ಬುಧವಾರ, ಅಕ್ಟೋಬರ್ 21, 2020
21 °C

ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ‌ಡೇವಿಡ್‌ ಜಾನ್‌ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ‌ಡೇವಿಡ್‌ ಜಾನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಫೆಡರೇಷನ್‌ನ ಹಿರಿಯ ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ. ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಇತ್ತೀಚೆಗಷ್ಟೇ ಅವರ ಗುತ್ತಿಗೆಯನ್ನು ನವೀಕರಣ ಮಾಡಿತ್ತು. 

ಸೆಪ್ಟೆಂಬರ್‌ 2021ರವರೆಗೆ ಅವರ ಒಪ್ಪಂದವನ್ನು ವಿಸ್ತರಿಸಲಾಗಿತ್ತು. ಬಹಳ ದಿನಗಳಿಂದ ಹಾಕಿ ಇಂಡಿಯಾ (ಎಚ್‌ಐ) ನನ್ನನ್ನು ಕಡೆಗಣಿಸಿದ್ದು, ರಾಜೀನಾಮೆ ನೀಡುತ್ತಿರುವುದಾಗಿ ಆಸ್ಟ್ರೇಲಿಯಾ ಮೂಲದ ಜಾನ್‌ ಹೇಳಿದ್ದಾರೆ.

‘ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಎರಡು ದಿನಗಳ ಹಿಂದೆ ಎಚ್‌ಐ ಹಾಗೂ ಸಾಯ್‌ಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಅವರ ರಾಜೀನಾಮೆಯನ್ನು ಎಚ್‌ಐ ಅಂಗೀಕರಿಸಿದೆ. ಆದರೆ ಸಾಯ್‌ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ‘ ಎಂದು ಮೂಲಗಳು ತಿಳಿಸಿವೆ.

‘ಹಾಕಿ ಇಂಡಿಯಾದಿಂದ ಕಡೆಗಣನೆಗೆ ಒಳಗಾಗಿದ್ದ ಜಾನ್‌ ಬಹಳ ದಿನಗಳಿಂದ ಹತಾಶೆಗೊಂಡಿದ್ದರು. ತಂಡದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿ ಉನ್ನತ ಅಧಿಕಾರಿಗಳು ಅವರನ್ನು ನಿರ್ಲಕ್ಷಿಸಿದ್ದರು‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಾನ್‌ ಅವರು ತಂಡದ ಯಾವುದೇ ನಿರ್ಧಾರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆಟಗಾರರಿಗೆ ಹಾಗೂ ಕೋಚ್‌ಗಳಿಗೆ ಆನ್‌ಲೈನ್‌ ತರಬೇತಿಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಇದು ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಕಾರಣವಾಗಿತ್ತು. ಕೋವಿಡ್‌–19 ಸೋಂಕು ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಐದು ತಿಂಗಳು ಸ್ಥಗಿತಗೊಂಡಿದ್ದೂ ಅವರ ರಾಜೀನಾಮೆ ನಿರ್ಧಾರಕ್ಕೆ ಕಾರಣವಾಯಿತು‘ ಎಂದು ಅಧಿಕಾರಿ ಹೇಳಿದ್ದಾರೆ.

ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದ ಬಳಿಕ ಜಾನ್‌ ಅವರು ನವದೆಹಲಿಯ ನಿವಾಸದಿಂದಲೇ ಕಾರ್ಯನಿರ್ವಹಿಸುತ್ತಿದ್ದರು.

ಹಾಕಿ ಇಂಡಿಯಾದೊಂದಿಗೆ ಜಾನ್‌ ಅವರು 2011ರಿಂದ ಕಾರ್ಯನಿರ್ವಹಿಸುತ್ತಿದ್ದರು. 2011ರಲ್ಲಿ ಅವರು ಪುರುಷರ ತಂಡಕ್ಕೆ ಫಿಸಿಯೊ ಆಗಿ ಸೇರಿಕೊಂಡಿದ್ದರು. ಮೈಕೆಲ್‌ ನಾಬ್ಸ್‌ ಮುಖ್ಯ ಕೋಚ್‌ ಆಗಿದ್ದರು.

ತಂಡದ ಆಟಗಾರರ ಫಿಟ್‌ನೆಸ್‌ ಮಟ್ಟವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಯದೊಂದಿಗೆ, ಲಂಡನ್‌ ಒಲಿಂಪಿಕ್ಸ್‌ ಬಳಿಕ 2012ರಲ್ಲಿ ಅವರು ಫಿಸಿಯೊ ಹುದ್ದೆ ತೊರೆದಿದ್ದರು. 2016ರಿಂದ ತಂಡದ ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ‌‌ ಆಗಿ ಮರಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು