ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನೆ ಸುತ್ತಿಸುವುದು ಏಕೆ?

ಕೈ ಬರಹ- ಕೈಪಿಡಿ ಭಾಗ 23
Last Updated 12 ಮೇ 2013, 19:59 IST
ಅಕ್ಷರ ಗಾತ್ರ

ಪ್ರಶ್ನೆ: ಪರೀಕ್ಷೆಯಲ್ಲಿ ಬರೆಯುವಾಗ, ಚೆಕ್‌ಗೆ ಸಹಿ ಮಾಡುವಾಗ ಅಥವಾ ದಾಖಲೆಗಳಿಗೆ ಸಹಿ ಮಾಡುವಾಗ ಕೈ ನಡುಗುತ್ತದೆ, ಅಕ್ಷರಗಳು ಕೆಟ್ಟುಹೋಗುತ್ತವೆ, ಏಕೆ?
ಉತ್ತರ:  ಇದು ಕೇವಲ ಮಾನಸಿಕ ಸಮಸ್ಯೆ. ನಮ್ಮ ಮನಃಸ್ಥಿತಿಯು ಕೈಬರಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸೊಗಸಾದ ಉದಾಹರಣೆ ಇದು. ಈ ಸಮಸ್ಯೆ ಪರಿಹರಿಸಿಕೊಳ್ಳಲು ಮೇಲೆ ತಿಳಿಸಿದ ಕೆಲಸ ಮಾಡುವಾಗ ಸಹಜವಾದ ಮನಃಸ್ಥಿತಿ ಹೊಂದಬೇಕು ಅಷ್ಟೆ. ಯಾವುದೇ ಉದ್ವೇಗ ಅಥವಾ ಆತಂಕಕ್ಕೆ ಒಳಗಾಗಬಾರದು. ವೈದ್ಯಕೀಯ ಶಾಸ್ತ್ರದಲ್ಲಿ `ಮನೋದೈಹಿಕ ಸಮಸ್ಯೆ' (ಸೈಕೊ ಸೊಮ್ಯಾಟಿಕ್) ಎನ್ನುವ ಗುಂಪಿಗೆ ಇದು ಸೇರುತ್ತದೆ.

ಪ್ರಶ್ನೆ: ವಯಸ್ಸಾದವರೂ ಕೈಬರಹ ಸುಧಾರಿಸಿಕೊಳ್ಳಬಹುದೇ?
ಉತ್ತರ:  ಖಂಡಿತವಾಗಿ. ಆದರೆ ಆವರೆಗೆ ತಪ್ಪಾಗಿ ಆಗಿರುವ ಅಭ್ಯಾಸಗಳು ಆಳವಾಗಿ ಬೇರು ಬಿಟ್ಟಿರುತ್ತವೆ. ಅವುಗಳನ್ನು ಬೇರುಸಹಿತ ಕಿತ್ತೊಗೆಯಬೇಕು. ಇದಕ್ಕಾಗಿ ಹೆಚ್ಚಿನ ಸಮಯ, ಶ್ರಮ ಹಾಗೂ ಪ್ರಯತ್ನ ಅಗತ್ಯ. ನಿಮ್ಮ ಮನಸ್ಸಿನ ನಿರ್ಧಾರ ಶಕ್ತಿ ಮತ್ತು ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಬದಲಾವಣೆ ಕಂಡುಬರುತ್ತದೆ. ಸುಮಾರು 45 ವರ್ಷ ವಯಸ್ಸಿನ ವಕೀಲರೊಬ್ಬರು ನಾಲ್ಕು ತಿಂಗಳ ಕಾಲ ಪ್ರತಿ ಭಾನುವಾರ ಒಂದು ತಾಸಿನಂತೆ ನನ್ನ ಕೈಬರಹ ತರಗತಿಗೆ ಬರುತ್ತಿದ್ದರು. ಎಡಕ್ಕೆ ವಾಲಿಸಿ ಬರೆಯುತ್ತಿದ್ದ ಅವರು ಸತತ ಪ್ರಯತ್ನದಿಂದ ಕೈಬರಹವನ್ನು ಬದಲಾಯಿಸಿಕೊಂಡರು. ಅವರು ಹೇಳುತ್ತಾರೆ `ಕೇವಲ ಕೈಬರಹ ಅಷ್ಟೇ ಅಲ್ಲ ನನ್ನ ವ್ಯಕ್ತಿತ್ವದಲ್ಲೂ ಮಹತ್ವದ ಉತ್ತಮ ಬದಲಾವಣೆ ಆಗಿದೆ'.

ಪ್ರಶ್ನೆ: ಕೆಲವು ಶಿಕ್ಷಕರು ಕೈಬರಹ ಸುಧಾರಿಸಲು ಸೊನ್ನೆ ಸುತ್ತುವುದನ್ನು ಕಲಿಸುತ್ತಾರಲ್ಲ, ಏಕೆ?
ಉತ್ತರ:  ಕನ್ನಡ ಅಕ್ಷರಗಳು ಹೆಚ್ಚಾಗಿ ವೃತ್ತಗಳು ಹಾಗೂ ಅರ್ಧ ವೃತ್ತಗಳನ್ನು ಒಳಗೊಂಡಿವೆ. ಸರಳ ರೇಖೆಗಳು ತೀರಾ ವಿರಳ. ಸುಂದರವಾಗಿ ವಕ್ರರೇಖೆಗಳನ್ನು ಎಳೆಯಲು ಕೈ ಕುದುರಲಿ ಎಂದು ಹೀಗೆ ಮಾಡುತ್ತಾರೆ.

ಪ್ರಶ್ನೆ: ಹಿಂದಿನ ಕಾಲದವರ ಕೈಬರಹ ಚೆನ್ನಾಗಿತ್ತು, ಏಕೆ?
ಉತ್ತರ:  ಹಿಂದೆ ಮಕ್ಕಳಿಗೆ ಸ್ಲೇಟಿನಲ್ಲಿ ಅಕ್ಷರಗಳನ್ನು ಬರೆದುಕೊಟ್ಟು 50-100 ಸಾರಿ ಬಳಪದಿಂದ ತಿದ್ದಿ ಬರೆಯಲು ಹೇಳುತ್ತಿದ್ದರು. ಈಗ ಸೀದಾ ಕಾಪಿ ಬರೆಯುವುದಕ್ಕೇ ಮಕ್ಕಳು ಪ್ರಾರಂಭಿಸುತ್ತಾರೆ. `ತಿದ್ದಿ' ಬರೆಯುವುದು `ನೋಡಿ' ಬರೆಯುವುದಕ್ಕಿಂತ ಪರಿಣಾಮಕಾರಿ. ಆದ್ದರಿಂದಲೇ ಹಿಂದಿನವರ ಕೈಬರಹ ಚೆನ್ನಾಗಿರುತ್ತಿತ್ತು ಎಂದು ಕಾಣುತ್ತದೆ.

ಪ್ರಶ್ನೆ: ಕೆಲವು ಶಿಕ್ಷಕರ ಕೈಬರಹವೇ ಚೆನ್ನಾಗಿರುವುದಿಲ್ಲ. ಅಂಥವರು ಮಕ್ಕಳಿಗೆ ಹೇಗೆ ಕಲಿಸಬಲ್ಲರು?
ಉತ್ತರ:  ಸಂಗೀತ ಶಿಕ್ಷಕರಿಗೆ ಕಂಠ ಚೆನ್ನಾಗಿಲ್ಲದೆ ಇರಬಹುದು. ಆದರೆ ಸಂಗೀತ ಜ್ಞಾನ ಇರುತ್ತದೆ. ಹಾಗೆಯೇ ಶಿಕ್ಷಕರು `ಅಕ್ಷರಗಳ ಸೌಂದರ್ಯ ಪ್ರಜ್ಞೆ'ಯನ್ನು ತಾವೂ ಬೆಳೆಸಿಕೊಂಡು ಮಕ್ಕಳಿಗೂ ಕಲಿಸಲು ಸಾಧ್ಯವಿದೆ.

ಪ್ರಶ್ನೆ: ಕೈಬರಹ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದೊಡನೆ ಕೈಬರಹ ಸುಧಾರಿಸುತ್ತದೆಯೇ?
ಉತ್ತರ:  ಇಲ್ಲ. ಆದರೆ ಅಲ್ಲಿ ಕಲಿತ ಸಂಗತಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಉಳಿಸಿಕೊಳ್ಳಬೇಕು. ಕೈಬರಹ ಸುಧಾರಿಸಿಕೊಳ್ಳುವುದು ಹೇಗೆ ಎಂಬ `ಜ್ಞಾನ'ವನ್ನು ಮಾತ್ರ ಶಿಬಿರ ಅಥವಾ ಕಾರ್ಯಾಗಾರಗಳಲ್ಲಿ ಪಡೆಯಬಹುದು.

ಪ್ರಶ್ನೆ: ಎಲ್ಲರ ಅಕ್ಷರಗಳನ್ನೂ ಒಂದೇ ರೀತಿ ಇರುವಂತೆ ಮಾಡುವುದು ಅವೈಜ್ಞಾನಿಕ ಅಲ್ಲವೇ?
ಉತ್ತರ:  ಮಕ್ಕಳಲ್ಲಿ ಅಕ್ಷರಗಳ ಸೌಂದರ್ಯದ ಬಗೆಗಿನ ಮೂಲಭೂತ ಜ್ಞಾನವನ್ನು ಬೆಳೆಸಿ ಆ ನಂತರ ಅವರನ್ನು ಸ್ವತಂತ್ರವಾಗಿ ಬಿಡಬಹುದು. ಸುಂದರವಾಗಿರುವ ಎಲ್ಲ ಅಕ್ಷರಗಳೂ ಒಂದೇ ಬಗೆ ಆಗಿರುವುದಿಲ್ಲ. ಪ್ರತಿಯೊಬ್ಬರ ಕೈಬರಹದಲ್ಲೂ ಅವರ `ಅಸ್ತಿತ್ವ' ಇದ್ದೇ ಇರುತ್ತದೆ.

ಪ್ರಶ್ನೆ: ಇಂಗ್ಲಿಷನ್ನು ಯಾವಾಗಲೂ ಕೂಡಿಸಿಯೇ ಬರೆಯಬೇಕಾ?
ಉತ್ತರ:  ಹಾಗೇನಿಲ್ಲ. ಕೂಡಿಸಿ ಬರೆಯುವುದರಿಂದ ವೇಗವಾಗಿ ಬರೆಯಲು ಸಾಧ್ಯ. ಇದರಿಂದ ಪರೀಕ್ಷೆಗಳಲ್ಲಿ `ಸಮಯದ ನಿರ್ವಹಣೆ' ಮಾಡಲು ಸಾಧ್ಯವಾಗುತ್ತದೆ. ನಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಕೂಡಿಸಿ ಬರೆಯುವುದನ್ನು `ನಿಯಮ' ಎಂದು ತಿಳಿಯದೆ `ಅನುಕೂಲ' ಎಂದು ಭಾವಿಸುವುದು ಸೂಕ್ತ. ನಿಮಗೆ ಸಾಕಷ್ಟು ಸಮಯವಿದ್ದು, ಸಂದರ್ಭ ಹಾಗೂ ಉದ್ದೇಶ ಸಾಧನೆಗೆ ಬಿಡಿಸಿ ಬರೆಯುವುದೇ ಪರಿಣಾಮಕಾರಿ ಆಗುವುದಾದರೆ ಹಾಗೇ ಮಾಡಬಹುದು. ಆದರೆ ಕೂಡಿಸಿ ಬರೆಯುವುದನ್ನು ಕಲಿತಿರುವುದು ಲಾಭದಾಯಕ.

ಪ್ರಶ್ನೆ: ಅಕ್ಷರಗಳನ್ನು ಶೋಕಿಯಾಗಿ ಬರೆಯುವುದು ಸರಿಯೇ?
ಉತ್ತರ:  ಪುಸ್ತಕಗಳಲ್ಲಿ ನಿಮ್ಮ ಹೆಸರು ಬರೆಯುವಾಗಲೋ, ಶುಭಾಶಯ ಕೋರುವಾಗಲೋ ಹೀಗೆ ಬರೆದರೆ ತಪ್ಪೇನಿಲ್ಲ. ಆದರೆ ಪರೀಕ್ಷೆಯಲ್ಲಿ ಹೀಗೆ ಬರೆಯುವುದನ್ನು ಬಹಳಷ್ಟು ಶಿಕ್ಷಕರು ಸ್ವಾಗತಿಸುವುದಿಲ್ಲ. ಇದು ನಿಮ್ಮ `ಉದ್ಧಟತನ' ಎಂಬ ಸಂದೇಶ ನೀಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಚ್ಚರಿಕೆ.

ಪ್ರಶ್ನೆ: ಹತ್ತು ವರ್ಷಕ್ಕೇ ಮಕ್ಕಳಿಗೆ `ಅಕ್ಷರಗಳ ಸೌಂದರ್ಯ ಪ್ರಜ್ಞೆ' ಬೆಳೆಸಬೇಕೆಂದು ಹೇಗೆ ಹೇಳುತ್ತೀರಿ?
ಉತ್ತರ:  ಹತ್ತು ವರ್ಷ ಎಂಬುದೇನೂ ಲಕ್ಷ್ಮಣ ರೇಖೆಯಂತಹ ಗೆರೆಯಲ್ಲ. ಆ ವಯಸ್ಸಿಗೆ ಸಾಮಾನ್ಯವಾಗಿ ಮಕ್ಕಳಿಗೆ ಸ್ವಲ್ಪ ತಿಳಿವಳಿಕೆ ಬಂದಿರುತ್ತದೆ. ಸುತ್ತಲಿನ ಸಂಗತಿಗಳ ಬಗ್ಗೆ ಏಕೆ, ಹೇಗೆ ಎಂದು ಯೋಚಿಸಲು ಆರಂಭಿಸುವ ವಯಸ್ಸು ಅದು. ಕುಟುಂಬದ ಹಿನ್ನೆಲೆ, ಸಂಸ್ಕಾರ ಸಿಕ್ಕ ಮಕ್ಕಳಿಗೆ ಇನ್ನೂ ಬೇಗನೆ ಈ ಪ್ರಜ್ಞೆಯನ್ನು ಬೆಳೆಸಲು ಸಾಧ್ಯ.

ಪ್ರಶ್ನೆ: ಗಾಂಧೀಜಿ ವೇಗವಾಗಿ ಬರೆಯುವ ಸಲುವಾಗಿ ಮುಂಗೈ ಕೆಳಗೆ ಏನೋ ಪ್ಯಾಡ್ (ಸ್ಕೇಟಿಂಗ್ ಶೂ ಥರದ್ದು?) ಇಟ್ಟುಕೊಳ್ಳುತ್ತಿದ್ದರಂತೆ, ಹೌದೇ?
ಉತ್ತರ:  ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅಂತಹ ಯಾವುದೇ ಕೃತಕ ಸಲಕರಣೆಗಳು ಇಲ್ಲದೆಯೇ ವೇಗವನ್ನು ಸಾಧಿಸಬಹುದು.

ಪ್ರಶ್ನೆ: ನಮ್ಮ ಮಗಳು ಪ್ರದಕ್ಷಿಣಾಕಾರವಾಗಿ (ಕ್ಲಾಕ್‌ವೈಸ್) ಸೊನ್ನೆ ಸುತ್ತುತ್ತಾಳೆ. ಈ ಅಭ್ಯಾಸವನ್ನು ಬಿಡಿಸಬೇಕಾ?
ಉತ್ತರ:  ಪ್ರದಕ್ಷಿಣಾಕಾರವಾಗಿ ಸೊನ್ನೆ ಸುತ್ತುವುದು ಅಸಹಜ ಕ್ರಮ. ನಿಮ್ಮ ಮಗಳು ಎಷ್ಟು ದೊಡ್ಡವಳು, ಅವಳ ಈ ಅಭ್ಯಾಸ ಎಷ್ಟು ಆಳವಾಗಿದೆ ಎಂದು ನೀವು ತಿಳಿಸಿಲ್ಲ. ಸಾಧ್ಯವಾದರೆ ಅದನ್ನು ಬಿಡಿಸುವುದು ಒಳ್ಳೆಯದು.

ಮುಂದಿನ ವಾರ: ಶಿಕ್ಷಣ, ಶಿಬಿರ, ಕಾರ್ಯಾಗಾರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT