ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಯಿಂದ ಸುದ್ದಿಯಾದ ಸುಭಾನ್‌

Last Updated 28 ಏಪ್ರಿಲ್ 2018, 9:56 IST
ಅಕ್ಷರ ಗಾತ್ರ

ದಾವಣಗೆರೆ: ಇವರು ಸುಭಾನ್‌ ಖಾನ್. ಈಗ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ. 1995ರಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಜೆ.ಎಚ್. ಪಟೇಲರ ವಿರುದ್ಧ ಸ್ಪರ್ಧೆ ಮಾಡಿದಾಗ ರಾಜ್ಯದಾದ್ಯಂತ ಸುದ್ದಿಯಾಗಿದ್ದರು. ಈಗ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ವಿರುದ್ಧ ಸ್ಪರ್ಧಿಸಿದ್ದಾರೆ. 2014ರ ಲೋಕಸಭೆಯ ಚುನಾವಣಾ ಕಣದಲ್ಲೂ ಕಾಣಿಸಿಕೊಂಡಿದ್ದರು.

ಎರಡು ಕಡೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಯಾವುದಾದರೂ ಒಂದು ಕಡೆಯಲ್ಲಿ ಚುನಾವಣಾಧಿಕಾರಿ ಎದುರು ಪ್ರಮಾಣವಚನ ಸ್ವೀಕರಿಸಬಹುದು. ಆದರೆ, ಚನ್ನಗಿರಿಯ ಆಗಿನ ಚುನಾವಣಾಧಿಕಾರಿ ತಮ್ಮೆದುರು ಪ್ರಮಾಣವಚನ ಸ್ವೀಕರಿಸಲಿಲ್ಲ ಎಂದು ಸುಭಾನ್‌ ಅವರ ನಾಮಪತ್ರ ತಿರಸ್ಕರಿಸಿದರು. ಆ ವೇಳೆ ಸುಭಾನ್‌ ಖಾನ್‌ ದಾವಣಗೆರೆಯಿಂದಲೂ ಸ್ಪರ್ಧಿಸಿದ್ದರು. ನಾಮಪತ್ರ ತಿರಸ್ಕರಿಸಿದ

ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಸುಭಾನ್‌ ಹೈಕೋರ್ಟ್‌ ಮೆಟ್ಟಿಲೇರಿದರು. ತೀರ್ಪು ಇವರ ಪರವಾಗಿಯೇ ಬಂತು. ಇದನ್ನು ಪ್ರಶ್ನಿಸಿ ಪಟೇಲರು ಸುಪ್ರೀಂ ಕೋರ್ಟ್‌ಗೆ ಹೋದರು. ಹಣಕಾಸಿನ ತೊಂದರೆ ಇದ್ದುದ್ದರಿಂದ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸುಭಾನ್.

‘ಕಾನೂನು ಎಲ್ಲರಿಗೂ ಒಂದೇ. ಅಧಿಕಾರಸ್ಥರಿಗೊಂದು, ಅಧಿಕಾರ ಇಲ್ಲದವರಿಗೊಂದು ಇಲ್ಲ ಎಂಬುದನ್ನು ತಿಳಿಸಬೇಕಿತ್ತು. ಅದನ್ನು ನನ್ನ ಮಿತಿಯಲ್ಲಿ ಮಾಡಿ ತೋರಿಸಿದೆ. ಈಗ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಕೂಡ ಇದೇ ಉದ್ದೇಶದಿಂದ. ಹಣವಂತರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕೆ? ನನ್ನಂಥವರು ಸ್ಪರ್ಧಿಸಬಾರದೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ನಾನು ಕಾಂಗ್ರೆಸಿಗ. ಟಿಕೆಟ್‌ಗಾಗಿ ಪಕ್ಷದ ಪ್ರಮುಖ ವರಿಷ್ಠರೆಲ್ಲರನ್ನೂ ಭೇಟಿ ಮಾಡಿದೆ. ಮುಂದೆ ಸ್ಥಾನಮಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ’ ಎಂದು ಅವರು ಹೇಳುತ್ತಾರೆ.

ಸುಭಾನ್‌ ಅವರಿಗೆ ಈಗ 50 ವರ್ಷ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಎಂ.ಎ. ಮಾಡಿದ್ದಾರೆ. ವ್ಯಾಸಂಗದ ವೇಳೆ ಉತ್ತಮ ಅಥ್ಲಿಟ್‌ ಕೂಡ ಆಗಿದ್ದರು. ಓಟದಲ್ಲಿ ರಾಜ್ಯವನ್ನು ಅನೇಕ ಬಾರಿ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT