ಹಾಂಗ್‌ಝೌ: ಓಜಸ್ ದೇವತಾಳೆ ಅವರ ಯುವ ಸಾಮರ್ಥ್ಯ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರ ಕೌಶಲವು ಏಷ್ಯನ್ ಕ್ರೀಡಾಕೂಟದ ಆರ್ಚರಿಯಲ್ಲಿ ಕಾಂಪಾಂಡ್ ಮಿಕ್ಸೆಡ್ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿತು.
ಬುಧವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 159–158 ರಿಂದ ಕೊರಿಯಾದ ಸೊ ಚೆವೊನ್– ಜೂ ಜಾಯೆಹೂನ್ ವಿರುದ್ಧ ರೋಚಕ ಗೆಲುವು ಸಾಧಿಸಿತು.
ಈ ಚಿನ್ನ ಸೇರಿದಂತೆ ಭಾರತದ ಆರ್ಚರಿ ಸ್ಪರ್ಧಿಗಳು ಒಟ್ಟು ನಾಲ್ಕು ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಆರ್ಚರಿ ತಂಡದ ಅತ್ಯುತ್ತಮ ಸಾಧನೆ ಇದು. 2014ರ ಕೂಟದಲ್ಲಿ ಮೂರು ಪದಕ (ತಲಾ ಒಂದು ಚಿನ್ನ, ಬೆಳ್ಳಿ. ಕಂಚು) ಜಯಿಸಿದ್ದು ಇದುವರೆಗಿನ ಉತ್ತಮ ಸಾಧನೆ ಎನಿಸಿಕೊಂಡಿತ್ತು.
ಫೈನಲ್‌ನಲ್ಲಿ 21 ವರ್ಷದ ಓಜಸ್ ಅವರು ಒಂದು ಪಾಯಿಂಟ್ ಕಳೆದುಕೊಂಡರೂ, ಜ್ಯೋತಿ ಅವರು ನಿಖರ ಗುರಿ ಸಾಧಿಸುವ ಮೂಲಕ ಅದನ್ನು ಸರಿದೂಗಿಸಿಕೊಂಡು ಚಿನ್ನದ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
140 ನಿಮಿಷಗಳಲ್ಲಿ ಮೂರು ನಾಕೌಟ್ ಪಂದ್ಯಗಳನ್ನು (ಕ್ವಾರ್ಟರ್ ಫೈನಲ್, ಸೆಮಿ ಮತ್ತು ಫೈನಲ್) ಆಡಬೇಕಾಗಿ ಬಂದರೂ ಭಾರತದ ಜೋಡಿ ಒತ್ತಡಕ್ಕೆ ಒಳಗಾಗದೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿತು.
27 ವರ್ಷದ ಜ್ಯೋತಿ ಅವರು ನಿರ್ಣಾಯಕ ಘಟ್ಟಗಳಲ್ಲಿ ತಂಡದ ನೆರವಿಗೆ ನಿಂತರು. ಭಾರತದ ಜೋಡಿ ನಾಕೌಟ್ ಹಂತದ ಮೂರು ಪಂದ್ಯಗಳಲ್ಲಿ ಕೇವಲ ನಾಲ್ಕು ಪಾಯಿಂಟ್ಸ್‌ಗಳನ್ನು ಮಾತ್ರ ಕಳೆದುಕೊಂಡಿತು.
‘ಈ ಫಲಿತಾಂಶ ನನಗೆ ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ ಚಿನ್ನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಫೈನಲ್‌ನಲ್ಲಿ ತುರುಸಿನ ಪೈಪೋಟಿ ನಡೆಯಿತು. ಒತ್ತಡ ಎದುರಾದಾಗ ತಾಳ್ಮೆ ವಹಿಸಿ ಯಶಸ್ಸು ಸಾಧಿಸಿದೆವು’ ಎಂದು ಓಜಸ್ ಪ್ರತಿಕ್ರಿಯಿಸಿದರು.
ಭಾರತದ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ 158–155 ರಿಂದ ಮಲೇಷ್ಯಾ ತಂಡವನ್ನು ಮಣಿಸಿದ್ದರೆ, ಸೆಮಿಫೈನಲ್‌ನಲ್ಲಿ 159–154 ರಿಂದ ಕಜಕಸ್ತಾನ ಎದುರು ಗೆಲುವು ಸಾಧಿಸಿತ್ತು.
ರಿಕರ್ವ್ ವಿಭಾಗದಲ್ಲಿ ನಿರಾಸೆ: ಭಾರತ ರಿಕರ್ವ್ ಮಿಕ್ಸೆಡ್ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿತು. ಅತಾನು ದಾಸ್ ಮತ್ತು ಅಂಕಿತಾ ಭಕತ್ ಜೋಡಿ 4–5 ರಿಂದ (36-35, 35-36, 38-35, 34-40) (19-20) ಇಂಡೊನೇಷ್ಯಾ ಎದುರು ಪರಾಭವಗೊಂಡಿತು. ಒಂದು ಹಂತದಲ್ಲಿ 4–2 ರಿಂದ ಮುನ್ನಡೆ ಸಾಧಿಸಿದ್ದ ಭಾರತದ ಜೋಡಿ, ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.