಲಿ ಭಾನುವಾರ ಚಿನ್ನದ ಪದಕ ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಸುಹಾಸ್‌ ಎಸ್‌ಎಲ್‌4 ಫೈನಲ್‌ನಲ್ಲಿ 21-18, 21-18 ರಿಂದ ಇಂಡೊನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರನ್ನು ಮಣಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದರು.

ಉತ್ತರ ಪ್ರದೇಶ ಕೇಡರ್‌ನ 2007ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್, ಪ್ರಸ್ತುತ ಯುವ ಕಲ್ಯಾಣ ಮತ್ತು ಪ್ರಾಂತೀಯ ರಕ್ಷಕ ದಳದ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಎರಡು ಕಂಚು ಗೆದ್ದಿದ್ದ ಪ್ರಮೋದ್‌ ಅವರು ಎಸ್‌ಎಲ್‌ 3 ವಿಭಾಗದ ಫೈನಲ್‌ನಲ್ಲಿ 14-21, 21-15, 21-14 ರಿಂದ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದರು.

35 ವರ್ಷದ ಪ್ರಮೋದ್‌ ಅವರಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದು ಹ್ಯಾಟ್ರಿಕ್‌ ಚಿನ್ನವಾಗಿದೆ. ಈ ಹಿಂದೆ 2015ರ ಸ್ಟೋಕ್ ಮ್ಯಾಂಡೆವಿಲ್ಲೆ ಮತ್ತು 2019ರ ಬಾಸೆಲ್ ಕೂಟದಲ್ಲೂ ಅವರು ಚಿನ್ನದ ಸಾಧನೆ ಮಾಡಿದ್ದರು. ಅಲ್ಲದೆ, 2022ರ ಪ್ಯಾರಾಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದಿದ್ದರು.

ಪ್ಯಾರಾಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಕೃಷ್ಣಾ ಅವರು ಎಸ್‌ಎಚ್‌6 ವಿಭಾಗದ ಫೈನಲ್‌ ಹಣಾಹಣಿಯಲ್ಲಿ 22-20, 22-20 ರಿಂದ ಚೀನಾದ ಲಿನ್ ನೈಲಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್‌ ಆದರು.

ಮನೀಷಾಗೆ ಬೆಳ್ಳಿ: ಭಾರತದ ಮನೀಷಾ ರಾಮದಾಸ್‌ ಮಹಿಳೆಯರ ಸಿಂಗಲ್ಸ್‌ನ ಎಸ್‌ಯು5 ಫೈನಲ್‌ನಲ್ಲಿ 16-21, 16-21 ರಿಂದ ಚೀನಾದ ಯಾಂಗ್ ಕ್ಯು ಕ್ಸಿಯಾ ಅವರಿಗೆ ಮಣಿದು, ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಭಾರತದ ಚಿರಾಗ್ ಬರೆತಾ ಮತ್ತು ರಾಜಕುಮಾರ್ ಜೋಡಿಯು ಪುರುಷರ ಡಬಲ್ಸ್‌ನ ಎಸ್‌ಯು5 ವಿಭಾಗದಲ್ಲಿ ಹಾಗೂ ರಚನಾ ಶೈಲೇಶ್‌ಕುಮಾರ್ ಮತ್ತು ನಿತ್ಯಶ್ರೀ ಸುಮತಿ ಶಿವನ್ ಜೋಡಿಯು ಮಹಿಳೆಯರ ಡಬಲ್ಸ್‌ನ ಎಸ್‌ಎಚ್‌6 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡವು.

ಇಲ್ಲಿ ಭಾರತ ತಂಡವು ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 18 ಪದಕಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT