ಗುರುವಾರ , ಆಗಸ್ಟ್ 22, 2019
26 °C

ಇಂದಿನಿಂದ ಬೆಂಗಳೂರು ಕಪ್‌ ಹಾಕಿ

Published:
Updated:

ಬೆಂಗಳೂರು: ಹಾಕಿ ಕರ್ನಾಟಕ ಆಶ್ರಯದ ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಪುರುಷರ ಟೂರ್ನಿಗೆ ಶನಿವಾರ ಚಾಲನೆ ಸಿಗಲಿದೆ.

ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯುವ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಹಾಕಿ ಕರ್ನಾಟಕ ತಂಡವು ಮುಂಬೈಯ ಏರ್‌ ಇಂಡಿಯಾ ಎದುರು ಆಡಲಿದ್ದು ಗೆಲುವಿನ ಹುಮ್ಮಸ್ಸಿನಲ್ಲಿದೆ.

ರೌಂಡ್‌ ರಾಬಿನ್‌ ಮಾದರಿಯಲ್ಲಿ ಒಟ್ಟು ಒಂಬತ್ತು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ವಿ.ಆರ್‌.ರಘುನಾಥ್‌, ಎಸ್‌.ಕೆ.ಉತ್ತಪ್ಪ, ಆಡ್ರಿಯನ್‌ ಡಿಸೋಜಾ, ದೇವೇಂದ್ರ ವಾಲ್ಮೀಕಿ ಸೇರಿದಂತೆ ಪ್ರಮುಖ ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ.

ಒಲಿಂಪಿಯನ್‌ ಆಟಗಾರ ನಿಕಿನ್‌ ತಿಮ್ಮಯ್ಯ, ಆತಿಥೇಯ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಧಾನ್‌ ಸೋಮಣ್ಣ, ಕೆ.ಆರ್‌.ಭರತ್‌, ಆರ್‌.ಪುನೀತ್‌, ಕೆ.ಪಿ.ಸೋಮಯ್ಯ ಮತ್ತು ಡಿ.ಎಂ.ಅಚ್ಚಯ್ಯ ಅವರು ಮಿಡ್‌ಫೀಲ್ಡ್‌ ವಿಭಾಗದಲ್ಲಿ ನಿಕಿನ್‌ ಪಡೆಯ ಬೆನ್ನೆಲುಬಾಗಿದ್ದಾರೆ.

ಮುಂಚೂಣಿ ವಿಭಾಗದಲ್ಲಿ ಆಡುವ ಮೋಕ್ಷಿತ್‌ ಉತ್ತಪ್ಪ, ಹರೀಶ್‌ ಮುಟಗಾರ್‌, ಪವನ್‌ ಮಡಿವಾಳರ್‌, ಪೃಥ್ವಿರಾಜ್‌, ರಾಜೇಂದ್ರ ಮತ್ತು ಮಂಜೀತ್‌ ಅವರೂ ಮಿಂಚುವ ಭರವಸೆಯಲ್ಲಿದ್ದಾರೆ. ಸಿ.ಎ.ಪೊನ್ನಣ್ಣ, ಎಸ್‌.ಪಿ.ದೀಕ್ಷಿತ್‌, ಎಚ್‌.ಎಸ್‌.ಅಭಿಷೇಕ್‌, ವೀರಣ್ಣಗೌಡ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ.

ಮಧ್ಯಾಹ್ನ 2ಗಂಟೆಗೆ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಬಿ‍‍‍ಪಿಸಿಎಲ್‌ ಮತ್ತು ಆಲ್‌ ಇಂಡಿಯಾ ಕಸ್ಟಮ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

Post Comments (+)