ಅರ್ಜೆಂಟೀನಾ ಜಯಭೇರಿ

7
ಒಂದೊಂದು ಗೋಲು ಗಳಿಸಿ ಮಿಂಚಿದ ಆಗಸ್ಟಿನ್ ಮಜಿಲಿ, ಲೂಕಾಸ್ ವಿಲ್ಲಾ

ಅರ್ಜೆಂಟೀನಾ ಜಯಭೇರಿ

Published:
Updated:
Deccan Herald

ಭುವನೇಶ್ವರ: ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಅರ್ಜೆಂಟೀನಾ ತಂಡ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಸೋಮವಾರ ರಾತ್ರಿ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ನ್ಯೂಜಿಲೆಂಡ್ ವಿರುದ್ಧ 3–0 ಅಂತರದಿಂದ ಗೆದ್ದಿತು.

ಸ್ಪೇನ್‌ ಎದುರಿನ ಮೊದಲ ‍ಪಂದ್ಯದಲ್ಲಿ ಜಯ ಗಳಿಸಲು ಪ್ರಮುಖ ಕಾರಣರಾಗಿದ್ದ ಆಗಸ್ಟಿನ್ ಮಜಿಲಿ ಈ ಪಂದ್ಯದಲ್ಲೂ ಮಿಂಚಿದರು. ಮಜಿಲಿ, ಲೂಕಾಸ್ ವಿಲ್ಲಾ ಮತ್ತು ಲೂಕಾಸ್‌ ಮಾರ್ಟಿನೆಜ್‌ ಗಳಿಸಿದ ಗೋಲುಗಳು ನ್ಯೂಜಿಲೆಂಡ್‌ ಆಸೆಗೆ ತಣ್ಣೀರು ಸುರಿದವು.

ವಿಶ್ವಕಪ್‌ನಲ್ಲಿ ಈ ಹಿಂದೆ ಆರು ಬಾರಿ ಮುಖಾಮುಖಿಯಾಗಿದ್ದಾಗ ಅರ್ಜೆಂಟೀನಾ ನಾಲ್ಕು ಬಾರಿ ಗೆದ್ದಿತ್ತು. ಈ ದಾಖಲೆಯ ಬೆಂಬಲದ ವಿಶ್ವಾಸದೊಂದಿಗೆ ಕಣಕ್ಕೆ ಇಳಿದ ತಂಡ ಆರಂಭದಿಂದಲೇ ಎದುರಾಳಿಗಳನ್ನು ಕಂಗೆಡಿಸಿತು. ಆದರೆ ಛಲ ಬಿಡದ ನ್ಯೂಜಿಲೆಂಡ್‌ ಪ್ರತಿ ದಾಳಿಗೆ ಮುಂದಾಯಿತು. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪ್ರೇಕ್ಷಕರು ರೋಮಾಂಚನಗೊಂಡರು.

ಅರ್ಜೆಂಟೀನಾ ಮೂರು ಬಾರಿ ನ್ಯೂಜಿಲೆಂಡ್ ಆವರಣಕ್ಕೆ ನುಗ್ಗಿ ಗೋಲು ಗಳಿಸಲು ಶ್ರಮಿಸಿತು. ನ್ಯೂಜಿಲೆಂಡ್ ಕೂಡ ಮೂರು ಬಾರಿ ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಆದರೆ ಅರ್ಜೆಂಟೀನಾಗೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಎರಡನೇ ಕ್ವಾರ್ಟರ್‌ನ 23ನೇ ನಿಮಿಷದಲ್ಲಿ ಮಜಿಲಿ ಗಳಿಸಿದ ಗೋಲಿನ ಮೂಲಕ ಅರ್ಜೆಂಟೀನಾ ಮುನ್ನಡೆ ಗಳಿಸಿತು. 41ನೇ ನಿಮಿಷದಲ್ಲಿ ಲೂಕಾಸ್ ವಿಲ್ಲಾ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ತಿರುಗೇಟು ನೀಡಲು ಪ್ರಯತ್ನಿಸಿದ ನ್ಯೂಜಿಲೆಂಡ್‌ ಕೊನೆಯ ಕ್ವಾರ್ಟರ್‌ನಲ್ಲಿ ಒತ್ತಡಕ್ಕೆ ಸಿಲುಕಿತು. 55ನೇ ನಿಮಿಷದಲ್ಲಿ ಎದುರಾಳಿಗಳಿಗೆ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೀಡಿತು. ಇದನ್ನು ಸದುಪಯೋಗ ಮಾಡಿಕೊಂಡ ಮಾರ್ಟಿನೆಜ್‌ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !