ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಾಯಿ ಪ್ರಣೀತ್‌, ಆಕರ್ಷಿಗೆ ಸೋಲು

Last Updated 27 ಏಪ್ರಿಲ್ 2022, 12:59 IST
ಅಕ್ಷರ ಗಾತ್ರ

ಮನಿಲಾ, ಪಿಲಿಪ್ಪೀನ್ಸ್: ಭಾರತದ ಸೈನಾ ನೆಹ್ವಾಲ್‌ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ತಡೆ ದಾಟಿದ್ದಾರೆ. ಆದರೆ ಲಕ್ಷ್ಯ ಸೇನ್ ಮತ್ತು ಬಿ.ಸಾಯಿ ಪ್ರಣೀತ್ ಸವಾಲು ಮೊದಲ ಸುತ್ತಿನಲ್ಲಿಯೇ ಅಂತ್ಯವಾಯಿತು.

ಗಾಯಗಳಿಂದ ಬಳಲುತ್ತಿದ್ದ ಸೈನಾ ಚೇತರಿಸಿಕೊಂಡಿದ್ದು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 21–15, 17–21, 21–13ರಿಂದ ದಕ್ಷಿಣ ಕೊರಿಯಾದ ಸಿಮ್ ಯೂಜಿನ್ ಅವರಿಗೆ ಸೋಲುಣಿಸಿದರು.

ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್, ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ಚೀನಾದ ಲೀ ಶಿ ಫೆಂಗ್ ಎದುರು ನಿರಾಸೆ ಅನುಭವಿಸಿದರು. ಐದನೇ ಶ್ರೇಯಾಂಕದ ಭಾರತದ ಆಟಗಾರನಿಗೆ 21–12, 10–21, 19–21ರಿಂದ ಸೋಲು ಎದುರಾಯಿತು.

ಮೊದಲ ಗೇಮ್‌ಅನ್ನು ಸುಲಭವಾಗಿ ಜಯಿಸಿದ್ದ ಸೇನ್‌ ಎರಡನೇ ಗೇಮ್‌ಅನ್ನು ಭಾರೀ ಅಂತರದಿಂದ ಕೈಚೆಲ್ಲಿದರು. ಜಿದ್ದಾಜಿದ್ದಿನ ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಚೀನಾ ಆಟಗಾರ ಜಯದ ನಗೆ ಬೀರಿದರು.

ವಿಶ್ವ ಕ್ರಮಾಂಕದಲ್ಲಿ 19ನೇ ಸ್ಥಾನದಲ್ಲಿರುವ ಪ್ರಣೀತ್‌ ಕೂಡ 17–21, 13–21ರಿಂದ ಇಂಡೊನೇಷ್ಯಾದ ಜೋನಾಥನ್ ಕ್ರಿಸ್ಟಿ ಎದುರು ಮಣಿದರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಕರ್ಷಿ ಕಶ್ಯಪ್ ಕೂಡ ಸೋತರು. ಭಾರತದ ಆಟಗಾರ್ತಿ 15–21, 9–21ರಿಂದ ಜಪಾನ್‌ನ, ಅಗ್ರಶ್ರೇಯಾಂಕದ ಅಕಾನೆ ಯಾಮಗುಚಿ ವಿರುದ್ಧ ನಿರಾಸೆ ಕಂಡರು.

ಮಹಿಳಾ ಡಬಲ್ಸ್ ವಿಭಾಗದಲ್ಲೂ ಭಾರತಕ್ಕೆ ನಿರಾಸೆ ಕಾಡಿತು. ಅಶ್ವಿನಿ ಭಟ್‌ ಕೆ.– ಶಿಖಾಗೌತಮ್‌19-21, 12-21ರಿಂದ ಮಲೇಷ್ಯಾದ ಆ್ಯನಾ ಚಿಂಗ್‌ ಯಿಕ್ ಚೊಂಗ್‌ –ತೊಹ್ ಮೇ ಷಿಂಗ್ ಎದುರು, ಸಿಮ್ರಾನ್ ಸಿಂಘಿ–ರಿತಿಕಾ ಥಾಕರ್‌15-21 11-21ರಿಂದ ಮಲೇಷ್ಯಾದ ಪಿಯರ್ಲಿ ಥಾನ್‌ ಮತ್ತು ಮುರಳೀಧರನ್‌ ಥಿನಾಹ್ ವಿರುದ್ಧ ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT