ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಹಾಕಿ: ಜಯದ ಓಟ ಮುಂದುವರಿಸುವತ್ತ ಆತಿಥೇಯರ ಚಿತ್ತ

ಭಾರತ–ಬೆಲ್ಜಿಯಂ ಹಣಾಹಣಿ 2ರಂದು
Last Updated 1 ಡಿಸೆಂಬರ್ 2018, 19:23 IST
ಅಕ್ಷರ ಗಾತ್ರ

ಭುವನೇಶ್ವರ: ಆತಿಥೇಯ ಭಾರತ ತಂಡವು ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಆತಿಥೇಯ ಬಳಗವು ಎರಡನೇ ಪಂದ್ಯದಲ್ಲಿಯೂ ಜಯದ ಓಟ ಮುಂದುವರಿಸುವ ಛಲದಲ್ಲಿದೆ. ‘ಸಿ’ ಗುಂಪಿನಲ್ಲಿ ಭಾರತವು ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ. ಬೆಲ್ಜಿಯಂ ವಿರುದ್ಧ ಗೆದ್ದರೆ ಎಂಟರ ಘಟ್ಟದ ಹಾದಿ ಸುಗಮವಾಗಲಿದೆ. ಡಿಸೆಂಬರ್ 8ರಂದು ಕೆನಡಾ ಎದುರಿನ ಪಂದ್ಯದಲ್ಲಿ ಜಯಿಸಿದರೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದು ಖಚಿತ. ಇದರಿಂದ ನೇರವಾಗಿ ಕ್ವಾರ್ಟರ್‌ಫೈನಲ್ ಕೂಡ ಪ್ರವೇಶಿಸಬಹುದು. ಇಲ್ಲದಿದ್ದರೆ ಕ್ರಾಸ್‌ ಮ್ಯಾಚ್‌ಗಳಲ್ಲಿ ಆಡಿ ಅವಕಾಶ ಗಿಟ್ಟಿಸಲು ಪ್ರಯತ್ನಿಸಬೇಕು.

ಇತಿಹಾಸದ ಪುಟಗಳ ಮೇಲೆ ಕಣ್ಣಾಡಿಸಿದರೆ, ಬೆಲ್ಜಿಯಂ ತಂಡಕ್ಕಿಂತ ಭಾರತ ತುಸು ಮುಂದಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಇದುವರೆಗೆ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಭಾರತ ಎರಡು ಬಾರಿ, ಬೆಲ್ಜಿಯಂ ಒಂದು ಸಲ ಗೆದ್ದಿವೆ. ಆದರೆ, ಒಟ್ಟಾರೆ 19 ಹಣಾಹಣಿಗಳಲ್ಲಿ ಬೆಲ್ಜಿಯಂ 13 ಬಾರಿ ಗೆದ್ದಿದೆ. ಭಾರತ ಐದರಲ್ಲಿ ಜಯಿಸಿದೆ. ಒಂದು ಪಂದ್ಯ ಡ್ರಾ ಆಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿಯೂ ಬೆಲ್ಜಿಯಂ ತಂಡವು ಭಾರತಕ್ಕಿಂತ ಮೇಲೆ ಇದೆ. ಆದ್ದರಿಂದ ಮನಪ್ರೀತ್ ಸಿಂಗ್ ಬಳಗಕ್ಕೆ ಈ ಪಂದ್ಯ ಸುಲಭದ ತುತ್ತಾಗುವುದಿಲ್ಲ.

ದಕ್ಷಿಣ ಆಫ್ರಿಕಾ ಎದುರು ಮಿಂಚಿದ್ದ ಸಿಮ್ರನ್‌ಜೀತ್, ಮನ್‌ಪ್ರೀತ್ ಮತ್ತು ಹರ್ಮನ್‌ಪ್ರೀತ್ ಇಲ್ಲಿ ಮತ್ತೊಮ್ಮೆ ತಮ್ಮ ಚುರುಕಿನ ಆಟವನ್ನು ಆಡುವ ನಿರೀಕ್ಷೆ ಇದೆ. ಬ್ರಿಲ್ ಥಾಮಸ್ ನಾಯಕತ್ವದ ಬೆಲ್ಜಿಯಂ ತಂಡವು ತನ್ನ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 2–1ರಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಎರಡನೇ ಗೋಲು ಹೊಡೆದಿದ್ದ ಬ್ರಿಲ್ ಮಿಂಚಿದ್ದರು. ಫಾರ್ವರ್ಡ್ ಆಟಗಾರ ಡೇನಿಯರ್ ಫೆಲಿಕ್ಸ್ ಕೂಡ ಎದುರಾಳಿ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಬಲ್ಲ ಚಾಣಾಕ್ಷ ಆಟಗಾರ. ಇವರ ಮೇಲೆ ವಿಶೇಷ ನಿಗಾ ಇಡಲು ಆತಿಥೇಯರ ರಕ್ಷಣಾ ಆಟಗಾರರು ಹೆಚ್ಚು ಶ್ರಮಿಸಬೇಕಾಗಬಹುದು. ಬೆಲ್ಜಿಯಂ ತಂಡದ ರಕ್ಷಣಾ ಪಡೆಯೂ ಉತ್ತಮವಾಗಿದೆ. ಇದರಿಂದಾಗಿ ತುರುಸಿನ ಹಣಾಹಣಿಯ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT