ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ದಾಟಿದರೂ ಕಸರತ್ತು ಜೋರು

Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

60 ದಾಟಿದ ಹಲವರು, ನಿವೃತ್ತಿ ಜೀವನವನ್ನು ನಿತ್ಯ ಬದುಕಿಗೂ ಅನ್ವಯಿಸಿಕೊಳ್ಳುತ್ತಾ, ಚಟುವಟಿಕೆ ಜೀವನದಿಂದ ವಿಮುಖರಾಗುತ್ತಾ ಕಾಲ ಕಳೆಯುತ್ತಾರೆ. ಅಮೆರಿಕದ ಕನೆಕ್ಟಿಕಟ್‌ನಲ್ಲಿರುವ ಲಾರೆನ್ ಬ್ರಜೋನ್ ವಯಸ್ಸು 72. ಆದರೂ ಯುವಕರು ನಾಚುವಂತೆ ನಿತ್ಯ ಕಸರತ್ತು ಮಾಡುತ್ತಿದ್ದಾರೆ. ಅವರು ವ್ಯಾಯಾಮ ಮಾಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ‌ ಮಾಡಿದ್ದಾರೆ. ವಕೀಲೆಯಾಗಿ ವೃತ್ತಿಜೀವನ ಆರಂಭಿಸಿದ ಅವರು, ನಿವೃತ್ತಿ ಜೀವನವನ್ನು ಜಿಮ್‌ಗಳಲ್ಲಿ ಕಳೆಯುತ್ತಾ ಆರೋಗ್ಯವನ್ನು ಅಪ್ಪಿಕೊಳ್ಳುತ್ತಿದ್ದಾರೆ.

‘ಐದು ವರ್ಷದ ಹಿಂದೆ ಕನೆಕ್ಟಿಕಟ್‌ನಲ್ಲಿರುವ ಕ್ರಾಸ್‌ಫಿಟ್‌ ಜಿಮ್‌ಗೆ ಸೇರಿದೆ, ಈ ವಯಸ್ಸಿನಲ್ಲಿ ಇಂತಹ ವ್ಯಾಯಾಮಗಳನ್ನು ಮಾಡಲು ಸಾಧ್ಯವೆ ಎಂದೆನಿಸಿತು. ಆದರೆ ಪ್ರಯತ್ನಿಸೋಣ ಎನಿಸಿತು. ನನ್ನ ಪ್ರಯತ್ನ ಫಲ ನೀಡುತ್ತಿದೆ. ನಿತ್ಯವೂ ಲವಲವಿಕೆಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

ಹಲವು ವ್ಯಾಯಾಮಗಳು

‘ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂದರೆ, ದೇಹ ದಂಡಿಸುವುದು ಅನಿವಾರ್ಯ’ ಎಂದು ಹೇಳುವ ಲಾರೆನ್, ಹಲವು ವರ್ಷಗಳಿಂದ ವಿವಿಧ ಬಗೆಯ ಕಸರತ್ತುಗಳನ್ನು ಮಾಡುತ್ತಾ ಫಿಟ್‌ನೆಸ್‌ ಕಾಪಾಡಿಕೊಂಡು ಬಂದಿದ್ದಾರೆ. ‘72ನೇ ವಸಂತಕ್ಕೆ ಕಾಲಿಟ್ಟಿದ್ದರೂ ಚರ್ಮ ಹೆಚ್ಚು ಸುಕ್ಕುಗಟ್ಟದಂತೆ ವ್ಯಾಯಾಮಗಳೇ ನೆರವಾಗಿವೆ’ ಎನ್ನುತ್ತಾರೆ ಅವರು.

‘ಜಿಮ್‌ಗೆ ಬರುವ ಯುವಕರು ಭಾರ ಎತ್ತುವುದನ್ನು ನೋಡಿದಾಗ, ನಾನೂ ಅವರಂತೆ ಭಾರ ಎತ್ತಬೇಕು ಎಂದು ಅನಿಸುತ್ತಿತ್ತು. ಆದರೆ, ನಾನು ಅವರಂತೆ 20ರ ಹರೆಯದವಳಲ್ಲ ಎಂಬುದು ನೆನಪಾಗುತ್ತಿತ್ತು. ಆದರೂ ಪ್ರಯತ್ನಿಸಬೇಕು ಎನಿಸಿತು. ಈಗಲೂ ಅಭ್ಯಾಸವಾಗಿದೆ, ಮುಂದುವರಿಸುತ್ತಲೇ ಇರುತ್ತೇನೆ’ ಎಂದು ಹೇಳುತ್ತಾರೆ.

‘ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕೆ ವಿವಿಧ ವ್ಯಾಯಾಮಗಳನ್ನು ಮಾಡಬೇಕು ಎಂದು ಯೋಚಿಸುವವರು ಇದ್ದಾರೆ. ಇಷ್ಟದ ನೃತ್ಯಾಭ್ಯಾಸ, ಏರೊಬಿಕ್ಸ್ ಕೂಡ ಫಿಟ್‌ನೆಸ್‌ ಹೆಚ್ಚಿಸುವ ಉತ್ತಮ ಮಾರ್ಗಗಳು. ನಿತ್ಯ ಯೋಗಾಭ್ಯಾಸ ಮಾಡುವುದರಿಂದಲೂ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು ಎಂಬುದು ಅರಿವಾಗಿದೆ. ಹೀಗಾಗಿ ಯೋಗಾಸನಗಳನ್ನೂ ಅಭ್ಯಾಸ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ ಅವರು.

ವಾರದಲ್ಲಿ ಎರಡು ದಿನ ನೃತ್ಯಾಭ್ಯಾಸ ಮಾಡಿದರೆ ಇನ್ನೆರಡು ದಿನ ಸ್ಟೆಪ್‌ ಏರೊಬಿಕ್ಸ್ ಮಾಡುತ್ತಾರೆ. ಇದರೆ ಜೊತೆಗೆ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಪುಷ್‌ಅಪ್ಸ್, ಭಾರ ಎತ್ತುವುದು, ದೊಡ್ಡ ಗಾಲಿಗಳನ್ನು ಎತ್ತುವುದು, ಡಂಬಲ್ಸ್ ಕಸರತ್ತು... ಹೀಗೆ ಎಲ್ಲ ಬಗೆಯ ವ್ಯಾಯಾಮಗಳನ್ನೂ ಅವರು ಮಾಡುತ್ತಾರೆ.

‘ನಿತ್ಯ ಜಿಮ್‌ಗೆ ಹೋಗಬೇಕು, ಫಿಟ್‌ನೆಸ್ ಕಾಪಾಡಿಕೊಳ್ಳಬೇಕು ಎಂಬ ಬಯಕೆ ಹಲವರಿಗೆ ಇರುತ್ತದೆ. ಆದರೆ, ಅಂದುಕೊಂಡಿದ್ದನ್ನು ಮಾಡಲಾಗದೇ ಸುಮ್ಮನಾಗುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಂತಹ ಅಡೆ–ತಡೆಗಳಿದ್ದರೂ ಮುನ್ನುಗ್ಗಿದರೆ, ಎಲ್ಲವೂ ಸಾಧ್ಯ. ಇದಕ್ಕಾಗಿ ಫಿಟ್‌ನೆಸ್ ಕಾಳಜಿ ಹೆಚ್ಚಿಸಿಕೊಳ್ಳಿ’ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT