ಗುರುವಾರ , ಅಕ್ಟೋಬರ್ 29, 2020
19 °C

ಬಿಎಫ್‌ಐ ಪದಾಧಿಕಾರಿಗಳ ಅಧಿಕಾರ ಅವಧಿ ಮುಂದುವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ತಂದೊಡ್ಡಿರುವ ಸಂಕಷ್ಟವು ಭಾರತ ಬಾಕ್ಸಿಂಗ್ ಫೆಡರೇಷನ್‌ನ (ಬಿಎಫ್ಐ) ಚುನಾವಣೆಗೆ ಅಡ್ಡಿಯಾಗಿದ್ದು ಪದಾಧಿಕಾರಿಗಳ ಅವಧಿಯನ್ನು ಮೂರು ತಿಂಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ.

ಅಧ್ಯಕ್ಷ ಅಜಯ್ ಸಿಂಗ್ ನೇತೃತ್ವದ ಕಾರ್ಯಕಾರಿ ಸಮಿತಿಯ ನಾಲ್ಕು ವರ್ಷಗಳ ಅವಧಿ ಸೆಪ್ಟೆಂಬರ್‌ 25ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಬೇಕಾಗಿತ್ತು. ಆದರೆ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುಣಾವಣೆಯನ್ನು ಈಗ ನಡೆಸದೇ ಇರುವುದು ಒಳಿತು ಎಂದು ನಿರ್ಧರಿಸಲಾಯಿತು. 2011ರ ಕ್ರೀಡಾನೀತಿಗೆ ಅನುಗುಣವಾಗಿ ಫೆಡರೇಷನ್‌ನ ನಿಯಮಾವಳಿಗಳಿಗೆ ತಿದ್ದುಪಡಿ ತರುವುದಕ್ಕೂ ನಿರ್ಧರಿಸಲಾಯಿತು ಎಂದು ಪ್ರಕಟಣೆಯಲ್ಲಿ ವಿವರಿಸಲಾಯಿತು.

ಪ್ರಮುಖ ಬಾಕ್ಸರ್‌ಗಳನ್ನು 45 ದಿನಗಳ ಯುರೋಪ್ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಿದ್ದನ್ನು ಸಭೆಯಲ್ಲಿ ಪಾಲ್ಗೊಂಡಿದ್ದ 74 ಮಂದಿ ಸದಸ್ಯರು ಮುಕ್ತಕಂಠದಿಂದ ಅನುಮೋದಿಸಿದರು ಎಂದು ತಿಳಿಸಲಾಗಿದೆ.

ಏಷ್ಯನ್ ಬಾಕ್ಸಿಂಗ್ ಫೆಡರೇಷನ್‌ ಅಧ್ಯಕ್ಷ ಅನಾಸ್ ಅಲೊತೈಬಾ, ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸಭೆಯಲ್ಲಿ ಪಾಲ್ಗೊಂಡಿದ್ದರು.

’ನಾಲ್ಕು ವರ್ಷಗಳಲ್ಲಿ ಬಾಕ್ಸಿಂಗ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಇದಕ್ಕೆ ಈಗ ಇರುವ ತಂಡವೇ ಕಾರಣ. ಆದ್ದರಿಂದ ಇದೇ ತಂಡ ಮುಂದೆಯೂ ಅಧಿಕಾರದಲ್ಲಿ ಮುಂದುವರಿಯುವ ವಿಶ್ವಾಸವಿದೆ’ ಎಂದು ಅಜಯ್ ಸಿಂಗ್‌ ಅಭಿಪ್ರಾಯಪಟ್ಟರು.

’ಭಾರತ ಬಾಕ್ಸಿಂಗ್ ಫೆಡರೇಷನ್‌ ವಿಶ್ವ ಚಾಂಪಿಯನ್‌ಷಿಪ್ ಆಯೋಜಿಸಿ ಮೆಚ್ಚುಗೆ ಗಳಿಸಿದೆ. ಆದ್ದರಿಂದ ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸುವ ಅವಕಾಶವೂ ಭಾರತ ಬಿಎಫ್‌ಐಗೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ’ ಎಂದು ಅನಾಸ್ ಹೇಳಿದರು.

ಭಾರತದ ಪ್ರಮುಖ ಬಾಕ್ಸರ್‌ಗಳು ಪಟಿಯಾಲದ ಎನ್‌ಐಎಸ್‌ನಲ್ಲಿ ತರಬೇತಿ ಮುಗಿಸಿದ್ದು ಈಗ ಯೂತ್ ಮತ್ತು ಜೂನಿಯರ್ ಬಾಕ್ಸರ್‌ಗಳಿಗೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ರೋಹ್ಟಕ್‌ನಲ್ಲಿರುವ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡಲು ಸಿದ್ಧತೆ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.