ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಮಿಸಿದ ಸಿಂಗ್: ಯಾರು ಮುಂದಿನ ಕಿಂಗ್?

Last Updated 19 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ಭಾರತ ಅಥ್ಲೆಟಿಕ್ ಫೆಡರೇಷನ್‌ನ ಮುಖ್ಯ ಕೋಚ್‌ ಬಹದ್ದೂರ್ ಸಿಂಗ್, ಕಾಲು ಶತಮಾನದ ಸೇವೆಯ ನಂತರ ಈಚೆಗೆ ‘ಟ್ರ್ಯಾಕ್ ಮತ್ತು ಫೀಲ್ಡ್‘ ತೊರೆದಿದ್ದಾರೆ. ಒಲಿಂಪಿಕ್ ವರ್ಷದಲ್ಲಿ ಅವರಿಗೆ ಕಡ್ಡಾಯ ‘ವಯೋನಿವೃತ್ತಿ’ ಕೊಟ್ಟು ಫೆಡರೇಷನ್‌ ಸಂಕಟಕ್ಕೆ ಸಿಲುಕಿದೆ. ತುರ್ತಾಗಿ ಬದಲಿ ಕೋಚ್‌ ನೇಮಕ ಮಾಡುವ ಒತ್ತಡದಲ್ಲಿದೆ.

ಅದು 1994ರ ಏಷ್ಯನ್ ಗೇಮ್ಸ್‌. ಹಿಂದಿನ ಆವೃತ್ತಿಗಳಲ್ಲಿ ಏಳು–ಬೀಳುಗಳನ್ನು ಕಂಡಿದ್ದ ಭಾರತಕ್ಕೆ ಈ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಲಭಿಸಿದ್ದು ಕೇವಲ ಮೂರು ಪದಕ. ಇಂಥ ಪರಿಸ್ಥಿತಿಯಲ್ಲಿ ಅಥ್ಲೀಟ್‌ಗಳನ್ನು ಬೆಳೆಸುವ ಉತ್ತಮ ಕೋಚ್‌ ಭಾರತಕ್ಕೆ ಬೇಕಾಗಿತ್ತು. ಆಗ ಬೆಳಕಿಗೆ ಬಂದವರು ಬಹದ್ದೂರ್ ಸಿಂಗ್. 1995ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡ ಅವರು ಭಾರತದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ನೂರಾರು ಪ್ರತಿಭೆಗಳನ್ನು ಬೆಳೆಸಿದರು. 2018ರ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಎಂಟು ಚಿನ್ನದೊಂದಿಗೆ ಒಟ್ಟು 20 ಪದಕಗಳನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾದರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಎರಡು ಚಿನ್ನದ ಪದಕಗಳು ಬಂದಿದ್ದವು.

25 ವರ್ಷ ಭಾರತದ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ಗಳ ಪ್ರತಿಭೆಗೆ ಸಾಣೆ ಹಿಡಿದ ಬಹದ್ದೂರ್ ಸಿಂಗ್ ಈ ತಿಂಗಳ ಮೊದಲ ವಾರದಲ್ಲಿ ವಿರಮಿಸಿದರು. ಅವರನ್ನು ಕೈಬಿಡುವುದು ಭಾರತ ಅಥ್ಲೆಟಿಕ್ ಫೆಡರೇಷನ್‌ಗೆ ಇಷ್ಟವಿರಲಿಲ್ಲ. ಆದರೆ 74 ವರ್ಷದ ಅವರನ್ನು ಮುಂದುವರಿಸಲು ವಯಸ್ಸು ಅಡ್ಡಿಯಾಯಿತು. ಒಲಿಂಪಿಕ್ ವರ್ಷದಲ್ಲೇ ಬಹದ್ದೂರ್ ಸಿಂಗ್ ನಿವೃತ್ತರಾದದ್ದು ಭಾರತದ ನಿರೀಕ್ಷೆಗಳಿಗೆ ಪೆಟ್ಟು ನೀಡಿದೆ. ಈ ಕೊರತೆ ನೀಗಿಸುವುದು ಮತ್ತು ಮುಂದಿನ ಹಾದಿಯನ್ನು ನಿಭಾಯಿಸುವುದು ಅಥ್ಲೆಟಿಕ್ ಫೆಡರೇಷನ್ ಮುಂದಿರುವ ಸದ್ಯದ ಸವಾಲು.

ವಿ.ಕೆ.ವಿಸ್ಮಯ -ಎಎಫ್‌ಪಿ ಚಿತ್ರ

1970 ಮತ್ತು 80ರ ದಶಕದಲ್ಲಿ ಭಾರತದಲ್ಲಿ ಬಹದ್ದೂರ್ ಸಿಂಗ್ ದೊಡ್ಡ ಹೆಸರು ಮಾಡಿದ್ದರು. ಏಷ್ಯನ್ ಗೇಮ್ಸ್‌ನ ಶಾಟ್‌ಪಟ್‌ನಲ್ಲಿ ಸತತ ಎರಡು ಬಾರಿ ಚಿನ್ನ (1978–ಬ್ಯಾಂಕಾಕ್ ಮತ್ತು 1982–ನವದೆಹಲಿ) ಅದಕ್ಕೂ ಮೊದಲು 1974ರಲ್ಲಿ ಟೆಹ್ರಾನ್‌ನಲ್ಲಿ ಬೆಳ್ಳಿ ಪದಕವನ್ನೂ ಗಳಿಸಿದ್ದರು. 1975ರಲ್ಲಿ ಸೋಲ್‌ನಲ್ಲಿ ಗಳಿಸಿದ ಚಿನ್ನ ಸೇರಿದಂತೆ ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ನಾಲ್ಕು ಬಾರಿ ಪದಕ ಗೆದ್ದಿರುವ ಹಿರಿಮೆಯೂ ಅವರ ಸಾಧನೆಯ ಪಟ್ಟಿಯಲ್ಲಿದೆ. ಇವೆಲ್ಲವೂ ಬಹದ್ದೂರ್ ಅವರ ಮೇಲೆ ಭರವಸೆ ಇರಿಸಿಕೊಳ್ಳಲು ಫೆಡರೇಷನ್‌ಗೆ ಕಾರಣವಾಗಿತ್ತು.

ವಿಶ್ವದ ಬಲಿಷ್ಠ ಶಕ್ತಿಗಳಲ್ಲಿ ಒಂದಾಗಿರುವ ಭಾರತಕ್ಕೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಈ ವರೆಗೆ ಪದಕ ಗಳಿಸಲು ಆಗಲಿಲ್ಲ. ಆ ಕೊರತೆಯನ್ನು ಬಹದ್ದೂರ್ ಅವರ ಶಿಷ್ಯಂದಿರು ನೀಗಿಸುವ ಭರವಸೆ ಇತ್ತು. ಆದರೆ ಇದೀಗ ಒಲಿಂಪಿಕ್ಸ್‌ಗೆ ಒಂದು ವರ್ಷ ಇರುವಾಗಲೇ ಅವರು ಕೋಚಿಂಗ್‌ನಿಂದ ದೂರವಾಗಿದ್ದಾರೆ. ಆದರೆ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಈ ವರೆಗಿನ ಶ್ರೇಷ್ಠ ಸಾಮರ್ಥ್ಯ ತೋರಲು ಲಲಿತಾ ಬಾಬರ್‌ಗೆ ಸಾಧ್ಯವಾಗಿದೆ. ಮೂರು ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಬಾಬರ್ 10ನೇ ಸ್ಥಾನ ಗಳಿಸಿದ್ದರು.

ತಜಿಂದರ್ ಪಾಲ್ ಸಿಂಗ್ ತೂರ್ –ರಾಯಿಟರ್ಸ್ ಚಿತ್ರ

2013ರಿಂದ ಬಹದ್ದೂರ್ ಸಿಂಗ್ ಅವರ ಜೊತೆ ಇದ್ದ ರಾಧಾಕೃಷ್ಣನ್ ನಾಯರ್ ಸದ್ಯ ಉಪ ಮುಖ್ಯ ಕೋಚ್. ಅನುಭವಿ ರಾಧಾಕೃಷ್ಣನ್ ಅವರೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಅಥ್ಲೆಟಿಕ್ಸ್ ತಂಡದ ಕೋಚ್‌ ಆಗಿರುವ ಸಾಧ್ಯತೆಗಳು ನಿಚ್ಚಳವಾಗಿವೆ. ಹೀಗೆ ಆದರೆ ಅವರಿಗೆ ಅದೊಂದು ಸುವರ್ಣಾವಕಾಶವಾಗಲಿದೆ. ಇಬ್ಬರು ವೈಯಕ್ತಿಕ ಕೋಚ್‌ಗಳು ಸೇರಿದಂತೆ ರಾಧಾಕೃಷ್ಣನ್ ಕೈಕೆಳಗೆ ಈಗ 20 ತರಬೇತುದಾರರು ಇದ್ದಾರೆ. ಸಿಂಗ್ ಬಳಿ ತರಬೇತಿ ಪಡೆದಿರುವ ಅಥ್ಲೀಟ್‌ಗಳನ್ನು ಹುರಿದುಂಬಿಸಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಂತೆ ಮಾಡಿದರೆ ರಾಧಾಕೃಷ್ಣನ್ ‘ಕಿಂಗ್’ ಎನಿಸಲಿದ್ದಾರೆ. ಅಂದಿಗೂ ಎಂದೆಂದಿಗೂ…

ಆಕಾಶ ದಿಟ್ಟಿಸಿ ಕೈಮುಗಿದರು ನಾನು ಪದಕ ಗೆದ್ದೆ: ಅಂಜು
‘ಅದು 2002ರ ಕಾಮನ್‌ವೆಲ್ತ್ ಗೇಮ್ಸ್‌. ಕೇವಲ ಒಂದು ಜಂಪ್ ಬಾಕಿ ಇರುವಾಗ ನಾನು ಆರನೇ ಸ್ಥಾನದಲ್ಲಿದ್ದೆ. ಸಲಹೆಗಾಗಿ ಸಿಂಗ್ ಬಳಿ ಹೋದೆ. ಅವರು ಹೇಳಿದ್ದು ನನಗೆ, ನಾನು ಹೇಳಿದ್ದು ಅವರಿಗೆ ಅರ್ಥವಾಗಲಿಲ್ಲ. ಕೊನೆಗೆ ಅವರು ಆಕಾಶ ದಿಟ್ಟಿಸಿ ಕೈಮುಗಿದು ಪ್ರಾರ್ಥಿಸಿದರು. ನನ್ನ ಸರದಿ ಬಂದಾಗ ನಾನು ಜಿಗಿದೆ; ಪದಕ ಗೆದ್ದೆ’ ಎಂದು ಹೇಳಿದವರು ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಪದಕ ಗಳಿಸಿಕೊಟ್ಟ ಲಾಂಗ್ ಜಂಪ್ ಪಟು ಅಂಜು ಬಾಬಿ ಜಾರ್ಜ್.

‘ಟ್ರ್ಯಾಕ್‌ನಲ್ಲಿ ಬಹದ್ದೂರ್ ಸಿಂಗ್ ಅವರ ಸಾನ್ನಿಧ್ಯ ಇಲ್ಲದೇ ಇರುವುದು ಭಾರಿ ನಷ್ಟ. ಅಥ್ಲೀಟ್‌ಗಳ ಸಾಧನೆಗಾಗಿ ಅವರು ಮಾಡಿದ ತ್ಯಾಗವನ್ನು ಎಂದಿಗೂ ಮರೆಯಲಾರೆವು’ ಎಂದು ಸದ್ಯ ರಾಷ್ಟ್ರೀಯ ಶಿಬಿರದಲ್ಲಿರುವ ಕರ್ನಾಟಕದ ಎಂ.ಆರ್‌.ಪೂವಮ್ಮ ಹೇಳಿದರು.

ಮಿಶ್ರ ರಿಲೆಯಂಥ ಹೊಸ ಮಾದರಿಯಲ್ಲೂ ಭಾರತಕ್ಕೆ ಪದಕಗಳನ್ನು ಗಳಿಸಿಕೊಟ್ಟ ಹೆಮ್ಮೆ ಬಹದ್ದೂರ್ ಸಿಂಗ್ ಅವರದು –ರಾಯಿಟರ್ಸ್ ಚಿತ್ರ

ಶಾಲೆಗಳಲ್ಲಿ ಅಥ್ಲೆಟಿಕ್ಸ್ ತರಬೇತಿ ಸಿಗಲಿ
ಭಾರತದಲ್ಲಿ ಅಥ್ಲೆಟಿಕ್ಸ್ ಬೆಳೆಯಬೇಕಾದರೆ ಶಾಲೆಗಳಲ್ಲಿ ಕ್ರೀಡೆ ಮುಖ್ಯವಾಹಿನಿಗೆ ಬರಬೇಕು. ಶಾಲಾ ಹಂತದಲ್ಲೇ ಮಕ್ಕಳಿಗೆ ಟ್ರ್ಯಾಕ್‌ ಮತ್ತು ಫೀಲ್ಡ್‌ನ ರುಚಿ ಹಚ್ಚಿದರೆ ದೇಶವು ಅಥ್ಲೆಟಿಕ್ಸ್‌ನಲ್ಲಿ ಬಲಿಷ್ಠ ಶಕ್ತಿಯಾಗುವುದರಲ್ಲಿ ಸಂದೇಹವಿಲ್ಲ. ದೇಶದಲ್ಲಿ ಅಥ್ಲೆಟಿಕ್ಸ್‌ ಅಭ್ಯಾಸಕ್ಕೆ ಒಳಾಂಗಣ ಕ್ರೀಡಾಂಗಣದ ಅಗತ್ಯವೂ ಇದೆ. ಮಳೆಗಾಲದಲ್ಲಿ ಒಳಾಂಗಣ ಕ್ರೀಡಾಂಗಣಗಳ ಬಳಕೆಗಾಗಿ ಕ್ರೀಡಾಪಟುಗಳನ್ನು ವಿದೇಶಕ್ಕೆ ಕಳುಹಿಸ ಲಾಗುತ್ತದೆ. ಇದಕ್ಕೆ ಭಾರಿ ಮೊತ್ತ ವೆಚ್ಚವಾಗುತ್ತದೆ. ನಮ್ಮಲ್ಲೇ ಒಳಾಂಗಣ ಸೌಲಭ್ಯಗಳಿದ್ದರೆ ಹಣ ಮತ್ತು ಸಮಯ ಉಳಿಸಬಹುದಾಗಿದೆ.
– ಬಹದ್ದೂರ್ ಸಿಂಗ್ ನಿವೃತ್ತ ಅಥ್ಲೆಟಿಕ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT