ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನಕ್ಕೆ ಕೊರಳೊಡ್ಡಿದ ಸುನಿಲ್‌

ಕನ್ನಡಿಗ ಅರ್ಜುನ್‌ಗೆ ಕಂಚಿನ ಪದಕ
Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಬಲಿಷ್ಠ ಎದುರಾಳಿಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಭಾರತದ ಸುನಿಲ್‌ ಕುಮಾರ್‌ ಅವರು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನವೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕೆ.ಡಿ.ಜಾಧವ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪುರುಷರ 87 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಸುನಿಲ್‌ 5–0 ಪಾಯಿಂಟ್ಸ್‌ನಿಂದ ಕಿರ್ಗಿಸ್ತಾನದ ಅಜತ್‌ ಸಲಿದಿನೋವ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ 27 ವರ್ಷಗಳ ನಂತರ ಏಷ್ಯನ್ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್‌ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಪೈಲ್ವಾನ ಎಂಬ ಹಿರಿಮೆಗೆ ಪಾತ್ರರಾದರು.

ಸೆಮಿಫೈನಲ್‌ನಲ್ಲಿ ಸುನಿಲ್‌ 12–8 ಪಾಯಿಂಟ್ಸ್‌ನಿಂದ ಕಜಕಸ್ತಾನದ ಅಜಮತ್‌ ಕುಸ್ತುಬಯೆವ್‌ ಅವರನ್ನು ಮಣಿಸಿದ್ದರು. 2019ರಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಸುನಿಲ್‌, ಅಜಮತ್ ವಿರುದ್ಧದ ಹಣಾಹಣಿಯ ಆರಂಭದಲ್ಲಿ ಪರಿಣಾಮಕಾರಿಯಾಗಿ ಆಡಲು ವಿಫಲರಾದರು. ಹೀಗಾಗಿ 1–8 ಪಾಯಿಂಟ್ಸ್‌ನಿಂದ ಹಿನ್ನಡೆ ಕಂಡರು. ಇದರಿಂದ ವಿಶ್ವಾಸ ಕಳೆದುಕೊಳ್ಳದ ಅವರು ನಂತರ ಬಿಗಿಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಮ್ಯಾಟ್‌ ಮೇಲೆ ಉರುಳಿಸಿದರು. ಸತತ 11 ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಸುನಿಲ್‌ 8–2ಯಿಂದ ಜಪಾನ್‌ನ ಟಕಾಹಿರೊ ಸುರುಡಾ ಅವರನ್ನು ಸೋಲಿಸಿದ್ದರು.

ಅರ್ಜುನ್‌ಗೆ ಕಂಚು: ಕರ್ನಾಟಕದ ಪೈಲ್ವಾನ ಅರ್ಜುನ್‌ ಹಲಕುರ್ಕಿ ಅವರು ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು.

ಪುರುಷರ ಗ್ರಿಕೊ ರೋಮನ್ ವಿಭಾಗದ 55 ಕೆ.ಜಿ. ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಬಾಗಲಕೋಟೆಯ ಅರ್ಜುನ್‌, ಕಂಚಿನ ಪದಕ ಗೆದ್ದರು. ಸೀನಿಯರ್ ವಿಭಾಗದಲ್ಲಿ ಅವರು ಜಯಿಸಿದ ಮೊದಲ ಪದಕ ಇದಾಗಿದೆ.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಭಾರತದ ಪೈಲ್ವಾನ7–4 ಪಾಯಿಂಟ್ಸ್‌ನಿಂದ ದಕ್ಷಿಣ ಕೊರಿಯಾದ ಡಾಂಗ್‌ಯೆವೊಕ್‌ ಅವರನ್ನು ಪರಾಭವಗೊಳಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ 10–2 ಪಾಯಿಂಟ್ಸ್‌ನಿಂದ ತೌರ್ಕಿ ಅಲಿ ವಿರುದ್ಧ ಜಯಿಸಿದ್ದ ಅರ್ಜುನ್‌, ಸೆಮಿಫೈನಲ್‌ನಲ್ಲಿ 7–8 ಪಾಯಿಂಟ್ಸ್‌ನಿಂದ ಇರಾನ್‌ನ ಪೌಯಾ ಮೊಹಮ್ಮದ್‌ ನಾಸರ್‌ಪೌರ್‌ ವಿರುದ್ಧ ಸೋತಿದ್ದರು.

ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿರುವ ಅರ್ಜುನ್‌ ಅವರು ಪೌಯಾ ಮೊಹಮ್ಮದ್‌ ವಿರುದ್ಧದ ಹಣಾಹಣಿಯಲ್ಲಿ 7–1 ಮುನ್ನಡೆ ಗಳಿಸಿದ್ದರು. ಆದರೆ ಕೊನೆಯ ಒಂದು ನಿಮಿಷದಲ್ಲಿ ಮಿಂಚಿದ ಪೌಯಾ ಸತತ ಏಳು ಪಾಯಿಂಟ್ಸ್‌ ಗಳಿಸಿ ಪಂದ್ಯ ಜಯಿಸಿದರು.

63 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಸಚಿನ್‌ ರಾಣಾ 0–8ರಲ್ಲಿ ಉಜ್ಬೆಕಿಸ್ತಾನದ ಅಲ್‌ಮುರತ್‌ ತಸಮುರಾದೊವ್‌ ವಿರುದ್ಧ ಪರಾಭವಗೊಂಡರು. ಇದಕ್ಕೂ ಮೊದಲು ನಡೆದಿದ್ದ ಎಂಟರ ಘಟ್ಟದ ಹಣಾಹಣಿಯಲ್ಲಿ ರಾಣಾ 6–0ಯಿಂದ ಕಿರ್ಗಿಸ್ತಾನದ ತ್ಯಾನರ್‌ ಶರ್ಷೆನ್‌ಬೆಕೊವ್‌ ಅವರನ್ನು ಮಣಿಸಿದ್ದರು.

77 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಾಜನ್‌ 6–9ಯಿಂದ ಕಿರ್ಗಿಸ್ತಾನದ ರೇನತ್‌ ಇಲಿಯಾಜುಲು ವಿರುದ್ಧ ಮಣಿದರು.

130 ಕೆ.ಜಿ.ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಮೆಹರ್‌ ಸಿಂಗ್‌ ಅವರೂ ನಾಲ್ಕರ ಘಟ್ಟದಲ್ಲಿ ಎಡವಿದರು. ಮೆಹರ್‌ 1–9ರಲ್ಲಿ ದಕ್ಷಿಣ ಕೊರಿಯಾದ ಮಿನ್‌ಸೆವೊಕ್‌ ಕಿಮ್‌ಗೆ ಶರಣಾದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಮೆಹರ್‌ 4–0ಯಿಂದ ಉಜ್ಬೆಕಿಸ್ತಾನದ ದಲೆರ್‌ ರಖಮತೋವ್‌ ವಿರುದ್ಧ ಜಯಿಸಿದ್ದರು.

*
ಸೆಮಿಫೈನಲ್‌ ಪಂದ್ಯದ ಬಹುತೇಕ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದೆ. ಆದರೆ ಕೊನೆಯ ಒಂದು ನಿಮಿಷದಲ್ಲಿ ಏನಾಯಿತೆಂದೇ ಗೊತ್ತಾಗಲಿಲ್ಲ.
-ಅರ್ಜುನ್ ಹಲಕುರ್ಕಿ, ಕಂಚಿನ ಪದಕ ಗೆದ್ದ ಸ್ಪರ್ಧಿ

ಭಾರತದ ಅರ್ಜುನ್‌ ಹಲಕುರ್ಕಿ (ನೀಲಿ ಪೋಷಾಕು) ಎದುರಾಳಿಯನ್ನು ನೆಲಕ್ಕುರುಳಿಸಲು ಪ್ರಯತ್ನಿಸಿದರು –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT