ಬುಧವಾರ, ಜುಲೈ 28, 2021
29 °C

ಚೀನಾದ ಸ್ಪಷ್ಟ ತೀರ್ಮಾನದ ನಂತರವೇ ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್‌ ಭವಿಷ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡಿಸೆಂಬರ್‌ನಲ್ಲಿ ನಡೆಯಬೇಕಾಗಿರುವ ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್‌ ಟೂರ್ನಿಯ ಕುರಿತು ಅಂತಿಮ ನಿರ್ಧಾರ ಘೋಷಿಸಬೇಕಾದರೆ ಚೀನಾದಿಂದ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಶನಿವಾರ ತಿಳಿಸಿದೆ. 

ದೇಶದಲ್ಲಿ ಈ ವರ್ಷ ನಡೆಸಲು ಉದ್ದೇಶಿಸಲಾಗಿದ್ದ ಅಂತರರಾಷ್ಟ್ರೀಯ ಮಟ್ಟದ ಯಾವುದೇ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಚೀನಾದ ಕ್ರೀಡಾ ಆಡಳಿತ ಶುಕ್ರವಾರ ತಿಳಿಸಿತ್ತು. 2022ರಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನ ಟ್ರಯಲ್ಸ್‌ ಮಾತ್ರ ಈ ವರ್ಷ ನಡೆಸಲಾಗುವುದು ಎಂದೂ ವಿವರಿಸಿತ್ತು. 

ಚೀನಾದ ಈ ನಿರ್ಧಾರವು ಗ್ವಾಂಗ್ಜುವಿನಲ್ಲಿ ಡಿಸೆಂಬರ್ 16ರಿಂದ 20ರ ವರೆಗೆ ನಡೆಯಬೇಕಾಗಿರುವ ವಿಶ್ವ ಟೂರ್ ಫೈನಲ್ಸ್‌ ಬಗ್ಗೆ ಸಂದೇಹ ಮೂಡಿಸಿದೆ. 

‘ಚೀನಾ ಬ್ಯಾಡ್ಮಿಂಟನ್ ಸಂಸ್ಥೆ ಸೇರಿದಂತೆ ಸಂಬಂಧಪಟ್ಟವರ ಜೊತೆ ಬಿಡಬ್ಲ್ಯುಎಫ್‌ ನಿರಂತರ ಸಂಪರ್ಕದಲ್ಲಿದೆ. ಈ ವರ್ಷದ ಕೊನೆಯ ಟೂರ್ನಿಯಾದ ವಿಶ್ವ ಟೂರ್ ಫೈನಲ್ಸ್ ಮೇಲೆ ಕರಿನೆರಳು ಬಿದ್ದರೆ ಮುಂದಿನ ದಾರಿ ಏನು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಚೀನಾದ ಸ್ಪಷ್ಟ ನಿರ್ಧಾರ ತಿಳಿಯುವ  ಮುನ್ನ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಬಿಡಬ್ಲ್ಯುಎಫ್‌ ಹೇಳಿದೆ. 

ಚೀನಾದಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಚೀನಾ ಮಾಸ್ಟರ್ಸ್ ಟೂರ್ನಿಯನ್ನೂ ಈಗಾಗಲೇ ರದ್ದು ಮಾಡಲಾಗಿದೆ. ಆದರೆ ಸೆಪ್ಟೆಂಬರ್ 15ರಿಂದ 20ರ ವರೆಗೆ ಗ್ವಾಂಗ್ಜುವಿನಲ್ಲಿ ನಡೆಯಬೇಕಾಗಿದ್ದ ಚೀನಾ ಓಪನ್ ವಿಶ್ವ ಟೂರ್ ಸೂಪರ್ 1000 ಮತ್ತು ನವೆಂಬರ್ ಮೂರರಿಂದ ಎಂಟರ ವರೆಗೆ ನಡೆಸಲು ಉದ್ದೇಶಿಸಿದ್ದ ಫುಜೊ ಚೀನಾ ಓಪನ್ ವಿಶ್ವ ಟೂರ್ 750 ಟೂರ್ನಿಯನ್ನು ವರ್ಷಾಂತ್ಯಕ್ಕೆ ಮುಂದೂಡಲಾಗಿದೆ. 

ಬಿಡಬ್ಲ್ಯುಎಫ್‌ ಮೇ ತಿಂಗಳಲ್ಲಿ ಪರಿಷ್ಕೃತ ಅಂತರರಾಷ್ಟ್ರೀಯ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಕೊರೊನಾ ವೈರಾಣುವಿನಿಂದಾಗಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚು ಹದಗೆಟ್ಟಿರುವ ಕಾರಣ ಕೆಲವು ಟೂರ್ನಿಗಳನ್ನು ಪರಿಷ್ಕೃತ ವೇಳಾಪಟ್ಟಿಯಿಂದ ಕೈಬಿಡಲಾಗಿದೆ. ಅರ್ಹತಾ ಟೂರ್ನಿಗಳಲ್ಲಿ ಪಡೆದ ರ‍್ಯಾಂಕಿಂಗ್‌ ಪಾಯಿಂಟ್‌ಗಳು ಆಯಾ ಆಟಗಾರರ ಹೆಸರಿನಲ್ಲಿ ಉಳಿಯಲಿವೆ ಎಂದು ಫೆಡರೇಷನ್ ತಿಳಿಸಿತ್ತು. 

ಈ ಹಿಂದೆ ವಿಶ್ವ ರ‍್ಯಾಂಕಿಂಗ್ ಪಟ್ಟಿಯನ್ನು ತಡೆಹಿಡಿದಿದ್ದ ಫೆಡರೇಷನ್ ಮಾರ್ಚ್ 17ರ ಸಂದರ್ಭದಲ್ಲಿ ಇದ್ದ ಪಟ್ಟಿಯ ಆಧಾರದಲ್ಲಿ ಪ್ರಮುಖ ಟೂರ್ನಿಗಳಿಗೆ ಪ್ರವೇಶಾವಕಾಶ ಮತ್ತು ಶ್ರೇಯಾಂಕ ನೀಡಲಾಗುವುದು ಎಂದು ತಿಳಿಸಿತ್ತು.

ಡಿಸೆಂಬರ್‌ನಲ್ಲಿ ನಡೆಯುವ ‘ಹಬ್ಬ’

ವಿಶ್ವ ಟೂರ್‌ ಫೈನಲ್ಸ್ ಟೂರ್ನಿಯು ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯುತ್ತದೆ. ಆಯಾ ವರ್ಷದಲ್ಲಿ ನಡೆಯುವ ವಿಶ್ವ ಟೂರ್ ಟೂರ್ನಿಗಳಲ್ಲಿ ಹೆಚ್ಚು ಪಾಯಿಂಟ್ಸ್ ಕಲೆ ಹಾಕಿದ ಅಥವಾ ಅತಿ ಹೆಚ್ಚು ಟೂರ್ನಿಗಳಲ್ಲಿ ಪಾಲ್ಗೊಂಡ ಆಟಗಾರರಿಗೆ ಇಲ್ಲಿ ಕಣಕ್ಕೆ ಇಳಿಯಲು ಅವಕಾಶ ಇರುತ್ತದೆ. ಭಾರಿ ಮೊತ್ತದ ಬಹುಮಾನ ಅವರನ್ನು ಕಾದಿರುತ್ತದೆ. 

ಈ ವರೆಗಿನ ಎರಡು ಟೂರ್ನಿಗಳು ಗ್ವಾಂಗ್ಜುವಿನಲ್ಲೇ ನಡೆದಿದ್ದು ಕಳೆದ ವರ್ಷ ಪುರುಷರ ಸಿಂಗಲ್ಸ್‌ನಲ್ಲಿ ಜಪಾನ್‌ನ ಕೆಂಟೊ ಮೊಮೊಟ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಚೀನಾದ ಚೆನ್ ಯೂಫಿ ಪ್ರಶಸ್ತಿ ಗಳಿಸಿದ್ದರು. ಇಂಡೊನೇಷ್ಯಾದ ಮಹಮ್ಮದ್ ಅಹ್ಶಾನ್ ಮತ್ತು ಹೇಂದ್ರ ಸತ್ಯವಾನ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಮಹಿಳೆಯರ ಡಬಲ್ಸ್ ಪ್ರಶಸ್ತಿ ಚೀನಾದ ಚೆನ್ ಕ್ವಿಂಚೆನ್ ಮತ್ತು ಜಿಯಾ ಇಫಾನ್‌ ಪಾಲಾಗಿತ್ತು. ಜೆಂಗ್ ಶಿವಿ ಮತ್ತು ಹ್ವಾಂಗ್ ವಾಕ್ಯಾಂಗ್ ಮಿಶ್ರ ಡಬಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. 

2018ರಲ್ಲಿ ಪುರುಷರ ವಿಭಾಗದ ಪ್ರಶಸ್ತಿ ಚೀನಾದ ಶೀ ಯೂಕಿ ಕೊರಳಿಗೇರಿದ್ದರೆ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಭಾರತದ ಪಿ.ವಿ.ಸಿಂಧು ಪಾಲಾಗಿತ್ತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು