ಗುರುವಾರ , ಅಕ್ಟೋಬರ್ 29, 2020
20 °C

ಸಮಾನ ಅವಕಾಶಗಳಿಂದ ಮಹಿಳಾ ತಂಡದ ಸಾಮರ್ಥ್ಯ ವೃದ್ಧಿ: ರಾಣಿ ರಾಂಪಾಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪುರುಷರ ತಂಡಕ್ಕೆ ನೀಡುವಷ್ಟು ಅವಕಾಶಗಳನ್ನು ನಮಗೂ ಒದಗಿಸಿದ್ದರಿಂದ ತಂಡದ ಸಾಮರ್ಥ್ಯ ವೃದ್ಧಿಯಾಗಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಅಭಿಪ್ರಾಯಪಟ್ಟಿದ್ದಾರೆ. 

ರಾಣಿ ಸೇರಿದಂತೆ ಕ್ರಿಕೆಟಿಗ ರೋಹಿತ್‌ ಶರ್ಮಾ, ಕುಸ್ತಿಪಟು ವಿನೇಶಾ ಪೋಗಟ್‌, ಟೇಬಲ್‌ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹಾಗೂ ಪ್ಯಾರಾಲಿಂಪಿಯನ್‌ ಹೈಜಂಪ್‌ ಪಟು ತಂಗವೇಲು ಮರಿಯಪ್ಪನ್‌ ಅವರು ಶನಿವಾರ ನಡೆದ ವರ್ಚುವಲ್‌ ಸಮಾರಂಭದಲ್ಲಿ ರಾಷ್ಟ್ರಪ‍ತಿ ರಾಮನಾಥ ಕೋವಿಂದ್‌ ಅವರಿಂದ ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದರು.

‘ನಾನು ಪದಾರ್ಪಣೆ ಮಾಡಿದಾಗಿನಿಂದ ಇದುವರೆಗೆ ಭಾರತ ಮಹಿಳಾ ಹಾಕಿಯಲ್ಲಿ ಹಲವು ಉತ್ತಮ ಮಾರ್ಪಾಡುಗಳಾಗಿವೆ. ನಾನು ಹಾಕಿ ಆಡಲು ಆರಂಭಿಸಿದಾಗ ಸೀಮಿತ ಟೂರ್ನಿಗಳಿದ್ದವು. ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳು ನಾವು ಆಡುವ ಪ್ರಮುಖ ಟೂರ್ನಿಗಳಾಗಿದ್ದವು. ಆದರೆ ಈಗ ಸನ್ನಿವೇಶವು ತೀರಾ ಬದಲಾಗಿದೆ‘ ಎಂದು ರಾಣಿ ಹೇಳಿದ್ದಾರೆ.

‘ಹಾಕಿ ಇಂಡಿಯಾ ಆಡಳಿತ ಮಂಡಳಿ ವರ್ಷಾದ್ಯಂತ ನಾವು ಹೆಚ್ಚು ಟೂರ್ನಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಇದು ನಮ್ಮ ತಂಡದ ಸಾಮರ್ಥ್ಯ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ ತಂಡದ ಜನಪ್ರಿಯತೆಯನ್ನೂ ಹೆಚ್ಚಿಸಿದೆ‘ ಎಂದರು.

ಹಾಕಿಯಲ್ಲಿ ಖೇಲ್‌ರತ್ನ ಪ್ರಶಸ್ತಿ ಗಳಿಸಿದ ಮೊದಲ ಆಟಗಾರ್ತಿ ರಾಣಿ. ಒಟ್ಟಾರೆ ಮೂರನೆಯವರು. ಈ ಮೊದಲು ಧನರಾಜ್‌ ಪಿಳ್ಳೈ ಹಾಗೂ ಸರ್ದಾರ್‌ ಸಿಂಗ್‌ ಅವರಿಗೆ ಈ ಪ್ರಶಸ್ತಿ ಸಂದಿದೆ.

‘ಕಳೆದ ಒಂದು ವಾರದಲ್ಲಿ, ಖೇಲ್‌ರತ್ನ ಪ್ರಶಸ್ತಿಗೆ ನನ್ನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದಾಗಿನಿಂದ ಇಲ್ಲಿಯವರೆಗೆಗಿನ ನನ್ನ ವೃತ್ತಿ ಪಯಣವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಮಹಿಳಾ ತಂಡಕ್ಕೂ ಪುರುಷರ ತಂಡದಷ್ಟೇ ಪ್ರಾಮುಖ್ಯತೆ ದೊರೆತಿದೆ ಎಂದು ನನಗನಿಸುತ್ತಿದೆ‘ ಎಂದು ರಾಣಿ ನುಡಿದರು.

ಪುರುಷರ ಹಾಕಿ ತಂಡದ ಫಾರ್ವರ್ಡ್‌ ಆಟಗಾರ ಆಕಾಶ್‌ದೀಪ್‌ ಸಿಂಗ್‌ ಈ ಬಾರಿಯ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು