ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್‌: ಸಿಂಧು, ಶ್ರೀಕಾಂತ್‌ ಮುನ್ನಡೆ

Last Updated 17 ಜುಲೈ 2019, 19:01 IST
ಅಕ್ಷರ ಗಾತ್ರ

ಜಕಾರ್ತಾ: ಭಾರತದ ಅಗ್ರ ಆಟಗಾರರಾದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಜಪಾನ್‌ ಎದುರಾಳಿಗಳ ವಿರುದ್ಧ ವಿಭಿನ್ನ ಶೈಲಿಯ ಗೆಲುವನ್ನು ದಾಖಲಿಸಿ ಇಂಡೊನೇಷ್ಯಾ ಓಪನ್‌ ವರ್ಲ್ಡ್‌ ಟೂರ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬುಧವಾರ ಶುಭಾರಂಭ ಮಾಡಿದರು.

ಋತುವಿನ ಮೊದಲ ಪ್ರಶಸ್ತಿ ಎದುರುನೋಡುತ್ತಿರುವ ಐದನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ 11–21, 21–15, 21–15ರಲ್ಲಿ ಅಯಾ ಒಹೊರಿ ಅವರ ಸವಾಲನ್ನು ಮೆಟ್ಟಿನಿಂತರು. ಒಹೊರಿ ವಿರುದ್ಧ ಸಿಂಧು ಅವರ ಗೆಲುವಿನ ಸರಣಿ 7–0 ಆದಂತಾಯಿತು.

ಇನ್ನೊಂದೆಡೆ ಪುರುಷರ ಸಿಂಗಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಶ್ರೀಕಾಂತ್‌ 21–14, 21–13ರಲ್ಲಿ ಕೆಂಟಾ ನಿಶಿಮೊಟೊ ಅವರನ್ನು ಕೇವಲ 38 ನಿಮಿಷಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಕಾಲಿಟ್ಟರು. ಇವರಿಬ್ಬರು ಒಟ್ಟು ಆರು ಬಾರಿ ಮುಖಾಮುಖಿಯಾಗಿದ್ದು, ಶ್ರೀಕಾಂತ್‌ಗೆ ಇದು ಐದನೇ ಜಯವಾಗಿದೆ.

ಪುರುಷರ ಸಿಂಗಲ್ಸ್‌ಮೊದಲ ಸುತ್ತಿನಇತರ ಪಂದ್ಯಗಳಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ ಮತ್ತು ಬಿ.ಸಾಯಿಪ್ರಣೀತ್‌ ಪರಾಭವಗೊಂಡರು. ಈ ವರ್ಷ ಸ್ವಿಸ್‌ ಓಪನ್‌ ಫೈನಲ್‌ ತಲುಪಿದ್ದ ಪ್ರಣಯ್‌ 15–21, 21–13, 10–21ರಲ್ಲಿ ಹಾಂಗ್‌ಕಾಂಗ್‌ನ ವಿಂಗ್‌ ಕಿ ವಿನ್ಸೆಂಟ್‌ ಎದುರು ಹಿಮ್ಮಟ್ಟಿದರು. ಇವರಿಬ್ಬರ ನಡುವಿನ ನಾಲ್ಕು ಮುಖಾಮುಖಿ ಈಗ 2–2 ರಲ್ಲಿ ಸಮವಾಗಿದೆ.

ಎರಡನೇ ಶ್ರೇಯಾಂಕದ ಶಿ ಯು ಕಿ 71 ನಿಮಿಷಗಳ ಸೆಣಸಾಟದ ನಂತರ ಭಾರತದ ಪ್ರಣೀತ್‌ ಅವರ ಉತ್ತಮ ಹೋರಾಟವನ್ನು ಅಂತ್ಯಗೊಳಿಸಿದರು. ಚೀನಾದ ಶಿ ಯು ಕಿ 21–19, 18–21, 20–22ರಲ್ಲಿ ಜಯಗಳಿಸಿದರು.

ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ 13–21, 11–21ರಲ್ಲಿ ಆತಿಥೇಯ ಇಂಡೊನೇಷ್ಯಾದ ವಿನಿ ಒಕ್ಟಾವಿನಾ ಕಾಂಡೊ ಮತ್ತು ತೊಂಟವಿ ಅಹಮದ್‌ ಎದುರು ಹಿಮ್ಮೆಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT