ಬೂಮ್ರಾ ಭುಜಬಲ

7

ಬೂಮ್ರಾ ಭುಜಬಲ

Published:
Updated:
Prajavani

ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಓಡಾಡುತ್ತಿದೆ. ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನು ಅನುಕರಿಸುವ ಆಸ್ಟ್ರೇಲಿಯಾದ ಬಾಲಕನ ದೃಶ್ಯ ಅದರಲ್ಲಿದೆ.

‘ಭಾರತವು ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದು ಒಂದೆಡೆ, ಆದರೆ ಈ ಸರಣಿಯ ಪರಿಣಾಮದಿಂದ ಆಸ್ಟ್ರೇಲಿಯಾದ ಭವಿಷ್ಯದ ಬೌಲರ್‌ಗಳು ಬೂಮ್ರಾರಂತೆ ಆಗುವತ್ತ ದಾಪುಗಾಲಿಟ್ಟಿದ್ದಾರೆ’ ಎಂದು ಆ ಬಾಲಕನ ತಂದೆ  ಮಿಚೆಲ್ ಕರ್ಟಿನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಬೂಮ್ರಾ ಅವರು ರನ್‌ ಅಪ್ ಆರಂಭಿಸುವಾಗ ಕುದುರೆಯಂತೆ ನೆಗೆನೆಗೆದು ಮುಂದಡಿ ಇಡುವ ಕ್ರೀಸ್‌ನ ಸಮೀಪ ಸ್ವಲ್ಪ ಎತ್ತರಕ್ಕೆ ಜಿಗಿದು ಕೈಗಳನ್ನು ತಿರುಗಿಸಿ ಬೌಲ್ ಮಾಡುವ ವಿಶಿಷ್ಟ ಶೈಲಿಯು ಈಗ ಬಹುತೇಕ ಹುಡುಗರ ಮನಕದ್ದಿದೆ. 80ರ ದಶಕದಲ್ಲಿ ಕಪಿಲ್‌ ದೇವ್, ಚೇತನ್ ಶರ್ಮಾ, ಇಮ್ರಾನ್ ಖಾನ್, ವಾಸೀಂ ಅಕ್ರಂ, 90ರ ದಶಕದಲ್ಲಿ ಜಾವಗಲ್ ಶ್ರೀನಾಥ್, ಜಹೀರ್ ಖಾನ್, ವಕಾರ್ ಯೂನುಸ್, 2000ದ ನಂತರ ಚಮಿಂದಾ ವಾಸ್, ಬ್ರೆಟ್ ಲೀ, ಗ್ಲೆನ್ ಮೆಕ್‌ಗ್ರಾ, ಲಸಿತ್ ಮಾಲಿಂಗ ಅವರ ಶೈಲಿಗಳ ಅನುಕರಣೆಯು ಗಲ್ಲಿ ಕ್ರಿಕೆಟ್‌ನಲ್ಲಿ ಹಾಸುಹೊಕ್ಕಾಗಿದ್ದವು. ಕ್ರಿಕೆಟ್‌ ಜಗತ್ತಿಗೆ ಘಟಾನುಘಟಿ ವೇಗಿಗಳನ್ನು ನೀಡಿರುವ ಆಸ್ಟ್ರೇಲಿಯಾದಲ್ಲಿ ಬೂಮ್ರಾ ಮಾಡಿರುವ ಮೋಡಿಯು ಈಗಿನ ವಿಶೇಷ.

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತವು 2–1ರಿಂದ ಜಯಿಸಲು ಪ್ರಮುಖ ಕಾರಣವಾಗಿದ್ದು ಬೂಮ್ರಾ ಬೌಲಿಂಗ್. ಸರಣಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು (ಆಸ್ಟ್ರೇಲಿಯಾದ ನೇಥನ್ ಲಯನ್ ಕೂಡ ಅಷ್ಟೇ ವಿಕೆಟ್‌ಗಳನ್ನು ಪಡೆದಿದ್ದಾರೆ) ಗಳಿಸಿದ್ದಾರೆ. ತಮ್ಮ ಡಿಫರೆಂಟ್ ಶೈಲಿಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟಿಂಗ್ ಪಡೆಗೆ ಸಿಂಹಸ್ವಪ್ನರಾದರು.  ಆದರೆ, ಅವರ ಈ ಅಮೋಘ ಆಟದ ಹಿಂದೆ ಅಪಾರ ಪರಿಶ್ರಮವಿದೆ. ಏಕೆಂದರೆ, ಆರು ತಿಂಗಳ ಹಿಂದೆ ಅವರ ಕ್ರಿಕೆಟ್‌ ಜೀವನದ ಮೇಲೆ ಆತಂಕದ ತೂಗುಗತ್ತಿ ನೇತಾಡಿತ್ತು.

ನೋಬಾಲ್ ತಂದಿದ್ದ ಆಪತ್ತು

ಹೋದ ವರ್ಷ ಆಗಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಭವಿಷ್ಯ ಮುಗಿದೇ ಹೋಯಿತು ಎಂಬ ಚರ್ಚೆಗಳು ತಾರಕಕ್ಕೇರಿದ್ದವು. ಅವರು ಹಾಕುತ್ತಿದ್ದ ಯಾರ್ಕರ್, ಇನ್‌ಸ್ವಿಂಗ್, ಲೆಗ್‌ಕಟರ್‌ ಎಸೆತಗಳು ಮೊನಚಾಗಿದ್ದವು. ಆದರೆ, ಪಾಪಿಂಗ್ ಕ್ರೀಸ್‌ನಿಂದ ಹೊರಗೆ ಕಾಲಿಟ್ಟು ‘ನೋಬಾಲ್’ ಮಾಡುತ್ತಿದ್ದ ಅವರ ದೌರ್ಬಲ್ಯ  ಆತಂಕ ತಂದಿತ್ತು. ಪಾಕಿಸ್ತಾನದ ಫೈಸಲಾಬಾದ್ ಪೊಲೀಸರು ಟ್ರಾಫಿಕ್‌ ನಿರ್ವಹಣೆಯಲ್ಲಿ ಲೈನ್ ಮಹತ್ವವನ್ನು ಸಾರಲು ಬೂಮ್ರಾ ಅವರ ಅವರ ನೋಬಾಲ್ ರೂಪಕವನ್ನೇ ಬಳಸಿಕೊಂಡಿದ್ದರು. ಇದು ಸಾಕಷ್ಟು ವ್ಯಂಗ್ಯ, ಟೀಕೆಗಳಿಗೆ ಗುರಿಯಾಗಿತ್ತು.

ಅದೆಲ್ಲಕ್ಕಿಂತ ಹೆಚ್ಚಾಗಿ; ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನದ ಫಖ್ರ್ ಜಮಾನ್ ಅವರ ಎದುರು ನೋಬಾಲ್ ಹಾಕಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಪಂದ್ಯದಲ್ಲಿ ಅವರು ಮೂರು ನೋಬಾಲ್ ಹಾಕಿದ್ದರು. ಇದರಿಂದಾಗಿ ಪಾಕ್ ತಂಡಕ್ಕೆ ಫ್ರೀ ಹಿಟ್‌ಗಳು ಲಭಿಸಿದ್ದವು. ಆ ಪಂದ್ಯದಲ್ಲಿ ಭಾರತ ಸೋತಿತ್ತು.

ಆ ನಂತರವೂ ಏಕದಿನ, ಟ್ವಿಂಟಿ–20 ಟೂರ್ನಿಗಳಲ್ಲಿ ಅವರ ವೈಡ್‌ ಬಾಲ್ ಸಮಸ್ಯೆ ಮುಂದುವರಿದಿತ್ತು. ಟ್ವಿಟರ್‌ಗಳಲ್ಲಿ ಟೀಕೆಗಳ ಮಳೆಯೂ ಸುರಿಯುತ್ತಿತ್ತು. ಆದರೆ, ಗಟ್ಟಿ ಮನೋಭಾವದ  ಬೂಮ್ರಾ ಎದೆಗುಂದಲಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ  ಒಂದಿಷ್ಟು ದಿನ ಇದ್ದು ತಮ್ಮ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಿದರು. ಹಿರಿಯ ಬೌಲರ್‌ಗಳಿಂದ ಸಲಹೆ ಪಡೆದುಕೊಂಡರು. ಕಠಿಣ ಶ್ರಮಪಟ್ಟು ಅಭ್ಯಾಸ ಮಾಡಿದರು. ಅಂತೂ ಇಂತೂ ಲೈನ್ ಆಫ್‌ ಕಂಟ್ರೋಲ್ ಕಂಡುಕೊಂಡರು. ಅವರ ವಿಶಿಷ್ಟವಾದ ಶೈಲಿಯಲ್ಲಿ ನೋಬಾಲ್‌ ಎಸೆಯದಂತೆ ನಿಯಂತ್ರಿಸುವುದು ತುಸು ಕಷ್ಟವೇ ಆಗಿತ್ತು. ಆದ್ದರಿಂದ ರನ್‌ ಅಪ್‌ನಲ್ಲಿ ಒಂದು ಹಜ್ಜೆ ಹಿಂದೆ ಹೋಗಿ ಬೌಲಿಂಗ್ ಆರಂಭಿಸುವ ರೂಢಿ ಮಾಡಿಕೊಂಡರು. ಬಾಲ್ಯದಿಂದಲೂ ಪ್ರವಾಹದ ವಿರುದ್ಧ ಈಜಿ ಗೆಲ್ಲುವ ಮನಸ್ಥಿತಿ ಬೆಳೆಸಿಕೊಂಡಿರುವ ಬೂಮ್ರಾಗೆ ಈ ಸವಾಲು ಮೀರಲು ಸಾಧ್ಯವಾಯಿತು.

ತಡವಾದ ಟೆಸ್ಟ್ ಅವಕಾಶ

ಬೂಮ್ರಾಗೆ ಟೆಸ್ಟ್‌ ಆಡುವ ಅವಕಾಶ ಸಿಕ್ಕಿದ್ದು ತಡವಾಗಿಯೇ. 2016ರ ಜನವರಿಯಲ್ಲಿ ಟ್ವೆಂಟಿ–20 ಮತ್ತು ಏಕದಿನ ಮಾದರಿಗಳಿಗೆ ಪದಾರ್ಪಣೆ ಮಾಡಿದವರು ಬೂಮ್ರಾ. ಅಹಮದಾಬಾದ್‌ನಲ್ಲಿರುವ ಪಂಜಾಬಿ ಮೂಲದ ಕುಟುಂಬದ ಬೂಮ್ರಾ ತಮ್ಮ ವಿಶಿಷ್ಟ ಶೈಲಿಯ ಮೂಲಕವೇ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದವರು. ರಣಜಿ, ‘ಎ’ ದರ್ಜೆ ಕ್ರಿಕೆಟ್‌ಗಳಲ್ಲಿ ಮಿಂಚಿದ್ದವರು. 2014ರಲ್ಲಿ ಮೊಣಕಾಲಿಗೆ ಆಗಿದ್ದ ಗಾಯದಿಂದ ಕ್ರಿಕೆಟ್‌ ಬಿಡುವ ಆತಂಕ ಎದುರಾಗಿತ್ತು. ಆದರೆ, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು, ಮತ್ತೆ ಚೆಂಡು ಕೈಗೆ ತೆಗೆದುಕೊಂಡರು. ಮುಂದಿನದ್ದು ಇತಿಹಾಸ. ‘ಡೆತ್‌ ಓವರ್’ ಪರಿಣತ ಬೌಲರ್‌ ಆಗಿ ಬೆಳೆದರು.

ಆಗಿನ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಆವರು ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಬೂಮ್ರಾ ಕೈಗೆ ಚೆಂಡು ಕೊಟ್ಟರು. ನಾಯಕನ ನಂಬುಗೆಯನ್ನು ಉಳಿಸಿಕೊಳ್ಳುವಲ್ಲಿ ಬೂಮ್ರಾ ಕೂಡ ಹಿಂದೆ ಬೀಳುತ್ತಿರಲಿಲ್ಲ. ರಿವರ್ಸ್ ಸ್ವಿಂಗ್, ಬ್ಲಾಕ್‌ ಹೋಲ್ ಯಾರ್ಕರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳ ಪಾದಗಳು ತಡಬಡಾಯಿಸುವಂತೆ ಮಾಡಿದರು. 

ಆದರೂ ಆದರೆ ಟೆಸ್ಟ್ ಕ್ಯಾಪ್ ಧರಿಸಲು 2018ರ ಜನವರಿವರೆಗೂ ಕಾಯಬೇಕಾಯಿತು. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದರು. ಒಂದು ವರ್ಷದ ಅವಧಿಯಲ್ಲಿ ಹತ್ತು ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಭುಜಬಲ ಮೆರೆದಿದ್ದಾರೆ. ಉದಯೋನ್ಮುಖ ಬೌಲರ್‌ಗಳ ಮನಗೆದ್ದಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !