ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ಓಪನ್‌: ಸೆಮಿಗೆ ನಿಖತ್‌, ದೀಪಕ್‌

ಭಾರತದ ಬಾಕ್ಸರ್‌ಗಳ ಪ್ರಾಬಲ್ಯ
Last Updated 24 ಜುಲೈ 2019, 18:33 IST
ಅಕ್ಷರ ಗಾತ್ರ

ನವದೆಹಲಿ: ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಭಾರತದ ನಿಖತ್‌ ಜರೀನ್‌ ಹಾಗೂ ದೀಪಕ್‌ ಸಿಂಗ್‌, ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯ ಸೆಮಿಫೈನಲ್‌ ತಲುಪಿದರು. ಈ ಮೂಲಕ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ.

ಏಷ್ಯನ್‌ ಚಾಂಪಿಯನ್‌ಷಿಪ್‌ ಕಂಚು ವಿಜೇತ ನಿಖತ್‌ ಅವರು ಮಹಿಳಾ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ (51ಕೆಜಿ ವಿಭಾಗ) ಉಜ್ಬೆಕಿಸ್ತಾನದ ಸಿತೊರಾ ಶೋಗ್ದಾರೊವಾ ಎದುರು 5–0ಯಿಂದ ಜಯಿಸಿದರು.

ಪುರುಷರ 49 ಕೆಜಿ ವಿಭಾಗದ ಪಂದ್ಯದಲ್ಲಿ ದೀಪಕ್‌ ಅವರು ಥಾಯ್ಲೆಂಡ್‌ನ ಸಮಕ್‌ ಸೇಹನ್‌ ವಿರುದ್ಧ ಸ್ಪರ್ಧಿಸುತ್ತಿದ್ದರು. ಈ ವೇಳೆಸಮಕ್‌ ಹಣೆಗೆ ಪೆಟ್ಟಾಗಿ ರಕ್ತ ಸುರಿಯಿತು. ಹಣಾಹಣಿಯನ್ನು ಮೊದಲ ಸುತ್ತಿನಲ್ಲೇ ನಿಲ್ಲಿಸಲಾಯಿತು.

ಭಾರತದ ಇತರ ಬಾಕ್ಸರ್‌ಗಳಾದ ಆಶಿಶ್‌ (69 ಕೆಜಿ), ಮಂಜು ರಾಣಿ (48 ಕೆಜಿ), ಬ್ರಿಜೇಶ್‌ ಯಾದವ್‌ (81 ಕೆಜಿ) ಮತ್ತು ಕಾಮನ್‌ವೆಲ್ತ್‌ ಗೇಮ್ಸ್ ಕಂಚು ವಿಜೇತ ಮೊಹಮ್ಮದ್‌ ಹುಸಾಮುದ್ದೀನ್‌ (56 ಕೆಜಿ) ಕೂಡ ನಾಲ್ಕರ ಘಟ್ಟ ಪ್ರವೇಶಿಸಿದರು. ಆಶಿಶ್‌ ಅವರು ಜಮೈಕಾದ ಜೋಷುವಾ ಫ್ರೇಜರ್‌ ಅವರನ್ನು 5–0ಯಿಂದ ಸೋಲಿಸಿದರೆ, ಹುಸಾಮುದ್ದೀನ್‌ ಅವರು ಕೊರಿಯಾದ ಲೀ ಯೆಚನ್ ವಿರುದ್ಧ 5–0ಯಿಂದ ಜಯದ ನಗೆ ಬೀರಿದರು.

ಅಲ್ಪ ಪ್ರತಿರೋಧ ಎದುರಿಸಿದರೂ ಬ್ರಿಜೇಶ್‌ ಅವರು ಥಾಯ್ಲೆಂಡ್‌ನ ಜಕ್ಕಾ ಪಾಂಗ್‌ ಯೊಮ್‌ಕೊತ್‌ ಅವರನ್ನು 4–1ರಿಂದ ಸೋಲಿಸಿ ಗಮನಸೆಳೆದರು. ಮಂಜು ರಾಣಿ ಅವರು ಇಟಲಿಯ ರಾಬರ್ಟಾ ಬೊನಾಟಿ ಅವರನ್ನು ಸುಲಭವಾಗಿ ಮಣಿಸಿದರು.

ಅದಾಗ್ಯೂ ಏಷ್ಯನ್‌ ಗೇಮ್ಸ್ ಬೆಳ್ಳಿ ವಿಜೇತ ಮನೀಷಾ ಮೌನ್‌ (57 ಕೆಜಿ) ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದರು.

ರಷ್ಯಾದ ಲ್ಯೂಡ್‌ಮಿಲಾ ವೊರೊಂತ್ಸೊವಾ ವಿರುದ್ಧದ ಏಕಪಕ್ಷೀಯ ಪಂದ್ಯದಲ್ಲಿ ಅವರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT