ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಯನಿಗೆ ಮಣಿದ ಲಕ್ಷ್ಯ ಸೇನ್

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಡಬಲ್ಸ್‌ ಎಂಟರ ಘಟ್ಟಕ್ಕೆ ಧ್ರುವ–ಅರ್ಜುನ್, ಸಾತ್ವಿಕ್ –ಚಿರಾಗ್; ಸೈನಾಗೆ ನಿರಾಸೆ
Last Updated 25 ಆಗಸ್ಟ್ 2022, 11:07 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಎಚ್‌.ಎಸ್. ಪ್ರಣಯ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ತಮ್ಮ ಸಹ ಆಟಗಾರ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಎಂಟರ ಘಟ್ಟ ಪ್ರವೇಶಿಸಿದರು. ಪುರುಷರ ಡಬಲ್ಸ್‌ನಲ್ಲಿ ಧ್ರುವ ಕಪಿಲ ಹಾಗೂ ಎಂ.ಆರ್. ಅರ್ಜುನ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಆದರೆ ಒಲಿಂಪಿಯನ್ ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ನಿರಾಶೆ ಅನುಭವಿಸಿದರು.

ಗುರುವಾರ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್ 17–21, 21–16, 21–17ರಿಂದ ಲಕ್ಷ್ಯ ವಿರುದ್ಧ ಗೆದ್ದರು. ಒಂದು ಗಂಟೆ, 15 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಭಾರತದ ಇಬ್ಬರೂ ಆಟಗಾರರ ನಡುವೆ ತುರುಸಿನ ಪೈಪೋಟಿ ಕಂಡುಬಂದಿತು.

ಮೊದಲ ಗೇಮ್‌ನಲ್ಲಿ ಲಕ್ಷ್ಯ ವೇಗದ ಸರ್ವ್‌ ಹಾಗೂ ರಿಟರ್ನ್‌ಗಳ ಆಟವಾಡಿದರು. ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್‌ಗಳನ್ನು ಹೆಕ್ಕಿದರು. ಆದರೆ ಎರಡು ಮತ್ತು ಮೂರನೇ ಗೇಮ್‌ನಲ್ಲಿ ಶ್ರೇಯಾಂಕರಹಿತ ಆಟಗಾರ ಪ್ರಣಯ್ ಮೇಲುಗೈ ಸಾಧಿಸಿದರು. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಇಬ್ಬರೂ ಆಟಗಾರರು ನಾಲ್ಕು ಬಾರಿ ಮುಖಾಮುಖಿಯಾಗಿದ್ದಾರೆ. 2–2ರ ಸಮಬಲ ಸಾಧಿಸಿದ್ದಾರೆ.

ಎಂಟರ ಘಟ್ಟದಲ್ಲಿ ಪ್ರಣಯ್ ಅವರು ಚೀನಾದ ಝಾವೊ ಜುನ್ ಪೆಂಗ್ ವಿರುದ್ಧ ಸೆಣಸುವರು.

ಮಹಿಳೆಯರ ಸಿಂಗಲ್ಸ್‌ನಲ್ಲಿ 32 ವರ್ಷದ ಸೈನಾ 17–21, 21–16, 13–21ರಿಂದ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರುಂಗಪನ್ ವಿರುದ್ಧ ಸೋಲನುಭವಿಸಿದರು.

ಪುರುಷರ ಡಬಲ್ಸ್‌ನಲ್ಲಿ ಧ್ರುವ ಮತ್ತು ಅರ್ಜುನ್ ಜೋಡಿಯು 18–21, 21–15, 21–16ರಿಂದ ಸಿಂಗಪುರದ ಟೆರಿ ಹೀ ಹಾಗೂ ಕೀನ್ ಹೀನ್ ಜೋಡಿಯ ವಿರುದ್ಧ ಜಯಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಧ್ರುವ–ಅರ್ಜುನ್ ಇಂಡೋನೆಷ್ಯಾದ ಮೂರನೇ ಶ್ರೇಯಾಂಕದ ಮೊಹಮ್ಮದ್ ಅಹಸಾನ್ ಮತ್ತು ಹೆಂದ್ರಾ ಸೆತಿಯವಾನ್ ಜೋಡಿಯನ್ನು ಎದುರಿಸಲಿದ್ದಾರೆ.

ಇದೇ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು 21–12, 21–10ರಿಂದ ನೇರ ಗೇಮ್‌ಗಳಲ್ಲಿ ಡೆನ್ಮಾರ್ಕಿನ ಜೆಪಾ ಬೇ ಹಾಗೂ ಲೆಸಿ ಮೊಹಲೆಡ್ ವಿರುದ್ಧ ಗೆದ್ದರು. 35 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಜೋಡಿಯು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಎಂಟರ ಘಟ್ಟದಲ್ಲಿ ಜಪಾನ್‌ನ ತಕುರೊ ಹೊಕಿ –ಯುಗೊ ಕೊಬ್ಯಾಶಿ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT