7
ಚಾಂಪಿಯನ್ಸ್ ಟ್ರೋಫಿ ಹಾಕಿ: ಶ್ರೀಜೇಶ್ ಬಳಗದ ಹೋರಾಟಕ್ಕೆ ಸಿಗದ ಫಲ

ಆಸ್ಟ್ರೇಲಿಯಾ ಮುಡಿಗೆ ಪ್ರಶಸ್ತಿ

Published:
Updated:
ಭಾರತ ತಂಡದ ಮನ್‌ಪ್ರೀತ್ ಸಿಂಗ್ ಅವರು ಆಸ್ಟ್ರೇಲಿಯಾ ಆಟಗಾರರಿಂದ ಚೆಂಡನ್ನು ಕಸಿದುಕೊಂಡು ಮುನ್ನಡೆದ ಸಂದರ್ಭ ಪಿಟಿಐ ಚಿತ್ರ

ಬ್ರೇಡಾ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾನುವಾರ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಪ್ರಶಸ್ತಿಯನ್ನು ಉಳಿಸಿಕೊಂಡಿತು. ಆದರೆ ಭಾರತ ಹಾಕಿ ತಂಡಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

ಪೆನಾಲ್ಟಿ ಶೂಟೌಟ್‌ನಲ್ಲಿ 2–0 ಗೋಲು ಗಳಿಸಿದ ಆಸ್ಟ್ರೇಲಿಯಾ ತಂಡವು ಜಯಿಸಿತು. ನಿಗದಿತ ಅವಧಿಯಲ್ಲಿ ಸಮಬಲದ ಪೈಪೋಟಿ ನೀಡಿದ ಭಾರತ ತಂಡದವರು 1–1ರಿಂದ ಸಮಬಲ ಸಾಧಿಸಿದ್ದರು. ಆದರೆ, ಪೆನಾಲ್ಟಿ ಶೂಟೌಟ್‌ನಲ್ಲಿ ಗುರಿ ತಪ್ಪಿದರು. ಇದರಿಂದಾಗಿ ಟ್ರೋಫಿಯೂ ಕೈತಪ್ಪಿತು.

ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಲಭಿಸಿದ ನಾಲ್ಕು ‍ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲಿದ ಭಾರತಕ್ಕೆ 42ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ಸಮಬಲದ ಗೋಲು ಗಳಿಸಿಕೊಟ್ಟರು.

ರೌಂಡ್‌ ರಾಬಿನ್ ಹಂತದ ಪಂದ್ಯದಲ್ಲಿ 2–3ರಿಂದ ಆಸ್ಟ್ರೇಲಿಯಾಗೆ ಮಣಿದಿದ್ದ ಭಾರತ ಇಲ್ಲಿ ಸೇಡು ತೀರಿಸಿಕೊಳ್ಳುವ ಛಲದೊಂದಿಗೆ ಕಣಕ್ಕೆ ಇಳಿದಿತ್ತು. ಆರಂಭದಲ್ಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಪರಿಣಾಮ, ಏಳನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಮನ್‌ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

ಎಂಟನೇ ನಿಮಿಷದಲ್ಲಿ ಭಾರತ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಗೋಲು ಗಳಿಸುವ ಆಸೆಗೆ ಆಸ್ಟ್ರೇಲಿಯಾದ ರಕ್ಷಣಾ ವಿಭಾಗದವರು ತಣ್ಣೀರು ಸುರಿಸಿದರು. ಮೊದಲ ಕ್ವಾರ್ಟರ್ ಮುಕ್ತಾಯಗೊಳ್ಳಲು ಎರಡು ನಿಮಿಷಗಳು ಬಾಕಿ ಇದ್ದಾಗ ದಿಲ್‌ ಪ್ರೀತ್ ಅವರು ಅಮೋಘ ರಿವರ್ಸ್ ಹಿಟ್ ಮೂಲಕ ಚೆಂಡನ್ನು ಎಸ್‌.ವಿ. ಸುನಿಲ್ ಅವರ ಬಳಿಗೆ ತಲುಪಿಸಿದರು. ಆದರೆ ಸುನಿಲ್ ಕಾಲಿಗೆ ಬಡಿದ ಚೆಂಡು ಎದುರಾಳಿ ಆಟಗಾರರ ಬಳಿಗೆ ಸಾಗಿತು.

18ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಹರ್ಮನ್‌ಪ್ರೀತ್ ಅವರು ಚೆಂಡನ್ನು ಡ್ರ್ಯಾಗ್ ಫ್ಲಿಕ್ ಮಾಡಿದರು. ಆದರೆ ಆಸ್ಟ್ರೇಲಿಯಾದ ರಕ್ಷಣಾ ಗೋಡೆಯನ್ನು ಕೆಡವಲು ಅವರಿಗೆ ಸಾಧ್ಯವಾಗಲಿಲ್ಲ. 20ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಬ್ಲ್ಯಾಕ್ ಗೋವರ್ಸ್‌ ಭಾರತದ ಆವರಣದಲ್ಲಿ ಆತಂಕ ಸೃಷ್ಟಿಸಿದರು. ಅವರಿಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ. ಆದರೆ 24ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಅವರು ಯಶಸ್ಸು ಕಂಡರು. ಈ ಮೂಲಕ ಆಸ್ಟ್ರೇಲಿಯಾಗೆ ಮುನ್ನಡೆ ಗಳಿಸಿಕೊಟ್ಟರು.

ಪ್ರಯತ್ನಕ್ಕೆ ಸಂದ ಫಲ: 0–1ರ ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತ ದ್ವಿತೀಯಾರ್ಧದಲ್ಲಿ ಆಕ್ರಮಣಕ್ಕೆ ಒತ್ತು ನೀಡಿತು. 33ನೇ ನಿಮಿಷದಲ್ಲಿ ತಂಡಕ್ಕೆ ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ವರುಣ್‌ ಕುಮಾರ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಜೋಡಿ ಉತ್ತಮ ಪ್ರಯತ್ನ ನಡೆಸಿದರು. ಆದರೂ ತಂಡಕ್ಕೆ ಮುನ್ನಡೆ ಗಳಿಸಲು ಆಗಲಿಲ್ಲ. ಆದರೆ ಮೂರನೇ ಕ್ವಾರ್ಟರ್ ಮುಕ್ತಾಯಕ್ಕೆ ಮೂರು ನಿಮಿಷ ಇದ್ದಾಗ ಭಾರತದ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ವಿವೇಕ್ ಪ್ರಸಾದ್ ಗಳಿಸಿಕೊಟ್ಟ ಗೋಲಿನ ಮೂಲಕ ಪಿ.ಆರ್‌. ಶ್ರೀಜೇಶ್‌ ಬಳಗ ಸಮಬಲ ಸಾಧಿಸಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !