ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ ಗೊತ್ತಿದ್ದರೂ ರಂಗೋಲಿ ಕೆಳಗೆ ನುಸುಳುವ ಕ್ರೀಡಾಪಟುಗಳು

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕೆಲವು ದಿನಗಳ ಹಿಂದೆ ಶಾಲಾ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿತ್ತು. ವಿದ್ಯಾರ್ಥಿಗಳು, ಯುವಕರು ಮಾದಕ ವ್ಯಸನಿಗಳಾಗಬಾರದು ಎಂಬ ಸಂದೇಶ ಸಾರುವ ಕಾರ್ಯಕ್ರಮ ಅದಾಗಿತ್ತು. ಮುಖ್ಯ ಅತಿಥಿಯಾಗಿದ್ದವರು ಅನಿಲ್ ಕುಂಬ್ಳೆ.

ಮಕ್ಕಳೆಲ್ಲ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನನ್ನು ಕಂಡು ಬಹಳ ಸಂತೋಷಪಟ್ಟರು. ಅನಿಲ್ ಬಹಳ ಚೆನ್ನಾಗಿ, ಮಕ್ಕಳಿಗೆಲ್ಲ ಅರ್ಥವಾಗುವ ಹಾಗೆ ಕನ್ನಡದಲ್ಲಿ ಮಾತನಾಡಿದರು. ನಾನು ಕಂಡಿರುವ ಪರಿಶುದ್ಧ ಕ್ರೀಡಾಪಟುಗಳಲ್ಲಿ ಅನಿಲ್ ಒಬ್ಬರು. ಆ ಶಿಸ್ತಿನಿಂದಲೇ ಅವರು ಖ್ಯಾತಿಯ ಶಿಖರವನ್ನೇರಿದವರು. ಕ್ರೀಡೆ ಹೇಗೆ ಸುಂದರ ಬದುಕನ್ನು ರೂಪಿಸುತ್ತದೆ ಮತ್ತು ಮಾದಕ ವ್ಯಸನಗಳಿಂದ ಬದುಕು ಹೇಗೆ ಹಾಳಾಗುತ್ತದೆ ಎಂಬುದನ್ನು ಅವರು ಚೆನ್ನಾಗಿಯೇ ವಿವರಿಸಿದರು.
 
ಒಬ್ಬ ಕ್ರೀಡಾಪಟುವಿನ ಕನಸು ನನಸಾಗಬೇಕಾದರೆ ಆತ ಕಷ್ಟಪಡಲೇಬೇಕಾಗುತ್ತದೆ. ಗದುಗಿನಂಥ ಒಂದು ಸಣ್ಣ ಊರಿನಿಂದ ಬಂದು ಟೆಸ್ಟ್ ಆಟಗಾರನಾದ ಸುನೀಲ್ ಜೋಶಿ ಅವರ ಉದಾಹರಣೆ ಕೊಟ್ಟ ಅನಿಲ್, ಮಕ್ಕಳ ಭವಿಷ್ಯ ಉಜ್ವಲವಾಗಲು ಕ್ರೀಡೆಯ ಅಡಿಪಾಯ ಅಗತ್ಯ ಎಂದು ಹೇಳಿದ್ದು ಪರಿಣಾಮಕಾರಿಯಾಗಿತ್ತು.

ಮಕ್ಕಳೆಲ್ಲ ತಮ್ಮ ಜೀವನದಲ್ಲಿ ಎಂದೂ ಮಾದಕ ವ್ಯಸನಿಗಳಾಗುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟರು. ಹೌದು, ಕ್ರೀಡೆ ಆರೋಗ್ಯಕರ ಸಮಾಜವನ್ನು ಖಂಡಿತವಾಗಿಯೂ ನಿರ್ಮಿಸಬಲ್ಲದು. ಹದಿವಯಸ್ಸಿನಲ್ಲಿ ಕ್ರೀಡೆಗೆ ಕಾಲಿಡುವ ಮಕ್ಕಳು ಸಾಮಾನ್ಯವಾಗಿ ಸಿಗರೇಟು ಮತ್ತು ಮದ್ಯ ಸೇವನೆಯಂಥ ಚಟಗಳ ಕಡೆ ಗಮನಕೊಡುವುದಿಲ್ಲ.
 
ಅದರಿಂದ ಅವರ ಆರೋಗ್ಯ ಕೆಡುತ್ತದೆ ಎಂಬುದು ಅವರಿಗೆ ಗೊತ್ತಿರುತ್ತದೆ. ಈಗ ಹುಡುಗರು ಕಾಲೇಜು ಸೇರಿದ ಮೇಲೆ   ಸಿಕ್ಸ್ ಪ್ಯಾಕ್ ಮೈಕಟ್ಟಿನ ಕಡೆ ಹೆಚ್ಚು ಗಮನಹರಿಸುತ್ತಿದ್ದಾರೆ. ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇಲ್ಲೊಂದು ಸಣ್ಣ ತೊಂದರೆ ಇದೆ. ಮಾಂಸಖಂಡಗಳ ಬೆಳವಣಿಗೆಗೆ ಅವರು ಕೆಲವು ನಿಷೇಧಿತ ಮದ್ದು ಅಥವಾ ಔಷಧಿಗಳನ್ನು ಸೇವಿಸುವ ಅಪಾಯ ಇರುತ್ತದೆ.

ತಾತ್ಕಾಲಿಕವಾಗಿ ಅದರ ಪರಿಣಾಮ ಚೆನ್ನಾಗಿಯೇ ಇದ್ದರೂ ನಂತರ ಅವರು ಬಹಳಷ್ಟು ಸಮಸ್ಯೆಗಳನ್ನು  ಎದುರಿಸಬೇಕಾಗುತ್ತದೆ. ಒಂದು ಹಂತ ದಾಟಿದ ಕ್ರೀಡಾಪಟುಗಳೂ ಇದಕ್ಕೆ ಬಲಿಬೀಳುತ್ತಿದ್ದಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಯಶಸ್ಸಿನ ಗುರಿಯಲ್ಲಿ ನೇರ ಮಾರ್ಗ ಬಿಟ್ಟು ಅಡ್ಡದಾರಿ ಹಿಡಿಯುತ್ತಾರೆ. ಸಿಕ್ಕಿಬಿದ್ದಾಗ ಅವರ ಕನಸಿನ ಅರಮನೆ  ಅರಗಿನ ಅರಮನೆಯಂತೆ ಸುಟ್ಟುಹೋಗುತ್ತದೆ.

ಈಗ ಒಲಿಂಪಿಕ್ಸ್ ಸಮಯ. ಇನ್ನೇನು ಕೆಲವೇ ದಿನಗಳಲ್ಲಿ ಲಂಡನ್ ಒಲಿಂಪಿಕ್ ಕ್ರೀಡೆಗಳು ಆರಂಭ. ಈ ಕ್ರೀಡೆಗಳಲ್ಲಿ ಎಷ್ಟು ಜನ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬೀಳುತ್ತಾರೋ ಗೊತ್ತಿಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಎಷ್ಟೇ ಬಿಗಿ ನಿಯಮಗಳನ್ನು ಹೇರಿದರೂ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ರಂಗೋಲಿ ಕೆಳಗೆ ನುಸುಳಲು ಯತ್ನಿಸುತ್ತಾರೆ.

ಕ್ರಿಕೆಟ್‌ನಲ್ಲಿ ಮೋಸದಾಟ ಅಥವಾ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಹೇಗೆ ಕಳಂಕವೋ, ಒಲಿಂಪಿಕ್ಸ್ ಮತ್ತು ಇತರ ವಿಶ್ವ ದರ್ಜೆ ಕ್ರೀಡಾಕೂಟಗಳಲ್ಲಿ ಉದ್ದೀಪನ ಮದ್ದು ಸೇವನೆ ದೊಡ್ಡ ಕಳಂಕ. ಇದೂ ಒಂದು ರೀತಿಯ ಮೋಸದಾಟವೇ. ಒಬ್ಬ ಕ್ರೀಡಾಪಟು ತನ್ನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉದ್ದೀಪನ ಮದ್ದುಗಳ ಮೊರೆಹೋಗುವುದು ಕ್ರೀಡೆಯ ಮೂಲ ಸಿದ್ಧಾಂತಕ್ಕೇ ವಿರುದ್ಧವಾದದ್ದು.
 
`ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಪದಕ ಗೆಲ್ಲುವುದಲ್ಲ~ ಎಂಬುದೇ ಧ್ಯೇಯವಾಕ್ಯವಾಗಿತ್ತು. ಮೊದಲು ಹವ್ಯಾಸಿ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದ ಒಲಿಂಪಿಕ್ ಕ್ರೀಡೆ ಈಗ ವೃತ್ತಿಪರ ಆಟಗಾರರಿಗೆ ಮುಕ್ತವಾಗಿದೆಯಾದರೂ, ಇಲ್ಲಿ ಸಹಜ ವಿಧಾನಗಳಿಂದ ಸಾಧನೆ ತೋರುವವರಿಗೆ ಮಾತ್ರ ಬೆಲೆ, ಗೌರವ.

ಆದರೂ ಕ್ರೀಡಾಪಟುಗಳು ಇದರ ಮೋಹದಿಂದ ಹೊರಬಂದಿಲ್ಲ. ಒಲಿಂಪಿಕ್ ಕ್ರೀಡೆಗಳಲ್ಲಿ ಗೆಲ್ಲುವ ಒಂದು ಪದಕ ಅವರಿಗೆ ಖ್ಯಾತಿಯ ಜೊತೆ ಹಣದ ಮಳೆಯನ್ನೇ ಸುರಿಸುತ್ತದೆ. ಇದು ವೈಯಕ್ತಿಕ ಆಸೆಯಾದರೆ, ಒಂದು ರಾಷ್ಟ್ರ ತನ್ನ ಕ್ರೀಡಾಪಟುವಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ದೇಶದ ಪ್ರತಿಷ್ಠೆಗಾಗಿ, ರಾಜಕೀಯ ಉದ್ದೇಶಕ್ಕಾಗಿ ಕ್ರೀಡೆಯ ಬಳಕೆಯಾಗುತ್ತದೆ.

ಕ್ರೀಡಾಪಟು ಹೇಗಾದರೂ ಮಾಡಿ ಪದಕ ಗೆಲ್ಲಬೇಕೆಂಬ ಗುರಿಯಲ್ಲಿ ವ್ಯವಸ್ಥೆಯೇ ಆತನನ್ನು ಬಲಿಪಶುವನ್ನಾಗಿ ಮಾಡುತ್ತದೆ. ಪೂರ್ವ ಜರ್ಮನಿಯ ಕ್ರೀಡಾಪಟುಗಳು ಸರ್ಕಾರದ, ಕ್ರೀಡಾ ಸಂಸ್ಥೆಗಳ ಹಾಗೂ ತರಬೇತುದಾರರ ಬೆಂಬಲದೊಂದಿಗೇ ಉದ್ದೀಪನ ಮದ್ದು ಸೇವನೆಯ ಜಾಲದಲ್ಲಿ ಸಿಲುಕಿಕೊಂಡರು.

ಅವರ ಅಭೂತಪೂರ್ವ ಯಶಸ್ಸು ಬಂದಿದ್ದೇ ಈ ವಾಮಮಾರ್ಗದಿಂದ. ಒಲಿಂಪಿಕ್ ಇತಿಹಾಸದಲ್ಲಿ ಇದಕ್ಕೂ ಮೊದಲೇ ಕೆಲವು ಕ್ರೀಡಾಪಟುಗಳು ಗೆಲುವಿಗಾಗಿ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಿದ ಉದಾಹರಣೆಗಳಿವೆ. ಸಿಕ್ಕಿಬಿದ್ದರೆ ನೋಡಿಕೊಳ್ಳೋಣ ಎಂಬ ಉದಾಸೀನ ಮನೋಭಾವವೂ ಇಲ್ಲಿ ಕೆಲಸ ಮಾಡುತ್ತದೆ. ಆದರೆ ಮುಂದೆ ಆ ಮದ್ದು ದೇಹವನ್ನು ಕ್ಯಾನ್ಸರ್‌ನಂತೆ ಕೊರೆದುಬಿಡುತ್ತದೆ ಎಂಬ ಅರಿವು ಯಾರಿಗೂ ಇರುವುದಿಲ್ಲ ಅಥವಾ ಆ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗುತ್ತದೆ.
 
ಒಪ್ಪಂದದ ಮೇರೆಗೆ ನೇಮಕಗೊಳ್ಳುವ ತರಬೇತುದಾರ ತನ್ನ ಹಿತಾಸಕ್ತಿಯ ದೃಷ್ಟಿಯಿಂದಲೇ ಕೆಲಸ ಮಾಡುತ್ತಾನೆ. ಕ್ರೀಡಾಪಟುಗಳು ಯಶಸ್ವಿಯಾದರೆ ಮಾತ್ರ ಆತನಿಗೆ ಮರ್ಯಾದೆ ಹಾಗೂ ನೌಕರಿ. ಅನಕ್ಷರಸ್ಥ ಕ್ರೀಡಾಪಟುಗಳು ಸಹಜವಾಗಿಯೇ ಇವರ ಬಲೆಯಲ್ಲಿ ಬೀಳುತ್ತಾರೆ. ಉದ್ದೀಪನ ಮದ್ದಿನ ಬಗ್ಗೆ ಅವರಿಗೆ ಸ್ವಲ್ಪ ಗೊತ್ತಿದ್ದರೂ, ತರಬೇತುದಾರನನ್ನು ವಿರೋಧಿಸುವ ಧೈರ್ಯ ಅವರಿಗಿರುವುದಿಲ್ಲ. ಆದರೆ ಮಾನ ಹೋಗುವುದು ಕ್ರೀಡಾಪಟುವಿನದೇ ಹೊರತು ತರಬೇತುದಾರನದಲ್ಲ.

ಉದ್ದೀಪನ ಮದ್ದು ಸೇವನೆಯ ಪಿಡುಗಿನ ವಿರುದ್ಧ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವೈದ್ಯಕೀಯ ಆಯೋಗ ನಿಯಮಗಳನ್ನು ರೂಪಿಸಿತಾದರೂ, ಮದ್ದು ಸೇವನೆಯ ಪರೀಕ್ಷೆ ಆರಂಭವಾಗಿದ್ದು 1972 ರಿಂದ. ಸ್ಟಿರಾಯ್ಡ ಮತ್ತು ಇತರ ಉದ್ದೀಪನ ಔಷಧಗಳನ್ನು ನಿಷೇಧಿಸಲಾಯಿತು. ಆದರೆ ಪರೀಕ್ಷೆಯಲ್ಲಿ ಸಿಕ್ಕಿಬೀಳದಿರಲು, ತಾವು ಸೇವಿಸಿದ ಮದ್ದು ಪತ್ತೆಯಾಗದಂತೆ ಬೇರೊಂದು ಔಷಧಿಯನ್ನೂ ಪೂರ್ವ ಜರ್ಮನಿಯಲ್ಲಿ ಕಂಡುಹಿಡಿಯಲಾಗಿತ್ತು.

ಮುಂದೆ ಕೆಲವರಿಗೆ ಶಿಕ್ಷೆಯಾದರೂ, ಕ್ರೀಡೆಯಲ್ಲಿ ಉದ್ದೀಪನ ಮದ್ದು ಸೇವನೆ ತಳವೂರಿಬಿಟ್ಟಿತ್ತು. 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಬೆನ್ ಜಾನ್ಸನ್ ಸಿಕ್ಕಿಬಿದ್ದದ್ದು ಕ್ರೀಡಾಜಗತ್ತನ್ನೇ ಬೆಚ್ಚಿಬೀಳಿಸಿತು. ಅಲ್ಲಿಂದ ಉದ್ದೀಪನ ಮದ್ದು ಸೇವನೆ ಪರೀಕ್ಷೆಯನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಇದಕ್ಕೆ ವಿರುದ್ಧವಾಗಿ ತರಬೇತುದಾರರು ಬೇರೆ ಬೇರೆ ರೀತಿಯ ವಿಧಾನಗಳನ್ನು ಹುಡುಕತೊಡಗಿದರು.

ಚೀನಾದ ದೂರದ ಓಟಗಾರ್ತಿಯರಿಗೆ ಆಮೆ ರಕ್ತವನ್ನು ಕುಡಿಸಲಾಗುತ್ತಿತ್ತು ಎಂಬ ವರದಿಗಳಿವೆ. 1920 ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅಮೆರಿಕದ ಓಟಗಾರರಿಗೆ, ಓಟಕ್ಕೆ ಮೊದಲು ಶೆರ‌್ರಿ ಹಣ್ಣಿನ ರಸದಲ್ಲಿ ಹಸಿ ಮೊಟ್ಟೆಯನ್ನು ಬೆರೆಸಿ ಕುಡಿಸಲಾಗಿತ್ತು.       1904 ರ ಒಲಿಂಪಿಕ್ಸ್‌ನಲ್ಲಿ ಮ್ಯಾರಾಥಾನ್ ಓಟವನ್ನು ಗೆದ್ದ ಥಾಮಸ್ ಹಿಕ್ಸ್ ಎಂಬಾತ, ಓಟದ ಮಧ್ಯೆ ಶಕ್ತಿವರ್ಧಕ ಪೇಯದಲ್ಲಿ ಬ್ರಾಂಡಿ ಬೆರೆಸಿ ಕುಡಿದದ್ದು ಪತ್ತೆಯಾಗಿತ್ತು. 

1960 ಒಲಿಂಪಿಕ್ಸ್‌ನಲ್ಲಿ ಸೈಕ್ಲಿಂಗ್ ಸ್ಪರ್ಧಿಯೊಬ್ಬ ಸೈಕಲ್ ತುಳಿಯುತ್ತಿರುವಾಗ ಕುಸಿದು ಬಿದ್ದು ಸತ್ತೇ ಹೋದ. ಅಥ್ಲೆಟಿಕ್ ರಂಗದ ಬೆಡಗಿನ ಓಟಗಾರ್ತಿಯೆನಿಸಿದ್ದ ಫ್ಲೋರೆನ್ಸ್ ಗ್ರಿಫಿತ್ ಜಾಯ್ನರ್ ನಿವೃತ್ತಿಯ ನಂತರ ಬಹಳ ವರ್ಷ ಬದುಕಲಿಲ್ಲ. ನಿದ್ದೆಯಲ್ಲೇ ಅಸುನೀಗಿದ ಆಕೆ ಉದ್ದೀಪನ ಮದ್ದು ಸೇವಿಸುತ್ತಿದ್ದ ಅನುಮಾನಗಳಿದ್ದವು.
 
ಭಾರತದ ಡಿಸ್ಕಸ್ ಎಸೆತಗಾರ ಅಜಿತ್ ಭಾದುರಿಯ ತಮ್ಮ 32ನೇ ವಯಸ್ಸಿನಲ್ಲೇ ಸತ್ತುಹೋದರು. ಎರಡು ದಶಕಗಳ ಹಿಂದೆ, ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಎಸೆತಗಾರರಿಗೆ ತರಬೇತಿ ನೀಡುತ್ತಿದ್ದ ಜರ್ಮನಿಯ ತರಬೇತುದಾರರೊಬ್ಬರು ಉದ್ದೀಪನ ಮದ್ದು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಹೇಳುತ್ತಿದ್ದರು. `ಭಾರತದಲ್ಲಿ ಪಿ.ಟಿ. ಉಷಾ ಮತ್ತು ಎಸ್.ಡಿ. ಈಶನ್ ಬಿಟ್ಟರೆ ಹೆಚ್ಚು ಕಡಿಮೆ ಉಳಿದವರೆಲ್ಲರೂ ಉದ್ದೀಪನ ಮದ್ದು ಸೇವಿಸುತ್ತಾರೆ~ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಅನಾಬೊಲಿಕ್ ಸ್ಟಿರಾಯ್ಡ ಸೇವಿಸುವುದರಿಂದ ಮಹಿಳಾ ಅಥ್ಲೀಟುಗಳ ತಲೆ ಕೂದಲು ಪುರುಷರಂತೆ ಬೋಳಾಗುತ್ತದೆ, ಜೊತೆಗೆ ಮೀಸೆ ಗಡ್ಡ ಬೆಳೆಯುತ್ತದೆ, ಧ್ವನಿ ಗಡುಸಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಜೊತೆ, ಕ್ಯಾನ್ಸರ್ ಮತ್ತಿತರ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಬದುಕು ಅಸಹನೀಯವಾಗುತ್ತದೆ. ಆದರೂ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆಯ ಮೋಹದಿಂದ ಸಂಪೂರ್ಣವಾಗಿ ಹೊರಬಂದಿಲ್ಲ.

ಇಂದು ಒಲಿಂಪಿಕ್ ಕ್ರೀಡೆಗಳ ಧ್ಯೇಯವಾಕ್ಯ ಬದಲಾಗಿದೆ. ಇಲ್ಲಿ ಪದಕ ಗೆಲ್ಲುವುದೇ ಮುಖ್ಯ. ಕ್ರೀಡೆಯ ಮೂಲಮಂತ್ರ ಹಣ. ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ನಡುವಣ ಶೀತಲ ಸಮರದ ಹಿಂದೆ ವ್ಯಾಪಾರಿ ಅಂಶಗಳೇ ಇವೆ. ಇದರ ಮುಂದೆ ರಾಷ್ಟ್ರಪ್ರೇಮ ಗೌಣವಾಗಿಹೋಯಿತು. ಹಾಗೆಯೇ ಒಂದು ಪದಕಕ್ಕಾಗಿ ಭವಿಷ್ಯವನ್ನೇ ಪಣವಾಗಿಡುವ ಕ್ರೀಡಾಪಟುಗಳ ಧೋರಣೆ ಅರ್ಥವಾಗುವುದಿಲ್ಲ.

ಅನಿಲ್ ಕುಂಬ್ಳೆ ಮಕ್ಕಳಿಗೆ ಪಾಠ ಹೇಳಿದ್ದು ಸಾಮಾಜಿಕ ಕಳಕಳಿಯಿಂದ. ಅದು ಕ್ರೀಡಾಪಟುಗಳಿಗೆಲ್ಲರಿಗೂ ಅನ್ವಯವಾಗುತ್ತದೆ. ಯಾವ ಉದ್ದೀಪನ ಮದ್ದು ಸೇವಿಸದೇ, ಅಡ್ಡದಾರಿ ಹಿಡಿಯದೇ ಯಶಸ್ಸು ಗಳಿಸಿದ ಕ್ರಿಡಾಪಟುಗಳ ಸಂಖ್ಯೆ ದೊಡ್ಡದೇ ಇದೆ. ಸರಿಯಾದ ದಾರಿಯಲ್ಲಿ ಸಾಗಿದರೆ ಯಶಸ್ಸಿನ ಜೊತೆ ಹಣವು ಒಲಿದು ಬರುತ್ತದೆ.

ಒಲಿಂಪಿಕ್ ಕ್ರೀಡೆಗಳ ಸಂಭ್ರಮದಲ್ಲಿ ಸಕಾರಾತ್ಮಕವಾದ ಪೈಪೋಟಿ ಮುಖ್ಯವೇ ಹೊರತು ನಕಾರಾತ್ಮಕವಾದ ಉದ್ದೀಪನ ಮದ್ದು ಸೇವನೆ ಅಲ್ಲ. ಎಳೆಯ ಕ್ರೀಡಾಪಟುಗಳು ಇದನ್ನು ಗಮನಿಸಬೇಕು. ಆಮಿಷ ಒಡ್ಡುವ ತರಬೇತುದಾರರನ್ನು ದೂರ ಇಡಬೇಕು. ಸಮಸ್ಯೆಯನ್ನು ಮೂಲದಲ್ಲೇ ಚಿವುಟಿಹಾಕಿದರೆ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT