ಶುಕ್ರವಾರ, ಮಾರ್ಚ್ 5, 2021
18 °C

ಆಳ್ವಾಸ್ ಅಂಗಳದ ತಾರೆಗಳು

ಮಹೇಶ್‌ ಎಸ್.ಕನ್ನೇಶ್ವರ Updated:

ಅಕ್ಷರ ಗಾತ್ರ : | |

Deccan Herald

ಮೂಡುಬಿದಿರೆಯ  ಆಳ್ವಾಸ್‌ ಶಿಕ್ಷಣ ಸಂಸ್ಥೆ ಎಂದರೆ ಶಿಕ್ಷಣವಷ್ಟೇ ಅಲ್ಲ. ಕ್ರೀಡೆಯ ಅಭಿವೃದ್ಧಿಗೂ ಟೊಂಕ ಕಟ್ಟಿ ನಿಂತಿರುವ ಸಂಸ್ಥೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 

ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳ ಹೊಳಪು ತಂದ ಕ್ರೀಡಾಪಟುಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳೂ ಇದ್ದಾರೆ. ಅವರಲ್ಲಿ ಓಟಗಾರ್ತಿ ಎಂ.ಆರ್. ಪೂವಮ್ಮ ಮತ್ತು ಧರುಣ್ ಅಯ್ಯಸ್ವಾಮಿ ಪ್ರಮುಖರು. ಭವಿಷ್ಯದಲ್ಲಿಯೂ ದೇಶದ ಕ್ರೀಡಾ ಜ್ಯೋತಿಯನ್ನು ಬೆಳಗುವ ಭರವಸೆ ಮೂಡಿಸಿರುವ ಕೆಲವು ಯುವ ಅಥ್ಲೀಟ್‌ಗಳೂ ಇಲ್ಲಿ ಸಿದ್ಧರಾಗುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನೂ ಇಲ್ಲಿ ಆಯೋಜಿಸಲಾಗುತ್ತಿದೆ. ಇದರಿಂದಾಗಿಯೂ ಉತ್ತಮ ಆಟಗಾರರು ಹೊರಹೊಮ್ಮಲು ಸಾಧ್ಯವಾಗುತ್ತಿದೆ. ಅವರಲ್ಲಿ ಪ್ರಮುಖರ ಪರಿಚಯ ಇಲ್ಲಿದೆ;

ಧರುಣ್: ಜಕಾರ್ತದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದ 400 ಮೀಟರ್ಸ್‌ ಹರ್ಡಲ್ಸ್‌ ಹಾಗೂ 400 ಮೀಟರ್ಸ್‌ ರಿಲೆಯಲ್ಲಿ ಬೆಳ್ಳಿ ಹೊಳಪು ಮೂಡಿಸಿದ ಧರುಣ್‌ ಅಯ್ಯಸ್ವಾಮಿ ಬಿಎಚ್‌ಆರ್‌ಡಿ ಓದುತ್ತಿದ್ದಾರೆ. ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ ನೀಡಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪದಕ ಸ್ಫೂರ್ತಿಗೆ ಸಂಸ್ಥೆಯ ಪ್ರೋತ್ಸಾಹ ಕಾರಣ ಎಂದು ಧರುಣ್‌ ಸ್ಮರಿಸುತ್ತಾರೆ.

ಎಂ.ಆರ್‌. ಪೂವಮ್ಮ: ಜಕಾರ್ತದಲ್ಲಿ ಮಹಿಳಾ ಮತ್ತು ಮಿಶ್ರ 4x 400 ಮೀಟರ್ಸ್‌ ರಿಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿರುವ ಎಂ. ಆರ್‌. ಪೂವಮ್ಮ ಕೂಡಾ ಆಳ್ವಾಸ್‌ ಕಾಲೇಜಿನ ಹಳೆಯ ವಿದ್ಯಾರ್ಥಿನಿ. ಇಲ್ಲಿ ವ್ಯಾಸಂಗ ಮಾಡುವಾಗ ಅವರು ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. 2014 ರಲ್ಲಿಯೂ ಪೂವಮ್ಮ ಅವರು ಪದಕದ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದರು.

ಅಭಿನಯ ಶೆಟ್ಟಿ: ಮೂಡುಬಿದಿರೆಯಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ (1.75 ಮೀಟರ್ಸ್‌) ನೂತನ ಕೂಟ ದಾಖಲೆ ಮಾಡಿ ಚಿನ್ನದ ಸಾಧನೆ ಮಾಡಿದ್ದಾರೆ. ಲಕ್ನೋದಲ್ಲಿ ನಡೆದ ನ್ಯಾಷನಲ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಎತ್ತರ ಜಿಗಿತದ ಮೊದಲ ಯತ್ನದಲ್ಲಿಯೆ ಬೆಳ್ಳಿ ಪದಕ ಗಳಿಸಿದ್ದಾರೆ. ಕಲಬುರ್ಗಿಯಲ್ಲಿಯೂ 1.66 ಮೀಟರ್ಸ್‌ ಎತ್ತರ ಜಿಗಿದು ನೂತನ ಕೂಟ ದಾಖಲೆ ಮಾಡಿದ್ದರು. ಇವರು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ. ಶ್ರೀಲಂಕಾದಲ್ಲಿ ನಡೆದ ಸೌತ್‌ ಏಷ್ಯನ್ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕ ಗಳಿಸಿದ್ದಾರೆ.

ಅಭಿಷೇಕ ಶೆಟ್ಟಿ: ಆಳ್ವಾಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅಭಿಷೇಕ ಶೆಟ್ಟಿ ಡೆಕಥ್ಲಾನ್‌ ಕ್ರೀಡಾಪಟು. ರಾಜ್ಯ ಹಾಗೂ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕ ಗಳಿಸಿದ್ದಾರೆ. ಸದ್ಯ ರೈಲ್ವೆ ಉದ್ಯೋಗಿ ಆಗಿರುವ ಶೆಟ್ಟಿ ಆಳ್ವಾಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಸಂಸ್ಥೆ ನೀಡಿದ್ದ ಸಹಾಯವನ್ನು ಇಂದಿಗೂ ಸ್ಮರಿಸುತ್ತಾರೆ. ಈಚೆಗೆ
ಲಕ್ನೋದಲ್ಲಿ ನಡೆದ 84ನೇ ಅಖಿಲ ಭಾರತ ರೈಲ್ವೆ ಅಥ್ಲೆಟಿಕ್ಸ್‌ನಲ್ಲಿ 7090 ಪಾಯಿಂಟ್ಸ್‌ ಗಳಿಸಿ ನೂತನ ದಾಖಲೆ ಮೆರೆದಿದ್ದಾರೆ.

ಪ್ರಜ್ವಲ್‌ ಮಂದಣ್ಣ: ಪ್ರಜ್ವಲ್‌ ಮಂದಣ್ಣ ಮೂಲತಃ ಕೊಡಗು ಜಿಲ್ಲೆಯವರು. ಆಳ್ವಾಸ್‌ನಲ್ಲಿ ಬಿಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಚೆಗೆ ಫಿನ್‌ಲ್ಯಾಂಡ್‌ನಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಅಥ್ಲೆಟಿಕ್ ಚಾಂಪಿಯನ್‌ ಷಿಪ್‌ನಲ್ಲಿ ಪಾಲ್ಗೊಂಡು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. 100 ಮೀಟರ್ಸ್‌ನಲ್ಲಿ ಸೌತ್‌ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ, ಏಷ್ಯನ್‌ ಜೂನಿಯರ್‌ ಕ್ರೀಡಾಕೂಟದಲ್ಲಿ 4x 400 ಮೀಟರ್ಸ್‌ನಲ್ಲಿ ಕಂಚು ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು