ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚನ ಕೌಶಲ ಇಗೋ 10 ಕ್ರಮ

Last Updated 20 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಓದು ಒಂದು ವಿಶಿಷ್ಟ ಸಾಮರ್ಥ್ಯ. ಸುಲಲಿತ ಅಧ್ಯಯನ ಮತ್ತು ಸ್ವತಂತ್ರ ಗ್ರಹಿಕೆಗೆ ಹೆದ್ದಾರಿ. ಬಹಳ ಹಿಂದೆ ತಿಳಿದಿದ್ದಂತೆ, ಇದು ಕೇವಲ ಪದಗಳನ್ನು ಶಬ್ದಗಳನ್ನಾಗಿ ಪರಿವರ್ತಿಸುವ ಕೌಶಲವಲ್ಲ. ಓದು ಅಕ್ಷರಗಳಿಗೆ ಅರ್ಥ ಕಲ್ಪಿಸಿ, ಬುದ್ಧಿಗೆ ಸಂದೇಶ ರವಾನಿಸಿ ವಿಚಾರಯುಕ್ತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ನೀಡುತ್ತದೆ.

ವಾಚನ ಕೌಶಲ ಹೊಸ ಪದಗಳನ್ನು ಅರಿತುಕೊಳ್ಳುವುದರ ಜೊತೆಗೆ (ಉಚ್ಚಾರ ಮತ್ತು ಕಾಗುಣಿತ ಸಹಿತ) ಬೌದ್ಧಿಕ ಗ್ರಹಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಹೀಗಾಗಿ  ಓದುವಿಕೆ ಒಬ್ಬ ವ್ಯಕ್ತಿಯ ಹಲವಾರು ಅಭಿವೃದ್ಧಿ ಪಥಗಳೊಡನೆ ಬೆಸೆದುಕೊಂಡಿರುತ್ತದೆ. ವಿಶಿಷ್ಟ ತರಬೇತಿ ಮತ್ತು ಸತತ ಓದಿನಿಂದ ಮಾತ್ರ ವಾಚನ ಕೌಶಲ ವೃದ್ಧಿಸಿಕೊಳ್ಳಲು ಸಾಧ್ಯ.

ವಾಚನ ಕೌಶಲ ಮತ್ತು ವಾಚನಾಭಿರುಚಿ ಒಂದಕ್ಕೊಂದು ಭಿನ್ನವಾದರೂ ಅವುಗಳ ನಡುವೆ ನಿಕಟ ಸಂಬಂಧ ಇದೆ. ಓದುವ ಹವ್ಯಾಸ ಇರುವವರಲ್ಲಿ ಒಳ್ಳೆಯ ವಾಚನ ಕೌಶಲ ಇರುತ್ತದೆ. ವಾಚನ ಕೌಶಲ ಒಳ್ಳೆಯ ಓದುಗರಾಗುವತ್ತ ಇಡುವ ಮುಖ್ಯ ಹೆಜ್ಜೆ. ವಾಚನ ಕೌಶಲ  ಕುಂಠಿತವಾದರೆ ವಾಚನಾಭಿರುಚಿ ಮತ್ತು ಪುಸ್ತಕ ಪ್ರೀತಿ ಬೆಳೆಸುವುದು ದುಸ್ತರ.

ಶೈಕ್ಷಣಿಕವಾಗಿಯೂ ಮಕ್ಕಳಿಗೆ ವಾಚನ ಕೌಶಲ ಅತ್ಯವಶ್ಯಕ. ಮಕ್ಕಳಲ್ಲಿ 8ರಿಂದ 13ರ ವಯೋಮಾನ ಓದುವ ಹವ್ಯಾಸ ಚಿಗುರೊಡೆಯಲು ಸುವರ್ಣಕಾಲ. ಈ ವಯಸ್ಸಿನಲ್ಲಿ ಓದಲು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಲು ಮಕ್ಕಳು ಅತೀವ ಆಸಕ್ತಿ ಹೊಂದಿರುತ್ತಾರೆ. ನಂತರದ ದಿನಗಳಲ್ಲಿ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳಿಂದಾಗಿ ಅವರ ಆಸಕ್ತಿ ಹಾಗೂ ಅಭಿರುಚಿಗಳಲ್ಲಿ ಬದಲಾವಣೆ ಆಗುತ್ತದೆ. ಓದಿನೆಡೆಗಿನ ಅವರ ಅದಮ್ಯ ಕುತೂಹಲವು ಪ್ರೀತಿ, ಸಾಹಸ ಇತ್ಯಾದಿಗಳಲ್ಲಿ ಚದುರಿ ಹೋಗಿ, ಓದಿನ ಹಂಬಲದ ಪ್ರೇರಣೆ ದುರ್ಬಲ ಆಗಬಹುದು.

ಇದೇ ವಯಸ್ಸಿನಲ್ಲಿ ಶಾಲೆಯ ಪಾಠ ಪ್ರವಚನಗಳಿಗೂ ಓದಿಗೂ ನಿಖರ ಸಂಬಂಧ ಬೆಳೆದು ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳಿಗೂ ಓದು ಪೂರಕ ಎನಿಸುತ್ತದೆ. ಮತ್ತೊಂದು ವೈಶಿಷ್ಟ್ಯ ಎಂದರೆ, ಪುಸ್ತಕಗಳ ಆಯ್ಕೆಯಲ್ಲಿ ಬಲವಂತ ಹೇರಿಕೆಯನ್ನು ಮಕ್ಕಳು ತಿರಸ್ಕರಿಸುವುದರಿಂದ ಮನೆ, ಶಾಲೆ, ಗ್ರಂಥಾಲಯ ಅಥವಾ ಪುಸ್ತಕದ ಅಂಗಡಿಗಳಲ್ಲಿ ಅವರಿಗೆ ಮುಕ್ತ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು ಎನ್ನುವುದನ್ನು ನಾವು ಮನಗಾಣಬೇಕು.

ಇಗೋ ಇಲ್ಲಿದೆ ಎಲ್ಲರೂ ಸುಲಭದಲ್ಲಿ ಪಾಲಿಸಬಹುದಾದ ವಾಚನ ಕೌಶಲ ರೂಢಿಸುವ ಹತ್ತು ಕ್ರಮಗಳು:

1. ನಿಗದಿತ ಸಮಯ ಕಾದಿರಿಸಿ: ದಿನನಿತ್ಯ ನಿಗದಿತ ಸಮಯಕ್ಕೆ ಗಟ್ಟಿಯಾಗಿ ಓದುವುದರಿಂದ ಗ್ರಹಿಕೆ, ಪದ ಸಂಪತ್ತಿನ ಸಾಮರ್ಥ್ಯ ವೃದ್ಧಿಸುವುದಲ್ಲದೆ, ಸ್ವತಃ ಓದುವ ಆಸೆ ಚಿಗುರೊಡೆಯುತ್ತದೆ.

2. ಾಚನ ಸಾಮಗ್ರಿ ಹೇರಳವಾಗಿರಲಿ: ಮನೆಯ ಒಳಗೆ ಮತ್ತು ಹೊರಗೆ ಎಲ್ಲೆಂದರಲ್ಲಿ, ಟಿ.ವಿ. ಪಕ್ಕದಲ್ಲಿ, ಮಲಗುವ ಕೋಣೆ, ಊಟದ ಮೇಜು, ಕಾರು, ತರಗತಿಗಳಲ್ಲಿ ಸೂಕ್ತ ಪುಸ್ತಕ ಮತ್ತು ಪತ್ರಿಕೆಗಳನ್ನು ಇರಿಸಿ ಅವು ಮಕ್ಕಳನ್ನು ಆಕರ್ಷಿಸುವಂತೆ ಮಾಡಿ. ಮನೆಯಲ್ಲಿನ ವೈವಿಧ್ಯಮಯ ಓದು ಶಾಲೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ನೆರವಾಗುವುದಿಲ್ಲ ಎಂದು ಭಾವಿಸಬೇಡಿ.

3. ಒಟ್ಟಿಗೆ ಓದಲು ಸಮಯ ಇರಲಿ: ಪ್ರತಿ ದಿನ ನಿಗದಿತ ವೇಳೆಯಲ್ಲಿ 15ರಿಂದ 30 ನಿಮಿಷ ಮನೆಮಂದಿಯೆಲ್ಲ ಒಟ್ಟಿಗೆ ನಿಶ್ಶಬ್ದವಾಗಿ ಓದುವ ಅಭ್ಯಾಸವನ್ನು ರೂಢಿಗೆ ತರುವುದು ಮಕ್ಕಳಿಗೆ ಸ್ಫೂರ್ತಿದಾಯಕ ಆಗುತ್ತದೆ.

4. ವಿವಿಧ ವಾಚನ ಸಾಮಗ್ರಿ: ಅವಕಾಶ ದೊರೆತಾಗೆಲ್ಲ ಎಲ್ಲೆಂದರಲ್ಲಿ ಮಕ್ಕಳನ್ನು ಓದಲು ಪ್ರೋತ್ಸಾಹಿಸಿ. ರಸ್ತೆಯಲ್ಲಿ ನಡೆಯುವಾಗ ನಾಮಫಲಕಗಳು, ಹೋಟೆಲ್‌ನಲ್ಲಿ ತಿನಿಸುಗಳ ಪಟ್ಟಿ, ಪತ್ರಿಕೆಗಳಲ್ಲಿನ ದಿನದ ಕಾರ್ಯಕ್ರಮಗಳು, ಹವಾಮಾನ ವರದಿ, ಸಿನಿಮಾ ಸಮಯ ಮತ್ತು ಮಂದಿರಗಳು ಇತ್ಯಾದಿ ದೈನಂದಿನ ಮಾಹಿತಿಗಳನ್ನು ಚಿಕ್ಕ ಮಕ್ಕಳು ಯಥೇಚ್ಛವಾಗಿ ಓದುತ್ತಿರಲಿ. ಬಿಡುವು ದೊರೆತಾಗೆಲ್ಲ, ಅಂದರೆ ಯಾವುದಕ್ಕಾದರೂ ಕಾಯುತ್ತಿರಬೇಕಾದರೆ, ಪ್ರಯಾಣಿಸುವಾಗ ಮಕ್ಕಳಿಗೆ ಏನನ್ನಾದರೂ ಓದಲು ಕೊಡಿ.

5. ್ರಂಥಾಲಯಗಳಿಗೆ ಕರೆದೊಯ್ಯಿರಿ: ಆಗಿಂದಾಗ್ಗೆ ಮಕ್ಕಳನ್ನು ಗ್ರಂಥಾಲಯಗಳಿಗೆ ಭೇಟಿ ಮಾಡಿಸಿ. ಮಕ್ಕಳ ವಿಭಾಗದ ಗ್ರಂಥಾಲಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವಂತೆ ಮಾಡಿ.

6. ಪ್ರಗತಿ ಗಮನಿಸಿ: ಪ್ರತಿ ಹಂತದಲ್ಲೂ ಶಾಲೆಯಲ್ಲಿನ ಮಕ್ಕಳ ಪ್ರಗತಿ ಪರಿಶೀಲಿಸುವಾಗ ವಾಚನ ಕೌಶಲದ ಬೆಳವಣಿಗೆಯನ್ನು ಗಮನಿಸಬೇಕು.

7. ೊಂದರೆ ಗುರುತಿಸಿ: ಮಕ್ಕಳಲ್ಲಿ ದೃಷ್ಟಿದೋಷ, ಉಚ್ಚಾರ, ಅರ್ಥ ಗ್ರಹಿಕೆ ಇತ್ಯಾದಿ ತೊಡಕುಗಳಿವೆಯೇ ಗಮನಿಸಿ.

8. ನಿವಾರಿಸಿ: ವಾಚನ ಕೌಶಲದ ಯಾವುದೇ ಅಡಚಣೆ ತನ್ನಷ್ಟಕ್ಕೆ ತಾನೇ ನಿವಾರಣೆ ಆಗುವುದಿಲ್ಲ. ಸಕಾಲದಲ್ಲಿ ಉಪಾಧ್ಯಾಯರು ಮತ್ತು ಅವಶ್ಯಕತೆ ಇದ್ದರೆ ವೈದ್ಯರ ಸಲಹೆ/ ಸಹಾಯ ಪಡೆದು ಸೂಕ್ತ ಬದಲಾವಣೆಗಳನ್ನು ಅಳವಡಿಸಲು ಪ್ರಯತ್ನಿಸಿ.

9. ವೈವಿಧ್ಯ ಇರಲಿ: ಪುಸ್ತಕ ಮತ್ತು ಪತ್ರಿಕೆಗಳಷ್ಟೇ ಅಲ್ಲದೆ ಆಟಿಕೆಗಳು, ಶ್ರವಣ ಮಾಧ್ಯಮ, ಕಂಪ್ಯೂಟರ್ ಇತ್ಯಾದಿ ವೈವಿಧ್ಯ ಪರಿಕರಗಳನ್ನು ಬಳಸಿ ಮಕ್ಕಳು ಓದುವ ಕೌಶಲ ಬೆಳೆಸಿಕೊಳ್ಳಲು ಅನುವು ಮಾಡಿಕೊಡಿ.

10. ಆಸಕ್ತಿ ವ್ಯಕ್ತಪಡಿಸಿ: ಪೋಷಕರ ಪ್ರತಿಕ್ರಿಯೆ ಮಕ್ಕಳ ಓದಿನ ಮೇಲೆ ಅಗಾಧ ಪರಿಣಾಮ ಬೀರಬಲ್ಲದು. ಆಗಿಂದಾಗ್ಗೆ ಮಕ್ಕಳ ಓದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿ.

ಪುಸ್ತಕಗಳನ್ನು ಓದುವ ಮಕ್ಕಳ ಶೈಕ್ಷಣಿಕ ಪ್ರಗತಿ ಶೇ 30ರಷ್ಟು ಅಧಿಕವಾಗಿರುತ್ತದೆ. ಇದು ಅವರಲ್ಲಿ ಹಲವು ವಿಷಯಗಳ ಬಗ್ಗೆ ಹೆಚ್ಚಿನ ಕುತೂಹಲ ಕೆರಳಿಸಿದ್ದು ದೃಢಪಟ್ಟಿದೆ.
-`ಅಂತರ ರಾಷ್ಟ್ರೀಯ ಮಕ್ಕಳ ವಾಚನಾಭಿರುಚಿ' ಅಧ್ಯಯನ, ಯುನೆಸ್ಕೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT