ಭಾನುವಾರ, ಆಗಸ್ಟ್ 25, 2019
24 °C

ದಾಖಲೆಯ ‘ಹರ್ಡಲ್ಸ್’ ದಾಟಿದ ದಲಿಲಾ

Published:
Updated:
Prajavani

ಜುಲೈ 27ರಂದು ಅಮೆರಿಕದ ಡ್ರೇಕ್‌ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಯಿತು. ಅಮೆರಿಕ ರಾಷ್ಟ್ರೀಯ ಕ್ರೀಡಾಕೂಟದ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ್ದ 29 ವರ್ಷದ ದಲಿಲಾ ಮುಹಮ್ಮದ್ ಒಂದೂವರೆ ದಶಕದ ಹಿಂದಿನ ದಾಖಲೆಯನ್ನು ಮುರಿದರು. 52.20 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ದಲಿಲಾ 2003ರಲ್ಲಿ ಯೂಲಿಯಾ ಪೆಚೊಂಕಿನಾ ಗುರಿ ಮುಟ್ಟಲು ತೆಗೆದುಕೊಂಡದ್ದಕ್ಕಿಂತ 0.14 ಸೆಕೆಂಡುಗಳಷ್ಟು ವೇಗವಾಗಿ ಓಟ ಮುಗಿಸಿದ್ದರು.

ಸಣ್ಣ ವಯಸ್ಸಿನಲ್ಲೇ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಅಸಾಮಾನ್ಯ ಸಾಧನೆ ಮಾಡುತ್ತ ಬಂದಿದ್ದ ದಲಿಲಾ, ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ವಿಶ್ವ ಅಥ್ಲೆಟಿಕ್ ಫೆಡರೇಷನ್‌ನ ಯುವ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲೂ 400 ಮೀಟರ್ಸ್ ಹರ್ಡಲ್ಸ್ ಸ್ಪರ್ಧೆಯ ಚಿನ್ನ ದಲಿಲಾ ಪಾಲಾಗಿತ್ತು.

ಹರ್ಡಲ್ಸ್, ಸ್ಪ್ರಿಂಟ್ ಮತ್ತು ಹೈಜಂಪ್, ದಲಿಲಾ ಶಾಲಾ ದಿನಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರಮುಖ ಸ್ಪರ್ಧೆಗಳು. 2008ರಲ್ಲಿ ಮೊದಲ ರಾಷ್ಟ್ರೀಯ ಪದಕ ಗಳಿಸಿದ್ದರು. ನ್ಯೂಯಾರ್ಕ್‌ನಲ್ಲಿ ನಡೆದ ಕೂಟದ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಪದಕ ಗೆದ್ದಿದ್ದರು. ಅದೇ ವರ್ಷ ನಡೆದ ಪೆಸಿಫಿಕ್ 10 ಕಾನ್ಫರೆನ್ಸ್ ಕೂಟದ 400 ಮೀಟರ್ಸ್ ಹರ್ಡಲ್ಸ್ ಮತ್ತು 4x400 ಮೀಟರ್ಸ್ ರಿಲೇಯಲ್ಲಿ ರನ್ನರ್ ಅಪ್ ಆದರು. ಇದೇ ಕೂಟದ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ 13.79 ಸೆಕೆಂಡುಗಳ ಸಾಧನೆಯೊಂದಿಗೆ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ನಂತರ ಸಾಧನೆಯ ಹಾದಿಯಲ್ಲೇ ಸಾಗಿದರು. 2011 ಮತ್ತು 2012ರಲ್ಲಿ ಉತ್ತುಂಗಕ್ಕೇರಿದರು. 60 ಮೀಟರ್ಸ್ ಹರ್ಡಲ್ಸ್‌ನಲ್ಲಿ 8.23 ಸೆಕೆಂಡುಗಳ ಸಾಧನೆ ಮಾಡಿದ ದಲಿಲಾ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಗುರಿ ಮುಟ್ಟಲು 13.33 ಸೆಕೆಂಡು ತೆಗೆದುಕೊಂಡು ಗಮನ ಸೆಳೆದರು.

ಕಾಲೇಜು ಶಿಕ್ಷಣ ಮುಗಿದ ನಂತರ ದಲಿಲಾ ಕೇವಲ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದರು. 2013ನೇ ಇಸವಿಯಲ್ಲಿ ಹರ್ಡಲ್ಸ್‌ನಲ್ಲಿ ಸಾಧನೆ ಉತ್ತಮಪಡಿಸಲು ಗಮನ ಕೇಂದ್ರೀಕರಿಸಿದರು. ಮೊದಲು 55.97 ಸೆಕೆಂಡುಗಳ ಸಾಧನೆ ಮಾಡಿದರು. ನಂತರ ಇದನ್ನು 54.94ಕ್ಕೆ ಏರಿಸಿಕೊಂಡರು. ಡೈಮಂಡ್ ಲೀಗ್‌ಗೆ ಪದಾರ್ಪಣೆ ಮಾಡಿದ ವರ್ಷವೇ 54.74 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನಾಲ್ಕನೇ ಸ್ಥಾನ ಗಳಿಸಿದರು. ಹೀಗೆ ಪ್ರಗತಿಯ ಮೆಟ್ಟಿಲುಗಳನ್ನೇರುತ್ತಾ ದಾಖಲೆ ಬರೆದರು.

ಬಗೆ ಬಗೆಯ ತರಬೇತಿ

ಕಳೆದ ವರ್ಷ ದಲಿಲಾ ವೃತ್ತಿ ಜೀವನದಲ್ಲಿ ನಿರಾಸೆ ಕಂಡಿದ್ದರು. ಓಟವನ್ನು ಉತ್ತಮಪಡಿಸುತ್ತ ಸಾಗುತ್ತಿದ್ದ ಅವರು ದಿಢೀರ್ ಕುಸಿತ ಅನುಭವಿಸಿದ್ದರು. ಒಟ್ಟು ಏಳು ಡೈಮಂಡ್ ಲೀಗ್ ಕೂಟಗಳಲ್ಲಿ ಪಾಲ್ಗೊಂಡಿದ್ದರೂ ಪದಕ ಗಳಿಸಿದ್ದು ಮೂರರಲ್ಲಿ ಮಾತ್ರ. 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಗರಿಷ್ಠ ಸಾಧನೆ 53.65 ಸೆಕೆಂಡು ಆಗಿತ್ತು. ಇದು, 2015ರ ನಂತರ ಅವರ ತೀರ ಕಳಪೆ ಸಾಧನೆಯಾಗಿತ್ತು.

ಹೀಗಾಗಿ ಅವರು ವಿಶೇಷವಾದ ಬಗೆ ಬಗೆಯ ತರಬೇತಿ ಮತ್ತು ವರ್ಕ್ಔಟ್‌ಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಇವುಗಳ ಪೈಕಿ ಅತ್ಯಂತ ಕಠಿಣವಾಗಿದ್ದದ್ದು 400 ಮೀಟರ್‌ನ 12 ಲ್ಯಾಪ್‌ಗಳ ಓಟ. ಇದನ್ನು ಸಮರ್ಥವಾಗಿ ಮುಗಿಸಿದ ನಂತರ ಹರ್ಡಲ್ಸ್ ಇರಿಸಿ ಅಭ್ಯಾಸ ಮಾಡಿದರು. ನಂತರ ಸ್ವಲ್ಪ ಕಾಲ ಸ್ಪ್ರಿಂಟ್‌ನಲ್ಲಿ ತೊಡಗಿಸಿಕೊಂಡರು. ಇದೆಲ್ಲವೂ ಅವರ ದಾಖಲೆಗೆ ನೆರವಾಯಿತು.

ಪ್ರಮುಖ ಪದಕಗಳು

2016ರ ರಿಯೊ ಒಲಿಂಪಿಕ್ಸ್;ಚಿನ್ನ

2017ರ ವಿಶ್ವ ಚಾಂಪಿಯನ್‌ಷಿಪ್ (ಲಂಡನ್);ಬೆಳ್ಳಿ

2013ರ ವಿಶ್ವ ಚಾಂಪಿಯನ್‌ಷಿಪ್ (ಮಾಸ್ಕೊ);ಬೆಳ್ಳಿ

2007ರ ವಿಶ್ವ ಯೂತ್ ಚಾಂಪಿಯನ್‌ಷಿಪ್ (ಓಸ್ಟ್ರವಾ);ಚಿನ್ನ

2009ರ ಪಾನ್ ಅಮೆರಿಕ ಜೂನಿಯರ್ ಚಾಂಪಿಯನ್‌ಷಿಪ್ (ಪೋರ್ಟ್ ಆಫ್ ಸ್ಪೇನ್);ಬೆಳ್ಳಿ

2013, 2016, 2017ರಲ್ಲಿ ಅಮೆರಿಕದ ರಾಷ್ಟ್ರೀಯ ಚಾಂಪಿಯನ್

Post Comments (+)