ಮಂಗಳವಾರ, ಮಾರ್ಚ್ 9, 2021
28 °C

ಬ್ಯಾಸ್ಕೆಟ್‌ಬಾಲ್ ಆಟಗಾರ ಸತ್ನಾಂ ಸಿಂಗ್‌ ಮೇಲೆ ಎರಡು ವರ್ಷ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎನ್‌ಬಿಎ ತಂಡವೊಂದರಲ್ಲಿ ಮೊದಲ ಬಾರಿ ಅವಕಾಶ ಪಡೆದ ಭಾರತದ ಬ್ಯಾಸ್ಕೆಟ್‌ಬಾಲ್ ಆಟಗಾರ ಸತ್ನಾಂ ಸಿಂಗ್ ಭಮಾರ ಅವರ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ಶಿಸ್ತು ಸಮಿತಿಯು ಎರಡು ವರ್ಷಗಳ ನಿಷೇಧ ಹೇರಿದೆ. ಕಳೆದ ವರ್ಷ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ನಾಡಾ ಗುರುವಾರ ಟ್ವೀಟ್ ಮಾಡಿದೆ.

ದಕ್ಷಿಣ ಏಷ್ಯಾ ಗೇಮ್ಸ್‌ಗಾಗಿ ನಡೆದ ಶಿಬಿರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಳೆದ ವರ್ಷ ನಡೆಸಲಾದ ಪರೀಕ್ಷೆಯಲ್ಲಿ ಅವರು ತಪ್ಪು ಎಸಗಿರುವುದು ಸಾಬೀತಾಗಿತ್ತು. ಹೀಗಾಗಿ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. 25 ವರ್ಷದ ಸತ್ನಾಂ ಇದನ್ನು ಪ್ರಶ್ನಿಸಿ ಉದ್ದೀಪನ ಮದ್ದು ತಡೆ ಘಟಕದ ಶಿಸ್ತು ಸಮಿತಿಯ ಮುಂದೆ ಹಾಜರಾಗಲು ಅವಕಾಶ ನೀಡುವಂತೆ ಕೋರಿದ್ದರು.

‘ಸತ್ನಾಂ ಸಿಂಗ್ ಹೈಜಿನಾಮಿನ್ ಬೀಟಾ–2–ಅಗೋನಿಸ್ಟ್ ಎಂಬ ಮದ್ದು ಸೇವಿಸಿರುವುದು ಸಾಬೀತಾಗಿದೆ. ಈ ಮದ್ದನ್ನು 2017ರಲ್ಲಿ ನಿಷೇಧಿತ ಮದ್ದಿನ ಪಟ್ಟಿಯಲ್ಲಿ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಸೇರಿಸಿದೆ. ಸತ್ನಾಂ ಮೇಲಿನ ನಿಷೇಧ 2019ರಿಂದ ಪೂರ್ವಾನ್ವಯವಾಗಲಿದ್ದು ಮುಂದಿನ ವರ್ಷದ ನವೆಂಬರ್‌ 19ರಂದು ಮುಗಿಯಲಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಎನ್‌ಬಿಎ ತಂಡವಾದ ಡಲಾಸ್ ಮಾವೆರಿಕ್ಸ್‌ನಲ್ಲಿ ಸ್ಥಾನ ಗಳಿಸುವ ಮೂಲಕ ಸತ್ನಾಂ ಐದು ವರ್ಷಗಳ ಹಿಂದೆ ಐತಿಹಾಸಿಕ ಸಾಧನೆ ಮಾಡಿದ್ದರು. ಮುಂದಿನ ಎರಡು ವರ್ಷ ಡೆವಲಪ್‌ಮೆಂಟ್ ಲೀಗ್‌ನಲ್ಲಿ ಆಡಲು ತೆರಳಿದ್ದರು. ಭಾರತಕ್ಕೆ ವಾಪಸಾದ ನಂತರ 2018ರಲ್ಲಿ ಅವರು ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದರು. ಕೆನಡಾದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂದೆನಿಸಿಕೊಂಡಿದ್ದರು. ಸೇಂಟ್ ಜಾನ್ಸ್ ಎಜ್ ತಂಡದಲ್ಲಿ ಅವರು ಅವಕಾಶ ಪಡೆದುಕೊಂಡಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌, 2018ರ ಕಾಮನ್‌ವೆಲ್ತ್ ಗೇಮ್ಸ್‌ ಮತ್ತು 2019ರ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು