ಬೆಲ್ಜಿಯಂಗೆ ಚೊಚ್ಚಲ ಫೈನಲ್ ಸಂಭ್ರಮ

7
ತಂದೆಯ ಸಾವಿನ ಮರುದಿನವೇ ಗೋಲು ಗಳಿಸಿ ಮಿಂಚಿದ ಸೈಮನ್ ಗಾಂಗಾರ್ಡ್‌; ಇಂಗ್ಲೆಂಡ್‌ಗೆ ನಿರಾಸೆ

ಬೆಲ್ಜಿಯಂಗೆ ಚೊಚ್ಚಲ ಫೈನಲ್ ಸಂಭ್ರಮ

Published:
Updated:
Deccan Herald

ಭುವನೇಶ್ವರ: ತಂದೆಯ ಸಾವಿನ ನೋವು ನುಂಗಿ ಅಂಗಣದಲ್ಲಿ ಮೆರೆದ ಸೈಮನ್‌ ಗಾಂಗಾರ್ಡ್‌ ಗೋಲು ಗಳಿಸಿ ಸಂಭ್ರಮಿಸಿದರು.

ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ಅಲೆಕ್ಸಾಂಡರ್ ಹೆನ್ರಿಕ್‌ ಪ್ರೇಕ್ಷಕರನ್ನು ರಂಜಿಸಿದರು. ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ ಬೆಲ್ಜಿಯಂ ಮೊದಲ ಬಾರಿ ಫೈನಲ್ ಪ್ರವೇಶಿಸಿತು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ನಾಲ್ಕರ ಘಟ್ಟದ ಮೊದಲ ಪಂದ್ಯದಲ್ಲಿ ಬೆಲ್ಜಿಯಂ 6–0ಯಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತು. ಎಂಟನೇ ನಿಮಿಷದಲ್ಲಿ ಟಾಮ್ ಬೂನ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಬೆಲ್ಜಿಯಂ ತಂಡಕ್ಕೆ 19ನೇ ನಿಮಿಷದಲ್ಲಿ ಸೈಮನ್ ಗಾಂಗಾರ್ಡ್‌ ಮತ್ತೊಂದು ಗೋಲು ತಂದಿತ್ತರು.

42ನೇ ನಿಮಿಷದಲ್ಲಿ ಸೆಟ್ರಿಕ್‌ ಚಾರ್ಲಿಯರ್, 45 ಮತ್ತು 50ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಹೆನ್ರಿಕ್‌ ಹಾಗೂ 53ನೇ ನಿಮಿಷದಲ್ಲಿ ಸೆಬಾಸ್ಟಿಯನ್‌ ಡಾಕಿಯರ್ ಚೆಂಡನ್ನು ಗುರಿ ಸೇರಿಸಿದರು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಬೆಲ್ಜಿಯಂ ಎರಡು ಬಾರಿಯ ಚಾಂಪಿಯನ್‌ ಜರ್ಮನಿಯನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಸಿತ್ತು. ಸೆಮಿಫೈನಲ್‌ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. ಎಂಟನೇ ನಿಮಿಷದಲ್ಲಿ ಇದಕ್ಕೆ ಫಲ ಸಿಕ್ಕಿತು. ಮೊದಲ ಗೋಲು ಗಳಿಸಿದ ನಂತರ ತಂಡ ಹಿಂದಿರುಗಿ ನೋಡಲಿಲ್ಲ. ತಿರುಗೇಟು ನೀಡಲು ಪ್ರಯತ್ನಿಸಿದ ಇಂಗ್ಲೆಂಡ್‌ ತಂಡವನ್ನು ಬೆಲ್ಜಿಯಂನ ರಕ್ಷಣಾ ವಿಭಾಗದವರು ನಿರಂತರವಾಗಿ ನಿರಾಸೆ ಮೂಡಿಸಿದರು. 

ತಂಡದ ಕೋಚ್‌ ಶೇನ್‌ ಮೆಕ್‌ಲಾಯಿಡ್‌ ಅವರು ಗಾಂಗಾರ್ಡ್ ಅವರ ಮನೋಸ್ಥೈರ್ಯವನ್ನು ಕೊಂಡಾಡಿದರು.

‘ಗಾಂಗಾರ್ಡ್ ಅವರ ತಂದೆಯ ಸಾವಿನ ಸುದ್ದಿ ಶುಕ್ರವಾರ ರಾತ್ರಿ ಬಂದಿತ್ತು. ಗಾಂಗಾರ್ಡ್ ಅವರನ್ನು ಎಲ್ಲರೂ ಸಂತೈಸಿದ್ದೆವು. ಸಾವಿನ ನೋವನ್ನು ಮರೆತು ಪಂದ್ಯದಲ್ಲಿ ಅವರು ಆಡಿದ ರೀತಿ ಶ್ಲಾಘನೀಯ. ಅವರು ತಂದೆಗಾಗಿ ಆಡಿದರು, ಸೊಗಸಾದ ಆಟದ ಮೂಲಕ ಮುದ ನೀಡಿದರು’ ಎಂದು ಶೇನ್ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !