ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ದಬಂಗ್ ಡೆಲ್ಲಿಗೆ ಭರ್ಜರಿ ಗೆಲುವು

ಗುಜರಾತ್ ಜೈಂಟ್ಸ್‌ಗೆ ನಿರಾಶೆ; ಮಂಜಿತ್, ಕೃಷನ್ ‘ಹೈ ಫೈವ್‌’
Last Updated 29 ಜನವರಿ 2022, 16:22 IST
ಅಕ್ಷರ ಗಾತ್ರ

ಬೆಂಗಳೂರು: ರೇಡಿಂಗ್‌ನಲ್ಲೂ ಟ್ಯಾಕ್ಲಿಂಗ್‌ನಲ್ಲೂ ಅತ್ಯಮೋಘ ಆಟ ಪ್ರದರ್ಶಿಸಿದ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ವೈಟ್‌ಫೀಲ್ಡ್‌ನಹೋಟೆಲ್ ಶೆರಟಾನ್ ಗ್ರ್ಯಾಂಡ್‌ ಆವರಣದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ತಂಡವನ್ನು ಡೆಲ್ಲಿ 41–22ರಲ್ಲಿ ಮಣಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್ ಎರಡನೇ ಸ್ಥಾನಕ್ಕೆ ಕುಸಿಯಿತು.

ಡಿಫೆಂಡರ್‌ಗಳಾದ ಮಂಜಿತ್ ಚಿಲ್ಲಾರ್ ಮತ್ತು ಕೃಷನ್ ಅವರು ಡೆಲ್ಲಿಗಾಗಿ ‘ಹೈ ಫೈವ್‌’ ಸಾಧನೆ ಮಾಡಿದರು. ರೇಡಿಂಗ್‌ನಲ್ಲಿ ವಿಜಯ್‌ ಮತ್ತು ನೀರಜ್ ಉತ್ತಮ ಸಾಮರ್ಥ್ಯ ಮೆರೆದರು.

ಈ ಪಂದ್ಯದಲ್ಲೂ ಡೆಲ್ಲಿ ತಂಡ ನಾಯಕ ನವೀನ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಗುಜರಾತ್ ಜೈಂಟ್ಸ್‌ಗೆ ಇದರ ಸದುಪಯೋಗ ಪಡೆದುಕೊಳ್ಳಲು ಆಗಲಿಲ್ಲ. ಆಕ್ರಮಣದಲ್ಲೂ ರಕ್ಷಣೆಯಲ್ಲೂ ತಂಡಕ್ಕೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ.

ರಕ್ಷಣಾ ವಿಭಾಗದ ಮಿಂಚಿನ ಆಟದೊಂದಿಗೆ ಡೆಲ್ಲಿ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಿತು. ಸಂದೀಪ್ ನರ್ವಾಲ್ ಮತ್ತು ಮಂಜಿತ್‌ ಆತ್ಮವಿಶ್ವಾಸದಿಂದ ಆಡಿದರು. ಇದರಿಂದ ಪ್ರೇರಣೆಗೊಂಡ ಯುವ ಆಟಗಾರ ಕೃಷನ್ ಕೂಡ ಎದುರಾಳಿಗಳನ್ನು ಕಾಡಿದರು. ವಿಜಯ್‌ ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ರೇಡಿಂಗ್‌ನಲ್ಲಿ ಮಿಂಚಿದರು. ಏಳನೇ ನಿಮಿಷದಲ್ಲಿ ಸೂಪರ್ ರೇಡ್ ಮಾಡಿ ಮೂರು ಪಾಯಿಂಟ್ ತಂದರು. ರಾಕೇಶ್ ನರ್ವಾಲ್ ಸೂಪರ್ ಟ್ಯಾಕಲ್ ಮೂಲಕ ಗುಜರಾತ್ ಪಾಳಯದಲ್ಲಿ ಮಿಂಚಿದರೂ 11ನೇ ನಿಮಿಷದಲ್ಲಿ ಆಲ್‌ಔಟ್‌ ಆಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಮೊದಲಾರ್ಧದ ಮುಕ್ತಾಯಕ್ಕೆ ಡೆಲ್ಲಿ 22–11ರ ಮುನ್ನಡೆ ಸಾಧಿಸಿತು. ನಂತರವೂ ತಂಡ ಆಧಿಪತ್ಯ ಮುಂದುವರಿಸಿತು. ವಿಜಯ್ 8 ಪಾಯಿಂಟ್ಸ್‌, ಸಂದೀಪ್ ನರ್ವಾಲ್ ಮತ್ತು ಅಶು ಮಲಿಕ್ ತಲಾ ಆರು, ಮಂಜಿತ್ ಚಿಲ್ಲರ್ ಮತ್ತು ಕೃಷನ್ ತಲಾ ಐದು ಪಾಯಿಂಟ್‌ ಗಳಿಸಿದರು. ಗುಜರಾತ್ ಪರ ಪ್ರದೀಪ್ ಕುಮಾರ್ ಏಳು ಪಾಯಿಂಟ್‌ ಕಲೆ ಹಾಕಿದರು. ರಾಕೇಶ್ ಮತ್ತು ರಾಕೇಶ್ ನರ್ವಾಲ್ ತಲಾ ಮೂರು ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT