ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರದ ಹೆಮ್ಮೆಯ ಬ್ಯಾಸ್ಟೆಟ್‌ಬಾಲ್‌ಪಟು ‘ಪಾಪಚ್ಚಿ’ ನಿಧನ

Last Updated 23 ಜೂನ್ 2020, 14:21 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಬ್ಯಾಸ್ಕೆಟ್‌ಬಾಲ್ ಆಟಗಾರ ಕೆ. ರಘುನಾಥ್ (74) ಅವರು ಮಂಗಳವಾರ ನಿಧನರಾದರು.

ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಕ್ರೀಡಾ ವಲಯದಲ್ಲಿ ‘ಪಾಪಚ್ಚಿ’ ಎಂದೇ ಚಿರಪರಿಚಿತರಾಗಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಮಲ್ಲೇಶ್ವರದಲ್ಲಿರುವ ಬೀಗಲ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ಸಂಸ್ಥಾಪಕರಲ್ಲಿ ಪಾಪಚ್ಚಿ ಕೂಡ ಪ್ರಮುಖರು. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ 1946ರ ಸೆಪ್ಟೆಂಬರ್‌ 16ರಂದು ಜನಿಸಿದ್ದ ರಘುನಾಥ್ ಅವರ ಶಿಕ್ಷಣವು ಬೆಂಗಳೂರಿನ ಮಲ್ಲೇಶ್ವರ ಹೈಸ್ಕೂಲ್‌ನಲ್ಲಿ ಆಯಿತು. ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದರು. ತಮ್ಮ 12ನೇ ವಯಸ್ಸಿನಲ್ಲಿ ಅವರು ಬ್ಯಾಸ್ಕೆಟ್‌ಬಾಲ್ ಆಡಲು ಅರಂಭಿಸಿದರು. 15ನೇ ವಯಸ್ಸಿನಲ್ಲಿ ತಮ್ಮ ಶಾಲೆಯ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಶ್ರೇಯ ಅವರದ್ದು. ಆ ಟೂರ್ನಿಯಲ್ಲಿ ಅವರ ಆಟವು ಆಯ್ಕೆ ಸಮಿತಿಯ ಗಮನ ಸೆಳೆಯಿತು.

‘ನಾನು ನಾಯಕತ್ವ ವಹಿಸಿದ್ದ ರಾಜ್ಯ ತಂಡದಲ್ಲಿ ಪಾಪಚ್ಚಿ ಅವರಿದ್ದರು. ಮೊದಲು ಮೈಸೂರು ಮತ್ತು ನಂತರ ಕರ್ನಾಟಕ ತಂಡದಲ್ಲಿ ಆಡಿದ್ದೆವು. ಶಾರ್ಪ್‌ ಶೂಟರ್ ಆಗಿದ್ದ ಅವರು ಮಿಂಚಿನ ವೇಗದಲ್ಲಿ ಪಾಯಿಂಟ್ಸ್‌ ಗಳಿಸುತ್ತಿದ್ದರು. ತಂಡದ ಗೆಲುವಿನಲ್ಲಿ ಯಾವಾಗಲೂ ತಮ್ಮ ಪಾತ್ರವನ್ನು ವಹಿಸುತ್ತಿದ್ದರು. ಕಿರಿಯ ಆಟಗಾರರಿಗೂ ಪ್ರೇರಣೆ ನೀಡುತ್ತಿದ್ದವರು. ಬೀಗಲ್ಸ್‌ ಕ್ಲಬ್, ಕರ್ನಾಟಕ ರಾಜ್ಯ ತಂಡಗಳಿಗೆ ಅವರ ಕೊಡುಗೆ ದೊಡ್ಡದು’ ಎಂದು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ ರಾಜಗೋಪಾಲ್ ಕಡಂಬಿ ನೆನಪಿಸಿಕೊಂಡಿದ್ದಾರೆ.

1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ನಾಯಕರಾಗಿಯೂ ರಘುನಾಥ್ ಆಯ್ಕೆಯಾದರು. ಅವರ ಮುಂದಾಳತ್ವದಲ್ಲಿ ತಂಡವು ಮೂರು ಸಲ ಚಾಂಪಿಯನ್ ಆಯಿತು. ಒಂದು ಸಲ ಅಖಿಲ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಅವರ ತಂಡವು ಪ್ರಶಸ್ತಿ ಗೆದ್ದಿತ್ತು.

‘ನಮ್ಮ ರಾಜ್ಯ ತಂಡವನ್ನು ಶ್ರೀಲಂಕಾದಲ್ಲಿ ಟೂರ್ನಿ ಆಡಲು ಆಹ್ವಾನಿಸಲಾಗಿತ್ತು. ಆಗ ಪಾಪಚ್ಚಿ ಕೂಡ ನಮ್ಮ ತಂಡದಲ್ಲಿ ಆಡಿದ್ದರು. ಅವರಿಗೆ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಇತ್ತು. ಈ ಕ್ರೀಡೆಗೆ ಉತ್ತಮ ಕಾಣಿಕೆಯನ್ನೂ ನೀಡಿದ್ದಾರೆ. ಅವರು ಭಾರತ ತಂಡದಲ್ಲಿ ಆಡಬೇಕಿತ್ತು’ ಎಂದು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜಗೋಪಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT