ಎಫ್‌ಐಎಚ್ ಸಿರೀಸ್ ಫೈನಲ್ಸ್ ಹಾಕಿ: ಸೆಮಿಫೈನಲ್‌ಗೆ ಭಾರತ ಲಗ್ಗೆ

ಭುವನೇಶ್ವರ: ಆಕಾಶದೀಪ್ ಸಿಂಗ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರು. ಭಾರತ ಗೋಲುಗಳ ಮಳೆ ಸುರಿಸಿತು. ಎದುರಾಳಿ ಉಜ್ಬೆಕಿಸ್ತಾನವನ್ನು 10–0ಯಿಂದ ಮಣಿಸಿದ ಮನಪ್ರೀತ್ ಸಿಂಗ್ ಬಳಗ ಎಫ್‌ಐಎಚ್ ಸಿರೀಸ್ ಫೈನಲ್ಸ್ ಹಾಕಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಮೊದಲೆರಡು ಪಂದ್ಯಗಳಲ್ಲಿ ರಷ್ಯಾ (10–0) ಮತ್ತು ಪೋಲೆಂಡ್ (3–1) ವಿರುದ್ಧ ಅಮೋಘ ಜಯ ಸಾಧಿಸಿದ್ದ ಭಾರತ ಸೋಮವಾರ ರಾತ್ರಿ ಇಲ್ಲಿ ನಡೆದ ಗುಂಪು ಹಂತದ ಕೊನೆಯ ಪಂದ್ಯದ ಆರಂಭದಲ್ಲೇ ಮಿಂಚಿನ ಆಟವಾಡಿತು.
ಹೀಗಾಗಿ ನಾಲ್ಕನೇ ನಿಮಿಷದಲ್ಲೇ ಗೋಲು ಗಳಿಸಲು ಸಾಧ್ಯವಾಯಿತು. ವರುಣ್ ಕುಮಾರ್ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು.
22ನೇ ನಿಮಿಷದಲ್ಲಿ ವರುಣ್ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. ಆಕಾಶದೀಪ್ ಸಿಂಗ್ 11, 26 ಮತ್ತು 53ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅಮಿತ್ ರೋಹಿದಾಸ್ (15ನೇ ನಿಮಿಷ), ಮನದೀಪ್ ಸಿಂಗ್ (30, 60ನೇ ನಿ), ನೀಲಕಂಠ ಶರ್ಮಾ (27ನೇ ನಿ) ಮತ್ತು ಗುರುಸಾಹೀಬ್‌ಜೀತ್ ಸಿಂಗ್ (45ನೇ ನಿ) ಕೂಡ ಕೈಚಳಕ ತೋರಿದರು.
ಈ ಗೆಲುವಿನ ಮೂಲಕ ಭಾರತ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತು.
ಜಪಾನ್ ಮತ್ತು ಪೋಲೆಂಡ್ ನಡುವಿನ ಕ್ರಾಸ್ ಓವರ್ ಪಂದ್ಯದಲ್ಲಿ ಗೆದ್ದ ತಂಡವನ್ನು ಭಾರತ ನಾಲ್ಕರ ಘಟ್ಟದಲ್ಲಿ ಎದುರಿಸಲಿದೆ.
ಬಿ ಗುಂಪಿನ ಅಗ್ರ ಸ್ಥಾನದಲ್ಲಿರುವ ಅಮೆರಿಕ ತಂಡ ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಾಸ್ ಓವರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದೆ.
ನಾಲ್ಕು ನಿಮಿಷಗಳಲ್ಲಿ ಐದು ಪೆನಾಲ್ಟಿ ಕಾರ್ನರ್: ಭಾರತ ತಂಡ ಪಂದ್ಯದ ಮೊದಲ ನಿಮಿಷದಿಂದಲೇ ಆಕ್ರಮಣಕಾರಿ ಆಟವಾಡಿತು. ಹೀಗಾಗಿ ನಾಲ್ಕೇ ನಿಮಿಷಗಳಲ್ಲಿ ಐದು ಪೆನಾಲ್ಟಿ ಕಾರ್ನರ್ ಅವಕಾಶಗಳು ತಂಡಕ್ಕೆ ಲಭಿಸಿದವು. ಈ ಪೈಕಿ ಕೊನೆಯ ಅವಕಾಶವನ್ನು ವರುಣ್ ಗೋಲಾಗಿ ಪರಿವರ್ತಿಸಿದರು.
ಈ ಆಘಾತದಿಂದ ಚೇತರಿಸಿಕೊಳ್ಳದ ಎದುರಾಳಿ ತಂಡ ನಂತರ ಮಂಕಾಯಿತು. ಭಾರತ ಗೋಲುಗಳನ್ನು ಗಳಿಸುತ್ತಲೇ ಸಾಗಿತು.
FT: IND 10-0 UZB
An emphatic win for India in their last pool match as they make their way into the Semi Finals of the tournament!
Congratulations #MenInBlue 👏👏👏#IndiaKaGame #FIHSeriesFinals #RoadToTokyo #INDvUZB pic.twitter.com/ARHkJgRlew
— Hockey India (@TheHockeyIndia) June 10, 2019
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.