ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWG 2022: ಕುಸ್ತಿ ಅಂಗಣದಲ್ಲಿ ಪದಕ ಭರಾಟೆ, ಮತ್ತೆ ಮೂರು ಚಿನ್ನ

ರವಿಕುಮಾರ್, ನವೀನ್, ವಿನೇಶಾ ಪೋಗಟ್‌ ಮಿಂಚು; ಪೂಜಾಗೆ ಕಂಚು
Last Updated 6 ಆಗಸ್ಟ್ 2022, 21:14 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ : ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿ ಅಖಾಡದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ರವಿ ಕುಮಾರ್, ನವೀನ್‌ ಮತ್ತು ವಿನೇಶಾ ಪೋಗಟ್‌ ಚಿನ್ನ ಗೆದ್ದರೆ, ಪೂಜಾ ಗೆಹಲೋತ್‌ ಹಾಗೂ ಪೂಜಾ ಸಿಹಾಗ್ ಕಂಚು ತಮ್ಮದಾಗಿಸಿಕೊಂಡರು.

ಶನಿವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿ 10–0 ರಲ್ಲಿ ನೈಜೀರಿಯದ ಎಬಿಕ್ವೆನಿಮೊ ವೆಲ್ಸನ್‌ ವಿರುದ್ಧ ಜಯಿಸಿದರು. ಅದ್ಭುತ ಚಾಕಚಕ್ಯತೆ ತೋರಿದ ಅವರು ಕೇವಲ 2.16 ನಿಮಿಷಗಳಲ್ಲಿ ಗೆದ್ದರು.

ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಅವರನ್ನು ಮಣಿಸಿದ್ದ ರವಿ, ಸೆಮಿಫೈನಲ್‌ನಲ್ಲಿ 14–4 ರಲ್ಲಿ ಪಾಕಿಸ್ತಾನದ ಅಲಿ ಅಸಾದ್ ವಿರುದ್ಧ ಗೆದ್ದಿದ್ದರು.

ನವೀನ್‌ ಅವರು ಪುರುಷರ 74 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್‌ ಶರೀಫ್‌ ತಾಹಿರ್‌ ಅವರನ್ನು 9–0 ರಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ನವೀನ್‌ ಎರಡು ಸುತ್ತುಗಳಲ್ಲೂ ಎದುರಾಳಿಗೆ ಯಾವುದೇ ಪಾಯಿಂಟ್‌
ಬಿಟ್ಟುಕೊಡಲಿಲ್ಲ.

ವಿನೇಶಾಗೆ ಹ್ಯಾಟ್ರಿಕ್‌ ಚಿನ್ನ: ವಿನೇಶಾ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಚಿನ್ನದ ನಗು ಬೀರಿದರು. ಈ ವಿಭಾಗದಲ್ಲಿ ನಾಲ್ವರು ಮಾತ್ರ ಕಣದಲ್ಲಿದ್ದರು. ಇತರ ಮೂವರನ್ನು ಮಣಿಸಿದ ಅವರು ಅಗ್ರಸ್ಥಾನ ಪಡೆದರು.

ವಿನೇಶಾ ಅವರು ಮೊದಲ ಸುತ್ತಿನಲ್ಲಿ ಕೆನಡಾದ ಸಮಂತಾ ಸ್ಟಿವರ್ಟ್‌ ಅವರನ್ನು ಕೇವಲ 36 ಸೆಕೆಂಡುಗಳಲ್ಲಿ ನೆಲಕ್ಕೆ ಕೆಡವಿ ಶುಭಾರಂಭ ಮಾಡಿದರು. ಆ ಬಳಿಕ ನೈಜೀರಿಯದ ಮರ್ಸಿ ಅಡೆಕುರೆಯೊ ಎದುರು 6–0 ಅಂತರದಿಂದ ಜಯಿಸಿದರು.

ಕೊನೆಯ ಕುಸ್ತಿಯಲ್ಲಿ ಅವರು ಶ್ರೀಲಂಕಾದ ಚಮೋದ್ಯ ಕೇಶನಿ ಮದುರವಲಗೆ ಅವರನ್ನು ನೆಲಕ್ಕುರುಳಿಸಿ ಅಜೇಯ ಸಾಧನೆ ಮಾಡಿದರು.

ಕಾಮಲ್‌ವೆಲ್ತ್‌ ಕೂಟದಲ್ಲಿ ಅವರಿಗೆ ದೊರೆತ ಸತತ ಮೂರನೇ ಚಿನ್ನ ಇದು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಗೌರವವನ್ನು ಅವರು ತಮ್ಮದಾಗಿಸಿಕೊಂಡರು.

ಕಳೆದ ಕೆಲ ಸಮಯಗಳಿಂದ ಫಿಟ್‌ನೆಸ್‌ ಸಮಸ್ಯೆಯಿಂದ ಬಳಲಿದ್ದ ಅವರು ಮಾನಸಿಕವಾಗಿಯೂ ಕುಗ್ಗಿದ್ದರು. ಇದೀಗ ಚಿನ್ನ ಜಯಿಸಿ ಪುಟಿದೆದ್ದು ನಿಂತಿದ್ದಾರೆ.

ಪೂಜಾ ಗೆಹಲೋತ್‌ ಅವರು ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 12–2 ರಲ್ಲಿ ಕ್ರಿಸ್ಟೆಲ್‌ ಲೆಮೊಫಾಕ್‌ ವಿರುದ್ಧ ಜಯಿಸಿದರು. ಪೂಜಾ ಸೆಮಿಫೈನಲ್‌ನಲ್ಲಿ 6–9 ರಲ್ಲಿ ಕೆನಡಾದ ಮ್ಯಾಡಿಸನ್‌ ಪಾರ್ಕ್ಸ್‌ ಎದುರು ಪರಾಭಗೊಂಡಿದ್ದರು.

ಪೂಜಾ ಸಿಹಾಗ್‌ ಅವರು ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದರು. ಅವರು 11–0 ರಲ್ಲಿ ಆಸ್ಟ್ರೇಲಿಯಾದ ನವೊಮಿ ಡಿ ಬ್ರೂನ್ ಎದುರು ಗೆದ್ದರು.

ಭಾರತದ ಇನ್ನೊಬ್ಬ ಕುಸ್ತಿಪಟು ದೀಪಕ್‌ ನೆಹ್ರಾ ಅವರು ಪುರುಷರ 97 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದು, ಕಂಚಿನ ಪದಕಕ್ಕಾಗಿ ಪೈಪೋಟಿ
ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT