ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪಾಸಾಗಲು ‘ದಾರಿದೀಪ’

Last Updated 28 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪಾಸಾಗಲು ಬೇಕಾಗುವ ಕನಿಷ್ಠ ಅಂಕಗಳ ಆಸುಪಾಸಿನಲ್ಲಿಯೇ ಫೇಲಾಗುವ ಮಕ್ಕಳ ಸಂಖ್ಯೆಯೇ ಹೆಚ್ಚು. ಒಂದೆರಡರಿಂದ ಐದಾರು ಅಂಕಗಳ ಅಂತರದಲ್ಲಿ ಇವರು ಅನುತ್ತೀರ್ಣರೆಂಬ ಮೂದಲಿಕೆಗೆ ಒಳಗಾಗಿರುತ್ತಾರೆ. ಇಂಥವರನ್ನು ತೇರ್ಗಡೆಯ ದಡ ಮುಟ್ಟಲು ಸಹಾಯ ಮಾಡುವಂಥ ಯೋಜನೆ ‘ದಾರಿದೀಪ’ ಮಂಗಳೂರು ಜಿಲ್ಲೆಯಲ್ಲಿ ಕಾರ್ಯ ರೂಪಕ್ಕೆ ಬಂದಿದೆ.

ಮಂಗಳೂರು ಜಿಲ್ಲೆಯ 2013-14 ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವು ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಕುಸಿದಿತ್ತು. ಶೈಕ್ಷಣಿಕ ಪ್ರಗತಿಗಾಗಿ ಈ ವರ್ಷ ‘ದಾರಿದೀಪ’ ಎಂಬ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ಉತ್ತೀರ್ಣರಾಗದ ಮಕ್ಕಳನ್ನು ಗುರುತಿಸಿ, ಹೆಚ್ಚಿನ ತರಬೇತಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪುತ್ತೂರು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ ತಮ್ಮ ಸಹದ್ಯೋಗಿ ಶಿಕ್ಷಕ ಶಿಕ್ಷಕಿಯರೊಂದಿಗೆ ಸಮಾಲೋಚಿಸಿ, ಈ ಯೋಜನೆಯ ರೂಪುರೇಶೆಗಳನ್ನು ಸಿದ್ಧಪಡಿಸಿದರು.

ಆಗಸ್ಟ್‌ ತಿಂಗಳಿನಿಂದಲೇ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ಸಾಲಿನ (2014–15) ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ವಿಶೇಷ ಮಾರ್ಗದರ್ಶನ, ತರಬೇತಿ, ಬೆಂಬಲ ನೀಡಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗದಿರಲು ಹೊಸ ದಾರಿಯನ್ನು ಶೋಧಿಸಿದರು. ಹಲವಾರು ಶಿಕ್ಷಣ ತಜ್ಞರೂ, ಶಿಕ್ಷಕರು, ಪಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಶೇ.60 ಅಂಕಗಳಿಗಿಂತ ಹೆಚ್ಚು ಗಳಿಸುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಪದವಿಪೂರ್ವ ತರಗತಿಗೆ ಅಥವಾ ಇತರ ಡಿಪ್ಲೊಮಾ ತರಗತಿಗಳಿಗೆ ದಾಖಲಾಗಿ ವಿದ್ಯಾಭ್ಯಾಸ ಮುಂದುವರಿಸಬಲ್ಲರು. ಆದರೆ 20ರಿಂದ 30 ಅಂಕಗಳನ್ನು ಮಾತ್ರ ಪಡೆಯುವ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಏನು? ಪಾಸಾಗುವ ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ ಅವರೂ ವೈಫಲ್ಯದ ಆ ಗೆರೆಯನ್ನು ದಾಟಬಹುದು.  

ಸರ್ಕಾರಿ ಪ್ರೌಢಶಾಲೆಗಳಲ್ಲಿ ‘ಫೇಲ್’ ಆಗುವವರ ಸಂಖ್ಯೆ ಅಧಿಕವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸರಕಾರಿ ಶಾಲೆಗಳಲ್ಲಿ ಈ ಶ್ರೇಣಿಯ ವಿದ್ಯಾರ್ಥಿಗಳನ್ನು ಗುರುತಿಸಿ, ತಿಳಿ ಹೇಳಿ, ಮನನ ಮಾಡಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಮಾಡುವುದೇ ‘ದಾರಿ ದೀಪ’ವಾಗಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿರುವ ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ವೃಂದದವು 5995. ಎಲ್ಲರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ಈ ಶೈಕ್ಷಣಿಕ ಪ್ರಯೋಗವನ್ನು ಕೈಗೆತ್ತಿಕೊಳ್ಳಲಾಗಿದೆ.

ಶೈಕ್ಷಣಿಕ ಕ್ರಾಂತಿಗೆ ನಾಂದಿ
‘ಮಿಷನ್ 95+’ ಎಂಬ ಶೀರ್ಷಿಕೆಯಡಿ ಪ್ರೌಢಶಾಲೆಯ ಹತ್ತನೇಯ ತರಗತಿಗೆ ಪಾಠ ಹೇಳಿಕೊಡುವ ಶಿಕ್ಷಕ ಶಿಕ್ಷಕಿಯರು ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಪಠ್ಯಗಳಿಗೆ ಕಿರುಹೊತ್ತಿಗೆಗಳನ್ನು ಸಿದ್ಧಪಡಿಸಿದರು. ಕನಿಷ್ಠ ಅಂಕಗಳನ್ನು ಗಳಿಸುವಷ್ಟಾದರೂ ಮಕ್ಕಳನ್ನು ತಯಾರು ಮಾಡುವುದು ಈ ಕಿರುಹೊತ್ತಿಗೆಗಳ ಉದ್ದೇಶವಾಗಿದೆ. ಗುಣಾಂಕಗಳನ್ನು ಗಳಿಸುವುದಷ್ಟೇ ಅಲ್ಲ, ಕಲಿಕೆಯನ್ನು ಸರಳಗೊಳಿಸುವುದು ಆಸಕ್ತಿದಾಯಕವಾಗಿಸುವುದೂ ಈ ಯೋಜನೆಯ ಉದ್ದೇಶವಾಗಿದೆ. ಬರುವುದಿಲ್ಲ ಎಂಬ ಕಾರಣಕ್ಕೆ ಆಸಕ್ತಿ ಕಳೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹುಟ್ಟಿಸಲು ಈ ಕಿರುಹೊತ್ತಿಗೆ ಸಹಾಯಕವಾಗಿದೆ.

ಈ ಪುಟ್ಟ ಪುಸ್ತಕಗಳಿಗೆ ‘ದಾರಿದೀಪ’ ಎಂದು ಹೆಸರಿಡಲಾಗಿದೆ. ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ದಿನಚರಿ ಅನೂಚಾನವಾಗಿ ಅನುಸರಿಸಲು ‘ಕಲಿಕಾ ಕೌಶಲ’ ಮತ್ತು ‘ಪರೀಕ್ಷಾ ತಯಾರಿ’ ಮತ್ತೊಂದು ಕೈಪಿಡಿಯನ್ನೂ ವಿತರಿಸಲಾಯಿತು. ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ವರ್ಧಿಸಲು, ವಿಶೇಷ ಕಲಿಕಾ ಆಸಕ್ತಿ ಬೆಳೆಯಲು ಶಿಕ್ಷಕಶಿಕ್ಷಕಿಯರು ಪಾಲ್ಗೊಳ್ಳುವಿಕೆ ಹಾಗೂ ಕಾರ್ಯವೈಖರಿ ಈ ಯೋಜನೆಯನ್ನು ಯಶಸ್ಸಿನತ್ತ ಕರೆದೊಯ್ಯಬಹುದು ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ. ಕಳೆದ ಬಾರಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಫಲಿತಾಂಶ ತೃಪ್ತಿದಾಯಕವಾಗಿರಲಿಲ್ಲ. ಅಂಕಿಅಂಶಗಳನ್ನು ಗಮನಿಸಿದರೆ ಖಾಸಗಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದರು.

0 (ಸೊನ್ನೆಯಿಂದ) 30 ಅಂಕಗಳನ್ನು ತೆಗೆಯೋ ಮಕ್ಕಳು ಹೆದರಬೇಕಾಗಿಲ್ಲ... ನೀವು ಕನಿಷ್ಠ 30ರಿಂದ 45 ಅಂಕ ಪಡೆಯುವ ಒಂದು ಆಶಾಕಿರಣ ಕೈಪಿಡಿ ಎಂಬ ವಾಕ್ಯಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ವಿದ್ಯಾರ್ಥಿಗಳ ಜ್ಞಾನದಾಹ, ಪಾಠಪ್ರವಚನ ಸ್ವೀಕರಿಸುವ, ಜ್ಞಾಪಕದಲ್ಲಿಟ್ಟುಕೊಳ್ಳುವ ಗುಣಾತ್ಮಕ ಅಂಶಗಳನ್ನು ಮಾರ್ಗದರ್ಶನ ನೀಡುವ ಶಿಕ್ಷಕರು ಗಮನದಲ್ಲಿರಿಸಿದ್ದಾರೆ.
ನಕಾರಾತ್ಮಕ ಭಾವನೆ ತೊಲಗಿಸಿ ಶಾಲೆಯ ತರಗತಿಯಲ್ಲಿ ಮತ್ತು ಮನೆಯಲ್ಲಿ ಓದಲು, ಬರೆಯಲು, ಪುನರಾವರ್ತನೆ ಮಾಡಲು ನಿಗದಿತ ಸಮಯವನ್ನು ಬಳಸಿಕೊಳ್ಳುವಂತೆ ಮಕ್ಕಳ ಹೆತ್ತವರಿಗೂ ತಿಳಿಸಲಾಗಿದೆ.

ಪ್ರಾತಃಕಾಲ ಐದೂವರೆ ಗಂಟೆಗೆ ಕರೆಗಂಟೆ ಕೊಟ್ಟು, ದೂರವಾಣಿಯಲ್ಲಿ ‘ಎದ್ದಿದ್ದೀಯಾ... ಯಾವ ವಿಷಯ ಅಭ್ಯಾಸ ಮಾಡುತ್ತಿದ್ದಿ... ಸಂದೇಹಗಳಿವೆಯೇ...’ ಎಂದು ವಿದ್ಯಾರ್ಥಿಗಳನ್ನು  ವಿಚಾರಿಸುವ ಕೆಲಸವೂ ನಿಯಮಿತವಾಗಿ ನಡೆಯುತ್ತಿದೆ. ಆಗಾಗ ಮೌಲ್ಯಮಾಪನ ಮಾಡಿ ಗಡಿಯಂಚಿನ ವಿದ್ಯಾರ್ಥಿಗಳ ಮನಃಸ್ಥಿತಿಯನ್ನೂ ಕಂಡುಕೊಳ್ಳಲಾಗುತ್ತಿದೆ.

ಇದೀಗ ಜನವರಿ ತಿಂಗಳಿನಲ್ಲಿ ‘ಮನೆ ಮನ ಭೇಟಿ’ ರೂಪು ರೇಷೆ- ಸಿದ್ಧಗೊಂಡಿದೆ. ವಿದ್ಯಾರ್ಥಿಗಳ ತಂದೆತಾಯಿ, ಪೋಷಕರೊಂದಿಗೆ ವಿದ್ಯಾರ್ಥಿಯ ವಿದ್ಯಾಭ್ಯಾಸದ ವಾಸ್ತವ ಚಿತ್ರಣವನ್ನು ಅವಲೋಕಿಸಲಾಗುವುದು. ಕ್ಷೇತ್ರ ಸಂದರ್ಶನದ ಮೂಲಕ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ದೊರಕುವ ಅವಕಾಶ, ಸಮಯದ ಸದುಪಯೋಗದ ಕುರಿತು ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಲಾಗುವುದು. ಇದು ಶೈಕ್ಷಣಿಕ ಪ್ರಗತಿಯ ಪಥ ಎತ್ತ, ಎಂತು, ಏಕೆ ಎಂಬ ವಿಚಾರದಲ್ಲಿ ತಳಸ್ಪರ್ಶಿ ಅವಲೋಕನ ಆಗಬೇಕೆನ್ನುವ ಉದ್ದೇಶ ಹೊಂದಿದೆ.

ಇಂಗ್ಲಿಷ್, ಗಣಿತ, ವಿಜ್ಞಾನ ಪಠ್ಯ ವಿಷಯಗಳು ‘ಕಬ್ಬಿಣದ ಕಡಲೆಕಾಯಿ ಅಲ್ಲ’ ಎಂಬುದನ್ನು ‘ದಾರಿದೀಪ’ ತಿಳಿಸಿದೆ. ವಿದ್ಯಾರ್ಥಿಗಳ ಕನಸು ಭಗ್ನಗೊಳ್ಳದಂತೆ ಜ್ಞಾನದಾಹ ವೃದ್ಧಿಗಾಗಿ ಶಿಕ್ಷಕವೃಂದದವರ ಸಂಪೂರ್ಣ ಸುರಕ್ಷಾ ನೀತಿ ಬೋಧನೆ ಮಾಡಲಾಗುತ್ತಿದೆ.

ವಿದ್ಯಾರ್ಥಿಗಳ ‘ಮನೆ–ಮನ–ಭೇಟಿ’ ಕಾರ್ಯಕ್ರಮ ಜನವರಿ ತಿಂಗಳಲ್ಲಿ ಪೋಷಕರನ್ನೂ ಹುರಿದುಂಬಿಸಲಾಗುವುದು. ಪೋಷಕರ ಪಾಲ್ಗೊಳ್ಳುವಿಕೆ, ಅವರಿಂದ ಒತ್ತಡವಿರದ ವಾತಾವರಣ ನಿರ್ಮಾಣ, ವಿದ್ಯಾರ್ಥಿ ಸ್ನೇಹಿ ಪರಿಸರ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಯೋಜನೆಯ ಫಲಿತಾಂಶಕ್ಕೆ ವಿದ್ಯಾರ್ಥಿಗಳೊಂದಿಗೆ ಆಡಳಿತವರ್ಗವೂ ಶಿಕ್ಷಕ ವೃಂದವೂ ಕಾಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT